ಬೇಲೂರಿನಲ್ಲಿ ಪುರಸಭೆಯಿಂದ ಫುಟ್‌ಪಾತ್‌ ಒತ್ತುವರಿ ತೆರವು

KannadaprabhaNewsNetwork |  
Published : Jun 13, 2024, 12:58 AM IST
12ಎಚ್ಎಸ್ಎನ್6 : ಪುರಸಭೆಯ ಪೌರ ಕಾರ್ಮಿಕರು ರಸ್ತೆಬದಿ ಇದ್ದ ಗೂಡಂಗಡಿಗಳನ್ನು ತೆರವು ಮಾಡುತ್ತಿರುವುದು. | Kannada Prabha

ಸಾರಾಂಶ

ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರ ಓಡಾಟಕ್ಕೆ ತೊಡಕಾಗಿದ್ದ ಗೂಡಂಗಡಿ ಹಾಗೂ ಶೆಡ್‌ಗಳನ್ನು ಬೇಲೂರಿನ ಪುರಸಭೆ ವತಿಯಿಂದ ಬುಧವಾರ ತೆರವುಗೊಳಿಸಲಾಯಿತು.

ದೇವಾಲಯ, ಮುಖ್ಯ ರಸ್ತೆಯ ಪಾದಚಾರಿ ಮಾರ್ಗದಲ್ಲಿದ್ದ ಗೂಡಂಗಡಿ, ಶೆಡ್‌ಗಳು । ಸಾರ್ವಜನಿಕರಿಗೆ ತೊಂದರೆ । ಪುರಸಭೆ ಕ್ರಮ

ಕನ್ನಡಪ್ರಭ ವಾರ್ತೆ ಬೇಲೂರು

ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಸಾರ್ವಜನಿಕರ ಓಡಾಟಕ್ಕೆ ತೊಡಕಾಗಿದ್ದ ಗೂಡಂಗಡಿ ಹಾಗೂ ಶೆಡ್‌ಗಳನ್ನು ಪುರಸಭೆ ವತಿಯಿಂದ ಬುಧವಾರ ತೆರವುಗೊಳಿಸಲಾಯಿತು.

ಪಟ್ಟಣದ ದೇವಾಲಯ ರಸ್ತೆ ಹಾಗೂ ಮುಖ್ಯ ರಸ್ತೆಗಳಲ್ಲಿ ಫುಟ್‌ಪಾತ್ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದರು. ಕಬ್ಬು, ಕಲ್ಲಂಗಡಿ, ಎಳೆನೀರು, ಪಾನಿಪುರಿ ತ್ಯಾಜ್ಯಗಳನ್ನು ಚರಂಡಿ ಒಳಗೆ ಹಾಗೂ ರಸ್ತೆಗಳಲ್ಲಿ ಸುರಿಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮಲೇರಿಯಾ, ಡೆಂಘೀ, ಚಿಕನ್‌ಗುನ್ಯಾದಂತ ಮಾರಕ ಕಾಯಿಲೆಗಳು ಹೆಚ್ಚಾಗಿ ಕಾಣಿಸುತ್ತಿರುವುದರಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಹಾಗೂ ಜಿಲ್ಲಾಧಿಕಾರಿ ಸೂಚನೆಯಂತೆ ತೆರವುಗೊಳಿಸಲಾಯಿತು ಎಂದು ಮುಖ್ಯ ಅಧಿಕಾರಿ ತಿಳಿಸಿದರು.

ಪುರಸಭೆ ಸದಸ್ಯ ಜಗದೀಶ್ ಮಾತನಾಡಿ, ‘ವಿಶ್ವ ವಿಖ್ಯಾತ ಪ್ರವಾಸಿ ಕೇಂದ್ರಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಬರುವಂತ ಪ್ರವಾಸಿಗರಿಗೆ ಅಸ್ಥಿಪಂಜರದಂತೆ ನೇತಾಡುವ ಟಾರ್ಪಲ್ ಕಟ್ಟಿದ ಗೂಡಂಗಡಿಗಳು ಕಾಣಸಿಗುತ್ತದೆ. ಅಸ್ವಚ್ಛತೆಗೆ ತಾಣವಾಗಿ ಪಟ್ಟಣ ಮಾರ್ಪಾಡಾಗುತ್ತಿದೆ. ಈಗಾಗಲೇ ಸುಮಾರು ೨ ವರ್ಷದಿಂದ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಕೂಡಲೇ ಶಾಶ್ವತವಾಗಿ ಇವುಗಳನ್ನು ತೆರವುಗೊಳಿಸಬೇಕು. ಪಟ್ಟಣದಲ್ಲಿ ಡೆಂಘೀ ಸೇರಿದಂತೆ ಇತರ ಮಾರಣಾಂತಿಕ ಕಾಯಿಲೆಗಳು ಹೆಚ್ಚಾಗಿ ವ್ಯಾಪಿಸುತ್ತಿದ್ದು ಮಂಗಳವಾರ ನನ್ನ ವಾರ್ಡ್‌ನಲ್ಲಿ ಎರಡು ವರ್ಷದ ಮಗು ಡೆಂಘೀಗೆ ಬಲಿಯಾಗಿದೆ. .ಇದಕ್ಕೆ ಯಾರು ಹೊಣೆ? ಇದರಲ್ಲಿ ರಾಜಕೀಯ ಮಾಡದೆ ಜಿಲ್ಲಾಧಿಕಾರಿ ಕೂಡಲೇ ಮಧ್ಯ ಪ್ರವೇಶಿಸಿ ಇದರ ಬಗ್ಗೆ ಗಮನ ಹರಿಸಿ ಶಾಶ್ವತ ಪರಿಹಾರ ನೀಡಬೇಕು’ ಎಂದು ಮನವಿ ಮಾಡಿದರು.

ಕರವೇ ಅಧ್ಯಕ್ಷ ಭೋಜೇಗೌಡ ಮಾತನಾಡಿ, ‘ಇದು ಪ್ರವಾಸಿತಾಣ ಆದರೆ ಇಲ್ಲಿ ಬರುವ ಪ್ರವಾಸಿಗರಿಗೆ ದೇವಾಲಯ ಕಾಣುವ ಬದಲು ಗೂಡಂಗಡಿಗಳ ಸಾಲು ಎದುರಾಗುತ್ತದೆ. ಎಲ್ಲೆಂದರಲ್ಲಿ ಕಸದ ರಾಶಿ ಹಾಕಿರುತ್ತಾರೆ. ನೆಹರೂ ನಗರದಿಂದ ದೇವಸ್ಥಾನದವರೆಗೂ ಎರಡು ಬದಿಗಳಲ್ಲಿ ಪಾದಚಾರಿಗಳ ಸ್ಥಳ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಮೊದಲು ಸ್ವಚ್ಛತೆಗೆ ಆದ್ಯತೆ ನೀಡಲಿ. ಪ್ರತಿನಿತ್ಯ ಸಾವಿರಾರು ರೋಗಿಗಳು ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಾರೆ. ಪೌರ ಕಾರ್ಮಿಕರು ಎಷ್ಟೇ ಸ್ವಚ್ಛತೆ ಮಾಡಿದರೂ ನಿತ್ಯ ಇದೇ ಗೋಳಾಗಿದೆ. ಕೇವಲ ಒಂದು ದಿನಕ್ಕೆ ಮಾತ್ರ ತೆರವು ಕಾರ್ಯಾಚರಣೆಗೆ ಸೀಮಿತವಾಗಬಾರದು. ಶಾಸಕರು ಹೆಚ್ಚಿನ ಗಮನ ಹರಿಸಬೇಕು. ಇಂತಹ ಮಹತ್ವದ ಕಾರ್ಯಾಚರಣೆ ಮಾಡಿದ ಪುರಸಭೆಗೆ ಪಟ್ಟಣದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಆರೋಗ್ಯಾಧಿಕಾರಿ ಲೋಹಿತ್, ಮೋನೇಶ್ ಹಾಗೂ ಪೌರಕಾರ್ಮಿಕರು ಹಾಜರಿದ್ದರು.

ಒತ್ತುವರಿ ವ್ಯಾಪಾರಿಗಳಿಗೆ ಬೇರೆಡೆ ಸ್ಥಳಾವಕಾಶ

ಇತ್ತೀಚಿನ ದಿನಗಳಲ್ಲಿ ಪಟ್ಟಣದ ವ್ತಾಪ್ತಿಯಲ್ಲಿ ಡೆಂಘೀ ಚಿಕನ್ ಗುನ್ಯಾ ಕಾಯಿಲೆಗಳು ಹೆಚ್ಚಾಗಿ ವ್ಯಾಪಿಸುತ್ತಿದ್ದು ಸ್ವಚ್ಛತೆಗೆ ಪುರಸಭೆಯಿಂದ ಮೊದಲ ಆದ್ಯತೆ ನೀಡುತ್ತಿದ್ದು ರಸ್ತೆ ಬದಿ ವ್ಯಾಪಾರಿಗಳು ಕಸವನ್ನು ಎಲ್ಲೆಂದರಲ್ಲಿ ಹಾಕುವುದಾಗಲಿ ಹಾಗೂ ಇನ್ನಿತರ ತ್ಯಾಜ್ಯಗಳನ್ನು ಚರಂಡಿಗಳಲ್ಲಿ ಸುರಿಯುತ್ತಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಪಾದಚಾರಿಗಳಿಗೆ ಅನುವುಮಾಡಿಕೊಡದೆ ಒತ್ತುವರಿ ಮಾಡಿಕೊಂಡಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಒತ್ತುವರಿ ಮಾಡಿಕೊಂಡಿರುವ ಗೂಡಂಗಡಿಗಳನ್ನು ತೆರವು ಮಾಡಲಾಗುತ್ತಿದೆ. ಅಲ್ಲದೇ ಇಲ್ಲಿನ ವ್ಯಾಪಾರಿಗಳಿಗೆ ಪುರಸಭೆಯ ಪಕ್ಕದಲ್ಲಿ ಸ್ಥಳಾವಕಾಶ ಮಾಡಿಕೊಡಲಾಗುವುದು, ಯಾರೇ ಒತ್ತಡ ತಂದರೂ ಮಣಿಯುವುದಿಲ್ಲ, ತೆರವು ಕಾರ್ಯಾಚರಣೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಪ್ರತಿಯೊಬ್ಬರು ಸಹಕರಿಸುವಂತೆ ಮುಖ್ಯಾಧಿಕಾರಿ ಸುಜಯ್ ಮನವಿ ಮಾಡಿದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ