ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಾವೇರಿ ನದಿ ತೀರದ ಚೆರಿಯಪರಂಬುವಿನಲ್ಲಿ ಈಗಾಗಲೇ 150ಕ್ಕೂ ಅಧಿಕ ಗುಡಿಸಲು , ಮನೆಗಳನ್ನು ನಿರ್ಮಿಸಲಾಗಿದೆ. ಇತ್ತೀಚಿಗೆ ಕೆಲವರು ಹೊಸದಾಗಿ ಶೆಡ್ ಗಳನ್ನು ನಿರ್ಮಿಸಿಕೊಂಡಿದ್ದು ವಾಸವಾಗಿದ್ದಾರೆ. ಅಂತಹ ಶೆಡ್ ಗಳನ್ನು ಮಾತ್ರ ಗುರುತಿಸಿ ಶನಿವಾರ ತೆರವುಗೊಳಿಸಲಾಯಿತು.
ದಿಢೀರ್ ಆಗಿ ಹೊಸದಾಗಿ ಶೆಡ್ ಗಳನ್ನು ವಾಸಿಸುವ ಉದ್ದೇಶದಿಂದ ನಿರ್ಮಿಸಿದ್ದಾರೆ. ಅನಧಿಕೃತವಾಗಿ ಶೆಡ್ ಗಳನ್ನು ನಿರ್ಮಿಸಿದ್ದರಿಂದ ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿ ಅವುಗಳನ್ನು ತೆರವುಗೊಳಿಸಿದರು. ಈ ಹಿಂದೆ ನಿರ್ಮಿಸಲಾಗಿರುವ ಗುಡಿಸಲುಗಳನ್ನು ಈಗ ತೆರವುಗೊಳಿಸುತ್ತಿಲ್ಲ. ಅದನ್ನು ವಾಸಕ್ಕೆ ಬಳಸಿಕೊಳ್ಳಬಹುದು. ಆದರೆ ನೂತನವಾಗಿ ಶೆಡ್ ನಿರ್ಮಾಣ ಮಾಡುವಂತಿಲ್ಲ ಎಂದು ಅಧಿಕಾರಿಗಳು ಸೂಚಿಸಿದರು.15 ವರ್ಷಗಳ ಹಗ್ಗಜಗ್ಗಾಟ: ಕಳೆದ 15 ವರ್ಷಗಳಿಂದ ಕಂದಾಯ ಇಲಾಖೆ ಹಾಗೂ ಪರಿಸರ ನಿವಾಸಿಗಳ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಸ್ಥಳವು ಕಾವೇರಿ ನದಿ ತೀರದಲ್ಲಿದ್ದು ಮಳೆಗಾಲದಲ್ಲಿ ಮುಳುಗಡೆಯಾಗುತ್ತಿದೆ. ಇದರಿಂದಾಗಿ ಗುಡಿಸಲು ನಿರ್ಮಾಣಕ್ಕೆ ಅವಕಾಶ ಕಲ್ಪಿಸಿ ಕೊಡಬಾರದು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಇಲ್ಲಿ ಸ್ಥಳೀಯರಲ್ಲದೆ ಹೊರ ಊರಿನವರು ಬಂದು ನೆಲೆಸುತ್ತಿದ್ದಾರೆ ಎಂಬ ದೂರುಗಳು ಸಹ ಕೇಳಿ ಬಂದಿವೆ. ಕಳೆದ ಒಂದು ವಾರದಿಂದ ದಿಢೀರ್ ಆಗಿ ನಿರ್ಮಿಸಲಾದ ಶೆಡ್ಡುಗಳನ್ನು ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.
ಕಾರ್ಯಾಚರಣೆಯ ಸಂದರ್ಭ ಠಾಣಾಧಿಕಾರಿ ಮಂಜುನಾಥ, ಸಿಬ್ಬಂದಿ ಮುಂಜಾಗ್ರತಾ ರಕ್ಷಣೆಯೊಂದಿಗೆ ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗರಾದ ಅಮೃತ, ಕಂದಾಯ ಇಲಾಖೆಯ ಸಿಬ್ಬಂದಿ ಪೂಣಚ್ಚ , ತಿಮ್ಮಣ್ಣ , ಕುಶಾಲಪ್ಪ , ಸೋಮಯ್ಯ, ರಾಜ, ಲಾಲು , ಸಂಜಯ್ ಪಾಲ್ಗೊಂಡಿದ್ದರು.