- ಹೊನ್ನೂರು ಕೆರೆ ಜಾಗ ಅವಲಂಬಿತ 30 ರೈತ ಕುಟುಂಬಗಳು ಕಂಗಾಲು । ಟ್ರ್ಯಾಕ್ಟರ್ ಬಳಸಿ ಕಾರ್ಯಾಚರಣೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಹೊನ್ನೂರು ಕೆರೆಯಲ್ಲಿ ಕಳೆದ ಐದಾರು ದಶಕಗಳಿಂದ ಮೆಕ್ಕೆಜೋಳ, ಟೊಮೆಟೋ ಬೆಳೆಗಳ ಬೆಳೆದು ಸಣ್ಣದಾಗಿ ಬದುಕು ಕಟ್ಟಿಕೊಂಡಿದ್ದ ಬಡರೈತರು ಬೆಳೆದಿದ್ದ ಬೆಳೆಗಳನ್ನು ಸಣ್ಣ ನೀರಾವರಿ ಇಲಾಖೆ ತೆರವುಗೊಳಿಸಿದೆ. ಇದರಿಂದ ನೊಂದ ಬಡರೈತ ಮಹಿಳೆಯರು ಕೆರೆಯಂಗಳದಲ್ಲಿ ಹೊರಳಾಡುತ್ತ ಗೋಳಾಡಿದ ಘಟನೆ ನಡೆದಿದೆ.ತಾಲೂಕಿನ ನರಸೀಪುರ ಗ್ರಾಮ ಸಮೀಪದ ಹೊನ್ನೂರು ಕೆರೆಯಲ್ಲಿ ಹನಿ ನೀರೂ ಇಲ್ಲದೇ ಕೆರೆಯಂಗಳ ಖಾಲಿಯಾಗಿತ್ತು. ಈ ಕೆರೆ ಪ್ರದೇಶದಲ್ಲಿ ಗ್ರಾಮದ ಬಡವರು ಮೆಕ್ಕೆಜೋಳ, ಟೊಮೆಟೋ ಬೆಳೆಗಳನ್ನು ಬೆಳೆದು, ಜೀವನಕ್ಕೆ ದಾರಿ ಮಾಡಿಕೊಂಡಿದ್ದರು.
ಸಾಲ ಮಾಡಿ ಕೆರೆ ಅಂಗಳದ ಅರ್ಧದಷ್ಟು ಎಕರೆ, 1 ಎಕರೆ ಹೀಗೆ ರೈತರು ದಶಕಗಳಿಂದಲೂ ಮೆಕ್ಕೆಜೋಳ, ಟೊಮೆಟೋ ಬೆಳೆಯುತ್ತಿದ್ದರು. ಇದರ ವಿರುದ್ಧ ಅನಾಮಧೇಯ ವ್ಯಕ್ತಿಗಳು ಸಣ್ಣ ನೀರಾವರಿ ಇಲಾಖೆಗೆ ಕರೆ ಮಾಡಿ, ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಕಾರಣಕ್ಕೆ ಇಲಾಖೆ ಅಧಿಕಾರಿಗಳು ಏಕಾಏಕಿ ಸ್ಥಳಕ್ಕೆ ಧಾವಿಸಿ ಬೆಳೆಗಳನ್ನು ಟ್ರ್ಯಾಕ್ಟರ್ ಬಳಸಿ ನಾಶಪಡಿಸಿದ್ದಾರೆ ಎಂದು ಸಂತ್ರಸ್ಥರು ಅಳಲು ತೋಡಿಕೊಂಡರು.ಐದಾರು ದಶಕದಿಂದ ಇದೇ ಕೆರೆ ಜಾಗದಲ್ಲಿ ರೈತರೆಲ್ಲ ಬೆಳೆ ಬೆಳೆಯುತ್ತಿದ್ದೇವೆ. 15 ದಿನಗಳ ಹಿಂದೆ ಬಂದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆ ಜಾಗ ಎಲ್ಲಿವರೆಗೆ ಬರುತ್ತದೋ ಅಲ್ಲಿವರೆಗೂ ಟ್ರಂಚ್ ಅಳವಡಿಸಿ ಹೋಗಿದ್ದರು. ಈ ವೇಳೆ ಈ ಸಲ ಮಾತ್ರ ಒಂದು ಬೆಳೆ ಬೆಳೆದುಕೊಳ್ಳಿ. ಇನ್ನು ಮುಂದೆ ಕೆರೆಯಂಗಳದಲ್ಲಿ ಯಾವ ಬೆಳೆಯನ್ನೂ ಬೆಳೆಯಬೇಡಿ ಎಂದು ಹೇಳಿದ್ದರು.
ಆದರೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಈಗ ಮತ್ತೆ ಏಕಾಏಕಿ ಬಂದು ಬೆಳೆಗಳನ್ನು ನಾಶಪಡಿಸಿದ್ದು ಯಾವ ನ್ಯಾಯ? ಹೀಗಾದರೆ ನಮ್ಮಂತಹ ಬಡವರು ಎಲ್ಲಿಗೆ ಹೋಗಬೇಕು. ಈಗಾಗಲೇ ಬೆಳೆ ಕೈಗೆ ಬಂದಿದ್ದ ವೇಳೆಯೇ ನಾಶಪಡಿಸಿದ್ದು ಕೈಗೆ ಬಂದ ಮಗನ ಸಾವು ಎದುರಿಗೆ ನೋಡಿದಷ್ಟು ಸಂಕಟವಾಗುತ್ತಿದೆ ಎಂದು ರೈತರು, ರೈತ ಮಹಿಳೆಯರು ಕಣ್ಣೀರಿಡುತ್ತ ಹಿಡಿಶಾಪ ಹಾಕಿದರು. ಸಾಲ ಮಾಡಿ 1 ಎಕರೆಗೆ ₹50 ಸಾವಿರ ಖರ್ಚಿನಲ್ಲಿ ಬೀಜ, ರಸಗೊಬ್ಬರ, ಔಷಧಿ ಹಾಕಿ ಬೆಳೆ ಬೆಳೆದಿದ್ದೇವೆ. ಇಂದು ನಾವ್ಯಾರೂ ಇಲ್ಲದೇ ಇರುವ ಸಮಯದಲ್ಲಿ ಏಕಾಏಕಿ ಬೆಳೆಗಳನ್ನು ಸರ್ವನಾಶ ಮಾಡಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದು ನರಸೀಪುರ ಗ್ರಾಮಸ್ಥರು ಸಹ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಸುಮಾರು 30ಕ್ಕೂ ಅಧಿಕ ರೈತರು ಕೆರೆ ಅಂಗಳದ 25 ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದು ಸಣ್ಣದಾಗಿ ಬದುಕು ಕಟ್ಟಿಕೊಂಡಿದ್ದರು. ಆದರೆ, ಬೆಳೆ ಕೈಗೆ ಬರುವ ಪರಿಸ್ಥಿತಿಯಲ್ಲೇ ಟ್ರ್ಯಾಕ್ಟರ್ ಬಳಸಿ, ಬೆಳೆ ನಾಶಪಡಿಸಿದ್ದರಿಂದ ಸಾಗುವಳಿ ಮಾಡುತ್ತಿದ್ದ ರೈತರ ಕುಟುಂಬದ ಮಹಿಳೆಯರು ನೆಲ, ನಾಶಗೊಂಡ ಬೆಳೆಗಳ ಮೇಲೆ ಬಿದ್ದು ಹೊರಳಾಡಿ, ಸಂಕಟ ತೋರ್ಪಡಿಸಿದರು.
ನಮ್ಮ ಜೀವನಕ್ಕೆ ಇದ್ದಿದ್ದೇ ಇದಿಷ್ಟು ಜಾಗ. ಈಗ ಅದನ್ನೂ ಇಲಾಖೆ ಕಸಿದಿದೆ. ಜಮೀನು ಹೋಗಲಿ, ಸೌಜನ್ಯ, ಮಾನವೀಯತೆಯ ಮೇಲಾದರೂ ಈ ಬೆಳೆ ಬೆಳೆಯುವವರೆಗೆ ಬಿಡಬೇಕಿತ್ತು. ಒಂದೂವರೆ ತಿಂಗಳ ಕಾಲವಕಾಶ ನೀಡಿದ್ದರೆ ಅಷ್ಟೋ ಇಷ್ಟು ಬೆಳೆ ಕೈಗೆ ಬಂದು, ಒಂದಿಷ್ಟು ದುಡಿದು, ಸಾಲ ತೀರಿಸಿಕೊಳ್ಳುತ್ತಿದ್ದೆವು ಎಂದು ರೈತ ಮಹಿಳೆಯರಾದ ನೀಲಮ್ಮ, ಸೀತಮ್ಮ, ರೈತ ನಾಗರಾಜ ಇತರರು ಅಳಲು ತೋಡಿಕೊಂಡು, ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.- - -
(ಬಾಕ್ಸ್) * ನೋಟಿಸ್ ನೀಡಿದ್ದರೂ ನಿರ್ಲಕ್ಷಿಸಿದ್ದಾರೆ: ಇಲಾಖೆಕೆರೆ- ಕೆರೆ ಜಾಗ ರಕ್ಷಣೆ ದೃಷ್ಟಿಯಿಂದ ಮುಂಚೆಯೇ ರೈತರಿಗೆ ತಿಳಿವಳಿಕೆ ನೋಟಿಸ್ ನೀಡಲಾಗಿತ್ತು. ಈ ಸಂಬಂಧ ಜಾಗೃತಿ ಸಹ ಮೂಡಿಸಿದ್ದೆವು. ಕೆರೆ ಜಾಗ ಒತ್ತುವರಿ ಮಾಡಿ, ಬೆಳೆ ಬೆಳೆಯದಂತೆ ಎಚ್ಚರಿಸಿದ್ದೆವು. ಆದರೂ, ಸರ್ಕಾರಿ ಕೆರೆ ಜಾಗ ಒತ್ತುವರಿ ಮಾಡಿದ್ದಾರೆ. ನೋಟಿಸ್ ಕೊಟ್ಟು, ಡಂಗುರ ಸಹ ಸಾರಿ ಜಾಗೃತಿ ಮೂಡಿಸಿದ್ದೆವು. ಆದರೂ, ಇಲಾಖೆ ನೋಟಿಸ್‌ಗೂ ಬೆಲೆ ಕೊಡದೇ ರೈತರು ಬೆಳೆಗಳ ಬೆಳೆದಿದ್ದಾರೆ. ಈಗ ಎಲ್ಲ ಬೆಳೆ ತೆರವು ಮಾಡಲು ಸರ್ಕಾರದಿಂದ ಆದೇಶ ಬಂದಿದೆ. ಹಾಗಾಗಿ ತೆರವು ಮಾಡಿಸಿದ್ದೇವೆ. ಸರ್ಕಾರಿ ಜಾಗ ಯಾರೇ ಒತ್ತುವರಿ ಮಾಡಿದ್ದರೂ ಅದನ್ನು ತೆರವು ಮಾಡಿಸುತ್ತೇವೆ. ಇದು ಸರ್ಕಾರದ ಆದೇಶವೆಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಸ್ಪಷ್ಟಪಡಿಸಿದರು.
- - --26ಕೆಡಿವಿಜಿ10, 11, 12, 13.ಜೆಪಿಜಿ: ದಾವಣಗೆರೆ ತಾಲೂಕಿನ ನರಸೀಪುರ ಗ್ರಾಮದ ಸಮೀಪದ ಹೊನ್ನೂರು ಕೆರೆ ಜಾಗದಲ್ಲಿ ಐದಾರು ದಶಕಗಳಿಂದ ಮೆಕ್ಕೆಜೋಳ, ಟೊಮೆಟೋ ಬೆಳೆಯುತ್ತಿದ್ದ ರೈತರು ಬೆಳೆ ನಾಶದಿಂದ ಕಂಗಾಲಾಗಿರುವುದು. -26ಕೆಡಿವಿಜಿ14, 15, 16, 17.ಜೆಪಿಜಿ: ದಾವಣಗೆರೆ ತಾಲೂಕಿನ ನರಸೀಪುರ ಸಮೀಪದ ಹೊನ್ನೂರು ಕೆರೆ ಜಾಗದಲ್ಲಿ ಐದಾರು ದಶಕಗಳಿಂದ ಮೆಕ್ಕೆಜೋಳ, ಟೊಮೆಟೊ ಬೆಳೆ ನಾಶಪಡಿಸಿರುವುದು.