ಕನ್ನಡಪ್ರಭ ವಾರ್ತೆ ಕೋಲಾರನಗರಸಭೆಗೆ ಸೇರಿದ ಕೋಟ್ಯತರ ಮೌಲ್ಯದ ಸುಮಾರು ೭ ಎಕರೆಗೂ ಹೆಚ್ಚು ಭೂಮಿಯನ್ನು ಕೆಲವು ಪಟ್ಟಭದ್ರ ಹಿತಸಕ್ತರು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವುದನ್ನು ನಗರಸಭೆ ಸದಸ್ಯ ಪ್ರವೀಣಗೌಡ ಪತ್ತೆ ಹಚ್ಚಿ ನೀಡಿದ ದೂರಿನ ಮೇರೆಗೆ ಶುಕ್ರವಾರ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಪೌರಾಯುಕ್ತ ಪ್ರಸಾದ್ ಮತ್ತು ಸರ್ವೆ ಇಲಾಖೆಯ ಸಿಬ್ಬಂದಿಯೊಂದಿಗೆ ಸ್ಥಳ ಪರಿಶೀಲನೆ ಮಾಡಿ, ಸರ್ವೇಕಾರ್ಯ ನಡೆಸಿ ಫೆನ್ಸಿಂಗ್ ಅಳವಡಿಸಲು ಕ್ರಮ ಕೈಗೊಂಡರು.ನಗರದ ಹೊರವಲಯದ ಅಂತರಗಂಗೆ ಬೆಟ್ಟದ ಸಮೀಪದ ಖಾದ್ರಿಪುರ ವಾರ್ಡಿಗೆ ಸೇರಿದ ಸರ್ವೇ ಸಂಖ್ಯೆ ೩೦/೨ ರಲ್ಲಿ ೦.೩೯ ಗುಂಟೆ, ಸರ್ವೇ ಸಂಖ್ಯೆ ೨೯ರಲ್ಲಿ ೧.೧೯ ಎಕರೆ, ಸರ್ವೇ ಸಂಖ್ಯೆ ೩೩/೨ಎ ರಲ್ಲಿ ೧,೩೦ ಎಕರೆ, ಸರ್ವೇ ಸಂಖ್ಯೆ ೩೪/೧ರಲ್ಲಿ ೨.೧೫ ಎಕರೆ ಹಾಗೂ ಸರ್ವೇ ಸಂಖ್ಯೆ ೩೪/೨ರಲ್ಲಿ ೨.೦೬ ಎಕರೆ ಸೇರಿದಂತೆ ಒಟ್ಟು ೮,೨೯ ಎಕರೆ ನಗರಸಭೆಯ ಸ್ವತ್ತಾಗಿದೆ. ಈ ಜಾಗವನ್ನು ಪಟ್ಟಭದ್ರ ಹಿತಾಸಕ್ತರು ನಗರಸಭೆಯ ಸಿಬ್ಬಂದಿಗಳನ್ನು ಆಮಿಷಕ್ಕೆ ಒಳಪಡಿಸಿ ಅಕ್ರಮವಾಗಿ ಖಾತೆಗಳನ್ನು ಸೃಷ್ಠಿಸಿಕೊಂಡು ನಿವೇಶನಗಳಿಗೆ ಹಾಕಿಕೊಂಡಿರುವ ಕಾಂಪೌಂಡ್‌ಗಳನ್ನು ತೆರವು ಮಾಡುವ ಕಾರ್ಯಾಚರಣೆ ಆರಂಭಿಸಲಾಗಿದೆ. ಜಾಗಕ್ಕೆ ಬೇಲಿ ಹಾಕಲು ಕ್ರಮ
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಸದಸ್ಯ ಪ್ರವೀಣ್ ಗೌಡ, ಈ ಆಸ್ತಿಯಲ್ಲಿ ವಸತಿ ಸೌಲಭ್ಯ ಇಲ್ಲದವರಿಗೆ ಹಂಚಿಕೆ ಮಾಡಲು ನಗರಸಭೆಯು ಜಿಲ್ಲಾಡಳಿತದೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಪತ್ರಕರ್ತರಿಗೆ ತಿಳಿಸಿದರು.
.