ಹಾರೋಹಳ್ಳಿಯಲ್ಲಿ 261 ಅಂಗಡಿ ಮಳಿಗೆಗಳ ತೆರವು ಕಾರ್ಯಾಚರಣೆ

KannadaprabhaNewsNetwork | Published : Jan 29, 2025 1:34 AM

ಸಾರಾಂಶ

ಹಾರೋಹಳ್ಳಿ: ಆನೆಕಲ್-ಬಿಡದಿ ರಸ್ತೆಯಲ್ಲಿನ ಪಟ್ಟಣ ಪಂಚಾಯಿತಿಗೆ ಸೇರಿದ 261 ಅಂಗಡಿ ಮಳಿಗೆಗಳನ್ನು ತಾಲೂಕು ಆಡಳಿತ ಪೋಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಮಂಗಳವಾರ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿತು.

ಹಾರೋಹಳ್ಳಿ: ಆನೆಕಲ್-ಬಿಡದಿ ರಸ್ತೆಯಲ್ಲಿನ ಪಟ್ಟಣ ಪಂಚಾಯಿತಿಗೆ ಸೇರಿದ 261 ಅಂಗಡಿ ಮಳಿಗೆಗಳನ್ನು ತಾಲೂಕು ಆಡಳಿತ ಪೋಲೀಸರ ಬಿಗಿ ಬಂದೋಬಸ್ತ್‌ನಲ್ಲಿ ಮಂಗಳವಾರ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿತು.

ತಹಸೀಲ್ದಾರ್ ಶಿವಕುಮಾರ್ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಬಾಯಿ ನೇತೃತ್ವದಲ್ಲಿ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಲು ಮುಂದಾದರು. ಈ ವೇಳೆ ಬಾಡಿಗೆದಾರರ ಪ್ರತಿರೋಧದ ನಡುವೆಯೂ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿಸಿದರು.

ಅಂಗಡಿ ಮಾಲೀಕರ ಮತ್ತು ಅಧಿಕಾರಿಗಳು ಹಾರೋಹಳ್ಳಿ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ಜಿಲ್ಲಾ ಪೋಲಿಸ್ ಉಪ ವರಿಷ್ಠಾಧಿಕಾರಿ ರಾಮಚಂದ್ರಪ್ಪ ಸಭೆ ನಡೆಸಿ ಸಮಸ್ಯೆಯನ್ನು ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದರು.

ಸಭೆಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಮುರಳೀಧರ್, ಎಚ್.ಟಿ.ಶ್ರೀನಿವಾಸ್ ಸೇರಿದಂತೆ ಹಲವರು ಮಾತನಾಡಿ, ನೋಟಿಸ್ ನೀಡದೆ ರಾತ್ರೋರಾತ್ರಿ ಆದೇಶ ಮಾಡಿ, ಬೆಳಗಿನ ಜಾವ ಈ ರೀತಿ ಏಕಾಏಕಿ ತೆರವು ಕಾರ್ಯಾಚರಣೆ ಸರಿಯಾದ ಕ್ರಮವಲ್ಲ. ಈ ಅಂಗಡಿಗಳಲ್ಲಿ ನೂರಾರು ಕುಟುಂಬಗಳು ಜೀವಿಸುತ್ತಿವೆ. ಅವರಿಗೆ ಸಂಕಷ್ಟ ಎದುರಾಗುವುದರಿಂದ ಮುಂದೆ ನಮಗೆ ಭದ್ರತೆ ಮಾಡಿಕೊಡಿ ಹಾಲಿ ಇರುವವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಈ ವೇಳೆ ತಹಸೀಲ್ದಾರ್ ಶಿವಕುಮಾರ್ ಹಾಗು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಬಾಯಿ ಮಾತನಾಡಿ, ನಗರದ ಸೌಂದರ್ಯ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಯಾರೂ ತೆರವು ಕಾರ್ಯಕ್ಕೆ ಅಡಚಣೆ ಮಾಡದೆ ಸಹಕಾರ ನೀಡಬೇಕು. ಪಂಚಾಯಿತಿಯ ಹೂವಿನ ತೋಟದ 1 ಎಕರೆ 16 ಗುಂಟೆ ಹಾಗೂ ಮತ್ತೊಂದು ಕಡೆಯಿರುವ 30 ಗುಂಟೆ ಜಾಗದಲ್ಲಿ ಪಟ್ಟಣ ಪಂಚಾಯಿತಿ ಕಚೇರಿ ಸೇರಿದಂತೆ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಲಿದೆ. ಇಲ್ಲಿ ಮೀಸಲು ಮಳಿಗೆಗಳು ಸೇರಿದಂತೆ ನಿಮಗೆಲ್ಲರಿಗೂ ಅನುಕೂಲವಾಗುವಂತೆ ಸರ್ಕಾರದ ನಿಯಮದಡಿ ಅಂಗಡಿಗಳು ದೊರೆಯಲಿವೆ ಎಂದು ಭರವಸೆ ನೀಡಿದರು.

ಶ್ವೇತಬಾಯಿ ಮಾತನಾಡಿ, ಮರಳವಾಡಿ ರಸ್ತೆಯಲ್ಲಿದ್ದ ಪಂಚಾಯಿತಿ ಜಾಗದಲ್ಲಿದ್ದ ಶೆಡ್ಡುಗಳನ್ನು ಸಹ ತೆರವುಗೊಳಿಸಲಾಗುವುದು. ಪುಟ್‌ಪಾತ್ ಅಂಗಡಿ ಮಾಲೀಕರಿಗೂ ಆ ಸ್ಥಳದಲ್ಲಿ ಅವಕಾಶ ಮಾಡಿಕೊಡಲಾಗುವುದು, ಮಟನ್‌ಸ್ಟಾಲ್‌ಗಳಿಗೂ ಸಹ ಅಲ್ಲಿ ಅವಕಾಶ ಕಲ್ಪಿಸಲಾಗುವುದು, ಅಂಗಡಿ ಮಾಲೀಕರು ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡ, ಸರ್ಕಾರದಿಂದ ೫ ಕೋಟಿ ಹಾಗೂ ಬೇರೆ ಅನುದಾನದಲ್ಲಿ 2.50 ಕೋಟಿ ಹಣ ಮಂಜೂರಾಗಿದೆ, ನೂತನ ಕಟ್ಟಡಗಳಿಗೆ ಅನುದಾನವಿದೆ ಎಂದರು.

ಅನ್ಯರಿಗೆ ಅಂಗಡಿಗಳು: ಈ ಹಿಂದೆ ಪಂಚಾಯಿತಿ ಅಂಗಡಿಗಳನ್ನು ಬೇರೆಯವರಿಗೆ ಹೆಚ್ಚನ ದರದಲ್ಲಿ ಬಾಡಿಗೆ ನೀಡಿ ಪಂಚಾಯಿತಿಗೆ ಸಮರ್ಪಕ ಬಾಡಿಗೆ ಸಂದಾಯವಾಗುತ್ತಿರಲಿಲ್ಲ, ಈ ಸಂಬಂಧ ಮೀಸಲಾತಿ ಆಧಾರದಲ್ಲಿ ಮಳಿಗೆಗಳನ್ನು ಬಾಡಿಗೆಗೆ ನೀಡುವಂತೆ ಪ್ರತಿಭಟನೆಯೂ ನಡೆಸಲಾಗಿತ್ತು.

ಸಭೆಯಲ್ಲಿ ಎಎಸ್ಪಿ ಸುರೇಶ್, ಡಿವೈಎಸ್ಪಿ ಗಳಾದ ದಿನಕರಶೆಟ್ಟಿ, ಕೆಂಚೇಗೌಡ, ಸರ್ಕಲ್ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ, ವರ್ತಕರ ಸಂಘದ ಪದಾಧಿಕಾರಿಗಳು, ಅಂಗಡಿ ಬಾಡಿಗೆದಾರರು ಹಾಜರಿದ್ದರು.

ಇದೇ ವೇಳೆ ತಹಸೀಲ್ದಾರ್ ಶಿವಕುಮಾರ್ ಪಟ್ಟಣ ಅಭಿವೃದ್ಧಿ ದೃಷ್ಟಿಯಲ್ಲಿ ಅಂಗಡಿ ಮಳಿಗೆ ತೆರವು ಕಾರ್ಯಾಚರಣೆಗೆ ಬಾಡಿಗೆದಾರರು ಹಾಗೂ ಸಾರ್ವಜನಿಕರ ಸಂಪೂರ್ಣ ಸಹಕಾರ ದೊರೆತಿರುವುದಕ್ಕೆ ಅಭಿನಂದಿಸಿದರು.

28ಕೆ ಆರ್ ಎಂಎನ್ 7,8.ಜೆಪಿಜಿ

7.ಹಾರೋಹಳ್ಳಿ ಮುಖ್ಯ ರಸ್ತೆಯಲ್ಲಿನ ಪಂಚಾಯಿತಿ ಅಂಗಡಿಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿತು.

8.ಹಾರೋಹಳ್ಳಿಯಲ್ಲಿ ಅಂಗಡಿಗಳ ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳೊಂದಿಗೆ ಬಾಡಿಗೆದಾರರು ಮಾತಿನ ಚಕಮಕಿಯಲ್ಲಿ ತೊಡಗಿರುವುದು.

Share this article