ಪಾಲಿಟೆಕ್ನಿಕ್ ಆವರಣದಲ್ಲಿ ಮುಚ್ಚಿರುವ ಸಾರ್ವಜನಿಕ ರಸ್ತೆ ತೆರವುಗೊಳಿಸಿ

KannadaprabhaNewsNetwork |  
Published : Oct 23, 2024, 12:33 AM ISTUpdated : Oct 23, 2024, 12:34 AM IST
22ಕೆಎಂಎನ್ ಡಿ15 | Kannada Prabha

ಸಾರಾಂಶ

ಪರಿಶಿಷ್ಟ ಜಾತಿ/ವರ್ಗದ ಜನರು ಸೇರಿ ನೂರಾರು ರೈತರ ಕೃಷಿ ಭೂಮಿ ಇರುವ ರಸ್ತೆಯನ್ನು ಪಾಲಿಟೆಕ್ನಿಕ್ ಸಂಸ್ಥೆಯವರು ಮುಚ್ಚಿ ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದಾರೆ. ಇದರಿಂದ ದಲಿತ ಸಮುದಾಯದ ಜನ ಸೇರಿದಂತೆ ರೈತರು ಸತ್ತವರ ಶವ ತೆಗೆದುಕೊಂಡು ಹೋಗಲು ನಾಲ್ಕು ಕಿಮೀ ಸುತ್ತಿ ಬರಬೇಕಾಗಿದೆ. ಕೂಡಲೇ ಪಾಲಿಟೆಕ್ನಿಕ್ ಆವರಣದೊಳಗೆ ಸೂಕ್ತ ಜಾಗ ಗುರುತಿಸಿ ಹೊಸ ರಸ್ತೆ ನಿರ್ಮಿಸಿಕೊಡಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಮುಚ್ಚಿರುವ ಸಾರ್ವಜನಿಕ ರಸ್ತೆ ತೆರವುಗೊಳಿಸಿ, ತಾಲೂಕಿನ ಪ್ರತಿ ಇಲಾಖೆಯಲ್ಲಿ ಎಸ್.ಸಿ.ಪಿ, ಟಿ.ಎಸ್.ಪಿ ಅನುದಾನ ಬಳಸಿ ಪರಿಶಿಷ್ಟ ಜಾತಿ, ವರ್ಗದ ಕಾರ್ಯಕ್ರಮಗಳ ಅನುಷ್ಟಾನ ಮಾಹಿತಿ ನೀಡುವಂತೆ ದಲಿತ ಮುಖಂಡ ಹಾಗೂ ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್ ಆಗ್ರಹಿಸಿದರು.

ಪಟ್ಟಣದ ಚಿಕ್ಕೋನಹಳ್ಳಿ ಬಳಿಯ ಸರ್ಕಾರಿ ರೇಷ್ಮೆ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತದಿಂದ ನಡೆದ ಪರಿಶಿಷ್ಟ ಜಾತಿ/ವರ್ಗದ ತಾಲೂಕು ಮಟ್ಟದ ಹಿತರಕ್ಷಣಾ ಸಮಿತಿಯ ಸಭೆಯಲ್ಲಿ ಮಾತನಾಡಿದರು.

ಪರಿಶಿಷ್ಟ ಜಾತಿ/ವರ್ಗದ ಜನರು ಸೇರಿ ನೂರಾರು ರೈತರ ಕೃಷಿ ಭೂಮಿ ಇರುವ ರಸ್ತೆಯನ್ನು ಪಾಲಿಟೆಕ್ನಿಕ್ ಸಂಸ್ಥೆಯವರು ಮುಚ್ಚಿ ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದಾರೆ. ಇದರಿಂದ ದಲಿತ ಸಮುದಾಯದ ಜನ ಸೇರಿದಂತೆ ರೈತರು ಸತ್ತವರ ಶವ ತೆಗೆದುಕೊಂಡು ಹೋಗಲು ನಾಲ್ಕು ಕಿಮೀ ಸುತ್ತಿ ಬರಬೇಕಾಗಿದೆ. ಕೂಡಲೇ ಪಾಲಿಟೆಕ್ನಿಕ್ ಆವರಣದೊಳಗೆ ಸೂಕ್ತ ಜಾಗ ಗುರುತಿಸಿ ಹೊಸ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿದರು.

ತಾಲೂಕಿನ ಯಾವುದೇ ಸರ್ಕಾರಿ ಇಲಾಖೆಗಳು ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನ ಬಳಸಿ ಪರಿಶಿಷ್ಟ ಜಾತಿ/ವರ್ಗದ ಕಾರ್ಯಕ್ರಮಗಳ ಅನುಷ್ಟಾನ ಮಾಹಿತಿ ನೀಡುತ್ತಿಲ್ಲ. ದಲಿತರ ಅಭಿವೃದ್ಧಿಗೆ ಹಣ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ದೂರಿದರು.

ತಾಲೂಕು ವ್ಯಾಪ್ತಿ ಮರಳು ಮತ್ತಿತರ ಗಣಿಗಾರಿಕೆಯಲ್ಲಿ ಪರಿಶಿಷ್ಟ ಜಾತಿ/ವರ್ಗದ ನಿರುದ್ಯೋಗಿ ಯುವಕರಿಗೆ ಅವಕಾಶ ನೀಡಬೇಕು. ಪಟ್ಟಣದ ಸರ್ವೇ 193ರಲ್ಲಿ ಉಳಿದಿರುವ 5 ಗುಂಟೆ ಜಾಗವನ್ನು ಬುದ್ಧ ಭವನ ನಿರ್ಮಿಸಲು ನೀಡಬೇಕು ಎಂದು ಆಗ್ರಹಿಸಿದರು.

ಪ್ರವಾಸಿ ಮಂದಿರ ವೃತ್ತದ ಲೋಕೋಪಯೋಗಿ ಇಲಾಖೆ ಜಾಗದಲ್ಲಿ ಖಾಸಗಿ ವ್ಯಕ್ತಿಗೆ ನಂದಿನಿ ಹಾಲಿನ ಕೇಂದ್ರ ತೆರೆಯಲು ಜಾಗ ನೀಡಿದ್ದೀರಿ. ಅದೇ ಮಾದರಿಯಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಜಾಗ ನೀಡಬೇಕು. ನಿರ್ವಹಣಾ ಕೊರತೆ ಎದುರಿಸುತ್ತಿರುವ ತಾಲೂಕಿನ ಅಂಬೇಡ್ಕರ್ ಭವನಗಳನ್ನು ಗ್ರಾಪಂಗೆ ನಿರ್ವಹಣೆಗೆ ವಹಿಸಿಕೊಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಆರ್.ಬನ್ನಾರಿ ಮಾತನಾಡಿ, ಪೌರ ಕಾರ್ಮಿಕರು ಮತ್ತು ಆದಿ ದ್ರಾವಿಡ ಸಮುದಾಯ ನೆಮ್ಮದಿಯಿಂದ ಬದುಕಲು ಸ್ವಂತ ಸೂರಿಗಾಗಿ ನಿವೇಶನ ನೀಡಬೇಕು. ಅಲ್ಲಿಯವರೆಗೆ ಪೌರಕಾರ್ಮಿಕರ ದಿನಾಚರಣೆ ಆಚರಿಸದಿರಲು ನಿರ್ಧರಿಸಲಾಗಿದೆ ಎಂದರು.

ಪರಿಶಿಷ್ಟ ಜಾತಿ/ವರ್ಗದ ಮೇಲಿನ ದೌರ್ಜನ್ಯದ ಪ್ರಕರಣಗಳು, ಭೂ ವಿವಾದಗಳು ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಮುಖಂಡರು ಪ್ರಸ್ತಾಪಿಸಿದರು. ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಶಾಸಕ ಎಚ್.ಟಿ.ಮಂಜು, ಪಾಲಿಟೆಕ್ನಿಕ್ ಒಳಗಿನ ರೈತರ ರಸ್ತೆ ಬಿಡಿಸಲು ನಾನು ಈಗಾಗಲೇ ತಾಂತ್ರಿಕ ಶಿಕ್ಷಣ ಇಲಾಖೆ ಕಮೀಷರ್ ಅವರನ್ನು ಸಂಪರ್ಕಿಸಿದ್ದೇನೆ ಎಂದರು.

ಚುನಾವಣೆ ವೇಳೆ ಮಾತ್ರ ನಾನು ಜೆಡಿಎಸ್ ಪಕ್ಷದ ಮುಖಂಡ. ಈಗ ಕ್ಷೇತ್ರದ ಎಲ್ಲಾ ಜನರಿಗೂ ನಾನು ಶಾಸಕ. ತಾಲೂಕಿನ ಎಲ್ಲಾ ಸಮುದಾಯಗಳ ಹಿತರಕ್ಷಣೆ ನನ್ನ ಮೊದಲ ಆದ್ಯತೆ. ಜಾತಿ ಸಂಘರ್ಷ ಬೇಡ. ಸರ್ಕಾರಿ ಸವಲತ್ತುಗಳು ಸಕಾಲದಲ್ಲಿ ಎಲ್ಲಾ ಸಮುದಾಯಗಳಿಗೂ ತಲುಪುವಂತೆ ನಾನು ಕೆಲಸ ಮಾಡುತ್ತೇನೆ ಎಂದರು.

ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಮಾತನಾಡಿದರು. ಸಭೆಯಲ್ಲಿ ತಾಪಂ ಇಒ ಕೆ.ಸುಷ್ಮಾ, ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಪಿಎಸ್ ಐಗಳಾದ ನವೀನ್, ಸುಬ್ಬಯ್ಯ, ಕಿಕ್ಕೇರಿ ಠಾಣೆ ಎ.ಎಸ್.ಐ ರಮೇಶ್, ಮುಖಂಡರಾದ ಬಸ್ತಿ ರಂಗಪ್ಪ, ರಾಜಯ್ಯ, ಮಂಬಳ್ಳಿ ಜಯರಾಂ, ಚಿಕ್ಕಗಾಡಿಗನಹಳ್ಳಿ ಸಂತೋಷ್, ಜಕ್ಕನಹಳ್ಳಿ ರಾಜೇಶ್, ಹರಿಹರಪುರ ನರಸಿಂಹ, ಕಿಕ್ಕೇರಿ ರಾಜಣ್ಣ, ಗಂಗಾಧರ್, ವಿಷ್ನೂ ಮಂಜು, ಸುರೇಶ್ ಹರಿಜನ, ಬಂಡಿಹೋಳೆ ರಮೇಶ್, ಹೊಸಹೊಳಲು ಪುಟ್ಟರಾಜು ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ
ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ