ಕನ್ನಡಪ್ರಭ ವಾರ್ತೆ, ತುಮಕೂರು ಜಿಲ್ಲಾ ಮಟ್ಟದ ಅಫೆಕ್ಸ್ ಸಮಿತಿ ಸಭೆ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಜಿಲ್ಲೆಯ ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯ ಒಟ್ಟು 2047 ಕೆರೆಗಳ ಸ್ಥಿತಿಗತಿಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು. ಕೆರೆಗಳ ಸರ್ವೇ ಪ್ರಗತಿ, ಸರ್ವೇ ಬಾಕಿ ಇರುವ ಕೆರೆಗಳ ವಿವರ, ಒತ್ತುವರಿ ಪ್ರದೇಶಗಳ ಗುರುತಿಸುವಿಕೆ, ಈಗಾಗಲೇ ತೆರವುಗೊಳಿಸಿರುವ ಹಾಗೂ ಇನ್ನೂ ತೆರವುಗೊಳಿಸಬೇಕಿರುವ ಒತ್ತುವರಿಗಳ ಕುರಿತು ಇಲಾಖಾವಾರು ಮಾಹಿತಿ ಪಡೆದುಕೊಳ್ಳಲಾಯಿತು.ಕೆರೆಗಳ ಒತ್ತುವರಿ ತೆರವು ಕಾರ್ಯವನ್ನು ತ್ವರಿತಗೊಳಿಸುವುದರ ಜೊತೆಗೆ, ಗುರುತಿಸಲಾದ ಒತ್ತುವರಿ ಪ್ರದೇಶಗಳ ನಿಖರ ವಿವರಗಳನ್ನು ಮುಂದಿನ ಸಭೆಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಈಗಾಗಲೇ ಗುರುತಿಸಲಾದ ಕೆರೆಗಳನ್ನು ರಕ್ಷಣಾತ್ಮಕ ಕ್ರಮಗಳ ಮೂಲಕ ಇಲಾಖೆಗಳು ಸಂಪೂರ್ಣ ವಶಕ್ಕೆ ಪಡೆದು ಸಂರಕ್ಷಿಸಬೇಕೆಂದರು.ಕೆರೆಗಳಿಗೆ ರಾಸಾಯನಿಕ ತ್ಯಾಜ್ಯ, ಮಲಿನ ನೀರು ಹಾಗೂ ಇತರೆ ಮಾಲಿನ್ಯಕಾರಿ ಅಂಶಗಳು ಸೇರುವುದನ್ನು ಕಟ್ಟುನಿಟ್ಟಾಗಿ ತಡೆಯುವಂತೆ ಸೂಚಿಸಲಾಯಿತು. ತುಮಕೂರು ಅಮಾನಿಕೆರೆಗೆ ಕಲುಷಿತ ನೀರು ಸೇರುತ್ತಿರುವುದು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಗೆ ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಲು ನಿರ್ದೇಶನ ನೀಡಿದರು. ಕುಡಿಯುವ ನೀರಿನ ಮೂಲಗಳ ಸಂರಕ್ಷಣೆ ಹಾಗೂ ನೀರಿನ ಗುಣಮಟ್ಟ ಕಾಪಾಡುವ ವಿಚಾರದಲ್ಲಿ ತುಮಕೂರು ಆಯಾ ಇಲಾಖೆ, ಪ್ರಾಧಿಕಾರಗಳು ನಿಯಮಾನುಸಾರ ಕ್ರಮವಹಿಸಬೇಕೆಂದು ತಿಳಿಸಿದರು.
ಈ ಮಹತ್ವದ ಯೋಜನೆಯ ಉದ್ಘಾಟನೆಯನ್ನು ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನೆರವೇರಿಸಲು ದಿನಾಂಕ ನಿಗದಿಪಡಿಸಲಾಗುವುದು ಎಂದು ಅವರು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸಂಜೀವಕುಮಾರ್ ಉಪಸ್ಥಿತರಿದ್ದರು.