ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರು ಸರ್ಕಾರ ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ನಿರ್ದೇಶನ ನೀಡಿದರು.
ಗ್ಯಾರಂಟಿ ಯೋಜನೆಗಳಿಂದ ಅರ್ಹರು ವಂಚಿತರಾಗದಂತೆ ಗಮನಹರಿಸುವುದು ಅಧಿಕಾರಿಗಳ ಜವಾಬ್ದಾರಿ ಆಗಿದೆ. ಆ ನಿಟ್ಟಿನಲ್ಲಿ ಸರ್ಕಾರದ ಉದ್ದೇಶ ಮತ್ತು ಆಶಯದಂತೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವಂತೆ ಸಲಹೆ ಮಾಡಿದರು.ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಹೀಗೆ ಪಂಚ ಯೋಜನೆಗಳು ತಲುಪಿದಾಗ ಸರ್ಕಾರಕ್ಕೆ ಹೆಸರು ಬರಲಿದೆ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಕುಶಾಲನಗರ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ ಅವರು ಮಾತನಾಡಿ ಯುವನಿಧಿ ಯೋಜನೆಯಡಿ ಸಲ್ಲಿಕೆ ಆಗಿರುವ ಬಾಕಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸಲಹೆ ಮಾಡಿದರು.
ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದಾ ಶರತ್ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ 1.30 ಲಕ್ಷ ಗುರಿಯಲ್ಲಿ 97, 570 ಜನರಿಗೆ ಅನ್ನಭಾಗ್ಯ ಯೋಜನೆಯಡಿ ಹಣ ಪಾವತಿಯಾಗುತ್ತಿದ್ದು, ಶೇ. 98 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜು ಅವರು ಗೃಹಲಕ್ಷ್ಮಿ ಯೋಜನೆ ಸಂಬಂಧಿಸಿದಂತೆ ಮಾಹಿತಿ ನೀಡಿ ಜೂನ್‌ವರೆಗೆ ಹಣ ಪಾವತಿಯಾಗಿದ್ದು, ಜುಲೈ ತಿಂಗಳ ಹಣ ಪಾವತಿಗೆ ಬಾಕಿ ಇದೆ ಎಂದು ತಿಳಿಸಿದರು.
ಸೆಸ್ಕ್ ಎಇಇ ವಿನಯ್ ಕುಮಾರ್ ಅವರು ಕೊಡಗು ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 1,53,623 ಕುಟುಂಬಗಳಲ್ಲಿ 1,51,907 ಕುಟುಂಬಗಳು ನೋಂದಣಿಯಾಗಿದ್ದು, ಶೇ.98.88 ರಷ್ಟು ಪ್ರಗತಿ ಸಾಧಿಸಲಾಗಿದ್ದು, ಮೇ, ಅಂತ್ಯದವರೆಗೆ 5905.30 ಲಕ್ಷ ರು. ಸಹಾಯಧನ ಕಲ್ಪಿಸಲಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಘಟಕದ ಅಧ್ಯಕ್ಷರಾದ ಮೋಹನ್‌ದಾಸ್(ಮಡಿಕೇರಿ), ಜಾನ್ಸನ್(ವಿರಾಜಪೇಟೆ) ಇತರರು ಇದ್ದರು.