ಫುಟ್‌ಪಾತ್‌ ಮೇಲಿನ ಅಂಗಡಿಗಳ ತೆರವು ಮಾಡಿ: ಶಾಸಕ ಶಿವರಾಮ ಹೆಬ್ಬಾರ

KannadaprabhaNewsNetwork |  
Published : Jul 03, 2024, 12:15 AM IST
ಗಾಂಧೀ ಕುಟೀರದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಯಲ್ಲಾಪುರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿಗಾಗಿ ಕೆಲವು ವರ್ಷಗಳ ಹಿಂದೆ ಕೈಗೊಂಡಿದ್ದ ಬೇಡ್ತಿ ನೀರು ಯೋಜನೆಗೆ ಬಳಸಲಾಗಿದ್ದ ಪಂಪ್‌ಸೆಟ್ ಮತ್ತಿತರ ಬೆಲೆಬಾಳುವ ಪರಿಕರಗಳು ಕಾಣೆಯಾಗುತ್ತಿರುವುದರ ಕುರಿತಾಗಿ ಸಭೆಯಲ್ಲಿ ಗಂಭೀರ ಪ್ರಸ್ತಾಪ ಬಂತು.

ಯಲ್ಲಾಪುರ: ಪಟ್ಟಣದ ಬಿಸಗೋಡು ಕತ್ರಿಯಿಂದ ಮಾಗೋಡು ಕತ್ರಿವರೆಗೆ ಸಾರ್ವಜನಿಕರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಫುಟ್‌ಪಾತ್ ನಿರ್ಮಿಸಬೇಕು. ಈಗಾಗಲೇ ಇದ್ದ ಫುಟ್‌ಪಾತ್ ಮೇಲೆ ಕಂಡ ಕಂಡಲ್ಲಿ ಅಂಗಡಿಗಳನ್ನು ನಿರ್ಮಿಸಲಾಗಿದೆ. ತಕ್ಷಣ ಎಲ್ಲ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರ ಆಗ್ರಹಕ್ಕೆ ಮಣಿದ ಶಾಸಕ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ತೆರವುಗೊಳಿಸುವಂತೆ ನಿರ್ದೇಶಿಸಿದರು.

ಪಟ್ಟಣದ ತಾಪಂ ಆವಾರದ ಗಾಂಧೀ ಕುಟೀರದಲ್ಲಿ ಜು. ೨ರಂದು ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪಟ್ಟಣದ ಉಪನೋಂದಣಿ ಕಚೇರಿಗೆ ೨ ಸಿಸಿ ಕ್ಯಾಮೆರಾ ಅಳವಡಿಸುವಂತೆ ಅಧಿಕಾರಿಗಳು ನೀಡಿದ್ದ ಮನವಿಯನ್ನು ಗಮನಿಸಿದ ಶಾಸಕರು, ತಕ್ಷಣ ಕ್ರಮ ಕೈಗೊಳ್ಳುವಂತೆ ದಂಡಾಧಿಕಾರಿಗಳಿಗೆ ಸೂಚನೆ ನೀಡಿದರು. ೨ ವರ್ಷಗಳ ಹಿಂದೆ ಕಳಚೆಯಲ್ಲಿ ಸಂಭವಿಸಿದ್ದ ಭೂಕುಸಿತದ ಪರಿಣಾಮದಿಂದಾಗಿ ಹಾನಿಗೊಂಡಿದ್ದ ರಸ್ತೆ ಮತ್ತು ವಿದ್ಯುತ್ ವ್ಯವಸ್ಥೆಗಳ ಕಾಮಗಾರಿಗಳು ಅಪೂರ್ಣಗೊಂಡಿವೆ ಎಂದು ಉಮೇಶ ಭಾಗ್ವತ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ಒಂದು ವಾರದೊಳಗೆ ವಿದ್ಯುತ್ ಸಂಪರ್ಕಕ್ಕೆ ಕ್ರಮ ಕೈಗೊಂಡು ನಿರಂತರ ವಿದ್ಯುತ್ ಇರುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಆದೇಶ ನೀಡಿದರು.

ತಾಲೂಕಿನ ಬಳಗಾರ ಗ್ರಾಮದ ಗೌರಿ ಗಣಪ ಸಿದ್ದಿ ಅವರು, ವಿದ್ಯುತ್ ಸಂಪರ್ಕ ಒದಗಿಸುವಂತೆ; ಗುಳ್ಳಾಪುರದ ಹುಲಿಕೋಣೆಯ ಸಾರ್ವಜನಿಕರು ನೀರಾವರಿ ಪಂಪ್‌ಸೆಟ್‌ಗಳಿಗೆ ಸಂಪರ್ಕ ನೀಡುವಂತೆ ಆಗ್ರಹಿಸಿದರು.

ಕಿರವತ್ತಿಯಿಂದ ಯಲ್ಲಾಪುರಕ್ಕೆ ನೀಡಲಾಗುತ್ತಿರುವ ವಿದ್ಯುತ್ ಸಂಪರ್ಕ ಕಡಿತಗೊಂಡ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ನಾಗರಾಜ ಮದ್ಗುಣಿ ಮನವಿ ಮಾಡಿದರು. ಯಡಳ್ಳಿಯ ಎಂ.ಕೆ. ಭಟ್ಟ- ಉಮ್ಮಚಗಿಯಿಂದ ಮಂಚೀಕೇರಿವರೆಗೆ ನಿರ್ಮಿಸಲಾಗಿದ್ದ ವಿದ್ಯುತ್ ಮಾರ್ಗವೊಂದು ವ್ಯರ್ಥವಾಗುತ್ತಿದ್ದು, ಇದನ್ನು ಸರಿಪಡಿಸುವಂತೆ ವಿನಂತಿಸಿದರು.

ಹಂಗಾಮಿ ಲಾಗಣಿಯಾಗಿ ಮಂಜೂರಿಗೊಂಡ ಅನೇಕ ಅರಣ್ಯ ಭೂಮಿಗಳನ್ನು ಮಾರಾಟ ಮಾಡುತ್ತಿರುವ ಕುರಿತಾಗಿ ನಾಗರಾಜ ಮದ್ಗುಣಿ ಸಭೆಯ ಗಮನ ಸೆಳೆದರು. ತಹಸೀಲ್ದಾರ್‌ ಅಶೋಕ ಭಟ್ಟ ಇದಕ್ಕೆ ಪ್ರತಿಕ್ರಿಯೆ ನೀಡಿ, ನಿಯಮಾನುಸಾರ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.

ಪಟ್ಟಣ ವ್ಯಾಪ್ತಿಯಲ್ಲಿ ಕೃಷಿ ಭೂಮಿಯನ್ನು ಸೈಟ್‌ಗಳಾಗಿ ಪರಿವರ್ತನೆ ಮಾಡಿ, ಲೇಔಟ್ ನಿರ್ಮಾಣಕ್ಕೆ ಬಳಕೆಯಾಗುತ್ತಿರುವ ಕುರಿತಾಗಿಯೂ ಆಕ್ಷೇಪ ವ್ಯಕ್ತಗೊಂಡಾಗ, ನಿಯಮಾನುಸಾರ ಯಾವುದೇ ಕಾನೂನು ತೊಡಕು ಬಾರದ ರೀತಿಯಲ್ಲಿ ಸೈಟ್‌ಗಳನ್ನು ಖರೀದಿಸಿದ ಗ್ರಾಹಕರಿಗೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಪಪಂ ಮುಖ್ಯಾಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿ; ಸೈಟ್ ಖರೀದಿಸುವ ಮುನ್ನ ಗ್ರಾಹಕರು ಎಚ್ಚರ ವಹಿಸಬೇಕು ಎಂದು ಹೇಳಿ, ಇಂತಹ ಯಾವುದೇ ಪ್ರಕರಣಗಳು ಕಂಡುಬಂದರೆ ಜಂಟಿ ಸರ್ವೇ ನಂತರವೇ ಅನುಮತಿ ನೀಡುವಂತೆ ಸೂಚನೆ ನೀಡಿದರು.

ತಾಲೂಕಿನ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಅದರಲ್ಲೂ ಮಾಗೋಡು ಜಲಪಾತಕ್ಕೆ ಹೋಗುವ ಪ್ರವಾಸಿಗರಿಗೆ ೨ ಕಡೆ ಹಣ ವಸೂಲಿ ಮಾಡಲಾಗುತ್ತಿದೆ. ಅಲ್ಲದೇ ರಸ್ತೆ ತೀರಾ ಹಾಳಾಗಿದ್ದರೂ ಪಂಚಾಯಿತಿಯವರು ಗಮನ ಹರಿಸುತ್ತಿಲ್ಲವೆಂದು ಆಕ್ಷೇಪ ವ್ಯಕ್ತವಾಯಿತು. ಅಲ್ಲದೇ, ಈ ಶುಲ್ಕವನ್ನು ಪಡೆದ ಅಧಿಕಾರಿಗಳು ಆಯಾ ಪ್ರದೇಶದ ಯಾವುದೇ ಅಭಿವೃದ್ಧಿಯ ಕಡೆ ಗಮನ ಹರಿಸುತ್ತಿಲ್ಲ. ಅನಧಿಕೃತವಾಗಿ ಶುಲ್ಕ ವಸೂಲಿ ಮಾಡುತ್ತಿರುವುದು ಅಸಮಂಜಸ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಆದೇಶ ಬರುವ ತನಕ ಪ್ರವಾಸಿಗರಿಂದ ಯಾವುದೇ ಶುಲ್ಕವನ್ನು ವಸೂಲಿ ಮಾಡದಂತೆ ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದರು.

ಯಲ್ಲಾಪುರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿಗಾಗಿ ಕೆಲವು ವರ್ಷಗಳ ಹಿಂದೆ ಕೈಗೊಂಡಿದ್ದ ಬೇಡ್ತಿ ನೀರು ಯೋಜನೆಗೆ ಬಳಸಲಾಗಿದ್ದ ಪಂಪ್‌ಸೆಟ್ ಮತ್ತಿತರ ಬೆಲೆಬಾಳುವ ಪರಿಕರಗಳು ಕಾಣೆಯಾಗುತ್ತಿರುವುದರ ಕುರಿತಾಗಿ ಸಭೆಯಲ್ಲಿ ಗಂಭೀರ ಪ್ರಸ್ತಾಪ ಬಂತು. ಈ ಕುರಿತು ಅಲಕ್ಷ್ಯ ತೋರದೇ ಹೆಸ್ಕಾಂ ಮತ್ತು ಪಪಂ ಅಧಿಕಾರಿಗಳು ತಕ್ಷಣ ಅದನ್ನು ಇಲಾಖೆಯ ಸುಪರ್ಧಿಗೆ ಪಡೆಯುವಂತೆ ಶಾಸಕರು ಖಡಕ್ ಎಚ್ಚರಿಕೆ ನೀಡಿದರು.

ತಹಸೀಲ್ದಾರ್‌ ಅಶೋಕ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇಡಗುಂದಿ ಗ್ರಾಪಂ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಪಪಂ ಮಾಜಿ ಅಧ್ಯಕ್ಷೆ ಸುನಂದಾ ದಾಸ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿ ಎನ್.ಆರ್. ಹೆಗಡೆ, ವಿವಿಧ ಗ್ರಾಪಂಗಳ ಅಧ್ಯಕ್ಷರು ವೇದಿಕೆಯಲ್ಲಿದ್ದರು. ಸ್ಥಳದಲ್ಲೇ 16 ಅರ್ಜಿ ವಿಲೇವಾರಿ

ಜನಸ್ಪಂದನ ಸಭೆಯಲ್ಲಿ ಸಮಸ್ಯೆಗಳ ಪರಿಹಾರಕ್ಕಾಗಿ ೨೨ ಲಿಖಿತ ಮನವಿಗಳು ಸ್ವೀಕೃತಗೊಂಡಿದ್ದು, ೧೬ ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಯಿತು. ಹಳ್ಳದಂತಾಗುವ ರಸ್ತೆಗಳು

ಪಟ್ಟಣದ ಅನೇಕ ಕಡೆ ರಸ್ತೆ ಮೇಲೆ ಹಳ್ಳದ ಹಾಗೆ ಮಳೆ ಬಂದಾಗ ನೀರು ತುಂಬಿ ಹರಿಯುತ್ತದೆ. ಗಟಾರಕ್ಕೆ ನೀರು ಹರಿಯುವಂತೆ ವ್ಯವಸ್ಥೆ ಮಾಡುವಲ್ಲಿ ಪಪಂ ನಿರ್ಲಕ್ಷಿಸಿದೆ ಎಂದು ಸಾರ್ವಜನಿಕರು ಆರೋಪಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕ ಶಿವರಾಮ ಹೆಬ್ಬಾರ್‌ ಅವರು, ತಕ್ಷಣ ರಸ್ತೆಯ ಮೇಲೆ ನೀರು ನಿಲ್ಲದಂತೆ, ಗಟಾರಗಳಲ್ಲಿ ತುಂಬಿರುವ ಹೂಳನ್ನು ತಕ್ಷಣ ತೆಗೆಸುವಂತೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ