ಧಾರವಾಡ:
ಇಲ್ಲಿಯ ಕೋರ್ಟ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ 20ಕ್ಕೂ ಹೆಚ್ಚು ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ನಡೆಸಿದ ಗ್ರಾಮಸ್ಥರು, ರೈತರಿಗೆ ಬೆದರಿಕೆ ಹಾಕುವ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. 95 ವರ್ಷದ ಅಜ್ಜಿ ಸೇರಿದಂತೆ ಗ್ರಾಮದ ಬಹುತೇಕ ಎಲ್ಲ ಕುಟುಂಬಗಳ ಸದಸ್ಯರು ಟ್ರ್ಯಾಕ್ಟರ್‌ಗಳಲ್ಲಿ ಬಂದು ಹೋರಾಟ ಮಾಡಿದ್ದು ಸಮಸ್ಯೆಯ ಗಂಭೀರತೆ ತೋರುತ್ತಿತ್ತು.
ಸೂರಶೆಟ್ಟಿಕೊಪ್ಪದ ಸರ್ವೇ ನಂ-126ರ 84.22 ಎಕರೆ ಜಮೀನು ಸರ್ಕಾರ ಗೋಮಾಳಕ್ಕೆ ಮೀಸಲಟ್ಟಿದೆ. ಇದು ದನಕರು ಮೇಯಿಸಲು ಮೀಸಲಿಟ್ಟಿರುವ ಭೂಮಿ. ಕೆಲ ಪಟ್ಟಭದ್ರ ಹಿತಾಶಕ್ತಿಗಳು ಆಕ್ರಮಿಸಿಕೊಂಡು ಕೃಷಿ ಸೇರಿದಂತೆ ವಾಣಿಜ್ಯ ಕಾರ್ಯಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ಹುಲ್ಲುಗಾವಲು ಪ್ರದೇಶ ನಂಬಿ ಜಾನುವಾರು ಸಾಕಿದ ರೈತರು, ಹೈನುಗಾರಿಕೆ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಹುಲ್ಲುಗಾವಲು ಕೃಷಿಗೆ ಬಳಸದಂತೆ ಸುಪ್ರೀಂಕೋರ್ಟ್ ಆದೇಶವಿದ್ದರೂ, ಅಕ್ರಮವಾಗಿ ಸಾಗುವಳಿ ಮಾಡಲಾಗುತ್ತಿದೆ. ಗೋಮಾಳ ಅತಿಕ್ರಮಣದ ಬಗ್ಗೆ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಬದಲಾಗಿ ಗ್ರಾಮಸ್ಥರಿಗೆ ಬೆದರಿಕೆ ಹಾಕಲಾಗುತ್ತಿದೆ. ತಕ್ಷಣವೇ ಒತ್ತುವರಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ದನಕರುಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.ಗ್ರಾಮಸ್ಥರಾದ ಉಳವನಗೌಡ ಮುರಳ್ಳಿ, ನಿಂಗನಗೌಡ ಮುರಳ್ಳಿ, ಗಂಗನಗೌಡ ಮುರಳ್ಳಿ ಆನಂದಗೌಡ ಪಾಟೀಲ, ಹನುಮಂತಪ್ಪ ದೊಡ್ಡಮನಿ, ಮಂಜುನಾಥ ಶೀಲವಂತರ, ವಿರಭದ್ರಪ್ಪ ಬೆಣ್ಣಿ, ಮುತ್ತಪ್ಪ ಪಿರಪ್ಪನವರ ಮಂಜುನಾಥ ಬೆಣ್ಣಿ, ಸಂಗಪ್ಪ ಅಂಬಿಗೇರ ಇದ್ದರು.