ಶೃಂಗೇರಿ ಗಾಂಧಿ ಮೈದಾನದ ಅಂಗಡಿಗಳ ತೆರವು ಕಾರ್ಯಾಚರಣೆ

KannadaprabhaNewsNetwork |  
Published : Oct 17, 2025, 01:00 AM IST
್ಿ | Kannada Prabha

ಸಾರಾಂಶ

ಶೃಂಗೇರಿ, ಪಟ್ಟಣದ ಗಾಂಧಿ ಮೈದಾನದಲ್ಲಿ ಇದ್ದ ಸುಮಾರು 27 ಅಂಗಡಿ, ಹೋಟೇಲುಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಪಡೆಗಳ ಸಹಾಯದಿಂದ ಗುರುವಾರ ತೆರವುಗೊಳಿಸಿ ತಮ್ಮ ಸುಪರ್ದಿಗೆ ಪಡೆದರು.

- ಹೈಡ್ರಾಮ ನಡುವೆ ಅಂಗಡಿ,ಹೋಟೇಲುಗಳ ತೆರವು । ಪೋಲೀಸ್ ಬಂದೋ ಬಸ್ತ್,ಧರಣಿ । 12 ಮಂದಿ ಪೊಲೀಸ್ ವಶಕ್ಕೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಪಟ್ಟಣದ ಗಾಂಧಿ ಮೈದಾನದಲ್ಲಿ ಇದ್ದ ಸುಮಾರು 27 ಅಂಗಡಿ, ಹೋಟೇಲುಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಪಡೆಗಳ ಸಹಾಯದಿಂದ ಗುರುವಾರ ತೆರವುಗೊಳಿಸಿ ತಮ್ಮ ಸುಪರ್ದಿಗೆ ಪಡೆದರು.

ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ಬೆಳಿಗ್ಗೆಯೇ ಅಂಗಡಿಗಳ ತೆರವಿಗೆ ಕಾರ್ಯಪ್ರವೃತ್ತರಾಗಿ ಹೆಚ್ಚುವರಿ ಪೊಲೀಸ್ ಪಡೆ ನೆರವಿನೊಂದಿಗೆ ಮುಂದಾಗಿ 1 ಗಂಟೆಯೊಳಗೆ ತಮ್ಮ ಅಂಗಡಿಗಳನ್ನು ತೆರವುಗೊಳಿಸಿ ಕೊಡುವಂತೆ ಅಧಿಕಾರಿಗಳು ವ್ಯಾಪಾರಿಗಳಿಗೆ ಗಡುವು ನೀಡಿದ್ದರು. ಕೆಲವರು ತಮ್ಮ ಅಂಗಡಿ ಗಳಲ್ಲಿದ್ದ ವಸ್ತು, ಛಾವಣಿ, ಸರಕುಗಳನ್ನು ತೆರವುಗೊಳಿಸ ತೊಡಗಿದರು. ಆದರೆ ಇನ್ನು ಕೆಲವರು ವಿರೋಧಿಸಿ ಪ್ರತಿಭಟಿಸತೊಡಗಿದರು. ಅಂಗಡಿ, ಹೋಟೆಲು ನಡೆಸುತ್ತಿದ್ದ ಕೆಲ ಮಹಿಳೆಯರು ಮಕ್ಕಳೊಂದಿಗೆ ಧರಣಿ ಕುಳಿತರು. ಸುಮಾರು 50ಕ್ಕೂ ಹೆಚ್ಚು ಮಹಿಳೆಯರು, ಕೆಲಸಗಾರರು ತಾವು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

ಇದರಿಂದ ಮಧ್ಯಾಹ್ನದ ವರೆಗೂ ಅಧಿಕಾರಿಗಳು, ಅಂಗಡಿ ಮಾಲೀಕರು, ಕೆಲ ಸಂಘಟನೆಗಳ ಮುಖಂಡರೊಂದಿಗೆ ವಾಗ್ವಾದ ಮುಂದುವರಿಯಿತು. ನ್ಯಾಯಾಲಯದ ಆದೇಶ ತೋರಿಸುವಂತೆ ಪಟ್ಟು ಹಿಡಿದ ವ್ಯಾಪಾರಿಗಳು ಪ್ರಕರಣ ನ್ಯಾಯಾಲಯ ದಲ್ಲಿದ್ದು, ಸ್ವಲ್ಪ ಕಾಲಾವಕಾಶ ನೀಡಲು ಮನವಿಯನ್ನು ಮಾಡಿದರು.

ಜಿಲ್ಲಾ ಉಪವಿಭಾಗಧಿಕಾರಿ ಸುದರ್ಶನ್, ತಹಸೀಲ್ದಾರ್ ಅನೂಪ್ ಸಂಜೋಗ್ ಪ್ರತಿಕ್ರಿಯಿಸಿ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ತೆರವುಗೊಳಿಸುತ್ತಿದ್ದು ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ನೀವೆ ಹೊಣೆಗಾರರು. ನಮ್ಮ ಕೆಲಸ ಮಾಡಲು ಬಿಡಿ, ಅಡ್ಡಿ ಪಡಿಸಬೇಡಿ ಎಂದು ಕಾರ್ಯಾಚರಣೆ ಆರಂಭಿಸಿದರು.

ಜೆಸಿಬಿ ಹೊರಡುತ್ತಿದ್ದಂತೆ ಧರಣಿ ನಿರತರು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಭಾರೀ ಪ್ರತಿರೋಧ ವ್ಯಕ್ತವಾಗುತ್ತಿ ದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪೊಲೀಸರು ಸುಮಾರು 12ಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ನಂತರ ಸುಮಾರು 27 ಅಂಗಡಿ, ಹೋಟೇಲುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು.

ಬೆಳಿಗ್ಗೆಯಿಂದಲೇ ಪೊಲೀಸ್ ಬಂದೋಬಸ್ತ್, ತೀವ್ರ ಕಟ್ಟೆಚ್ಚರ ವಹಿಸಿ ಯಾವುದೇ ರೀತಿ ಅಹಿತಕರ ಘಟನೆ ನಡೆಯಲು ಅವಕಾಶ ನೀಡದೇ ಸಣ್ಣ ಪುಟ್ಟ ಗೊಂದಲದ ನಡುವೆ ಕಾರ್ಯಾಚರಣೆ ಯಶಸ್ವಿಗೊಳಿಸಿತು. ಕೊಪ್ಪ ಡಿವೈಎಸ್ ಪಿ ಬಾಲಾಜಿ ಸಿಂಗ್, ಶೃಂಗೇರಿ ವೃತ್ತ ನೀರಿಕ್ಷಕ ಅಭಿಷೇಕ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು.

ಪ್ರಕರಣ ಹಿನ್ನೆಲೆ:

ಈ ಹಿಂದೆ ಗಾಂಧಿ ಮೈದಾನ ಪಟ್ಟಣ ಪಂಚಾಯಿತಿ ಸುಪರ್ದಿಯಲ್ಲಿತ್ತು. ಸುಮಾರು 15-20 ವರ್ಷಗಳ ಹಿಂದಿನಿಂದ ಸುಮಾರು 33 ಅಂಗಡಿ, ಹೋಟೇಲುಗಳು ಇಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿತ್ತು.

ಪಟ್ಟಣ ಪಂಚಾಯಿತಿಯಿಂದಲೇ ಅಂಗಡಿ ತೆರವಿಗೆ ಮುಂದಾದ ಸಂದರ್ಭದಲ್ಲಿ ಕೆಲ ವರ್ತಕರು ಉಚ್ಚನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು. ಇದರಿಂದ ಅಂಗಡಿ ಹೋಟೇಲುಗಳು ವ್ಯಾಪಾರ ವಹಿವಾಟು ಮುಂದುವರಿದಿತ್ತು.

ಕಳೆದ ವರ್ಷ ಗಾಂಧಿಮೈದಾನ ವ್ಯಾಜ್ಯ ಮತ್ತೆ ಜೀವಪಡೆದು ಇದು ಹೊಳೆ ಕರಾಬು ಜಾಗವಾಗಿದ್ದರಿಂದ ಪಟ್ಟಣ ಪಂಚಾಯಿತಿ ಸುಪರ್ದಿಯಿಂದ ತಪ್ಪಿ ಕಂದಾಯ ಇಲಾಖೆಗೆ ಸೇರಿತು. ಹಾಗಾಗಿ ಇಲಾಖೆ ಈ ಜಾಗದಲ್ಲಿದ್ದ ಅಂಗಡಿಗಳನ್ನು ಕೆಲ ತಿಂಗಳ ಹಿಂದೆ ಪೊಲೀಸ್ ಸಹಾಯ ದಿಂದ ತೆರವಿಗೆ ಮುಂದಾಗಿ 6 ಅಂಗಡಿ, ಹೋಟೇಲುಗಳನ್ನು ತೆರವುಗೊಳಿಸಲಾಗಿತ್ತು. ಒಟ್ಟು ಇದ್ದ 33 ಅಂಗಡಿಗಳಲ್ಲಿ 27 ಅಂಗಡಿ, ಹೋಟೇಲುಗಳು ಮಾತ್ರ ಉಳಿದಿದ್ದವು. ಈ ಅಂಗಡಿಗಳ ತೆರವಿಗೆ ಮುನ್ನ ನೋಟೀಸ್‌ ಸಹ ನೀಡಲಾಗಿತ್ತು.

ಆದರೆ ಪಟ್ಟಣಪಂಚಾಯ್ತಿಗೆ ಸೇರಿದ್ದಾಗ ತಂದಿದ್ದ ತಡೆಯಾಜ್ಞೆ ಈಗ ಅನ್ವಯವಾಗದಿದ್ದರಿಂದ ಮತ್ತೆ ಗುರುವಾರ ಇಲಾಖೆ ಅಂಗಡಿ ತೆರವು ಕಾರ್ಯಾಚರಣೆ ಆರಂಭಿಸಿತು. ಆದರೆ ಅದೇ ತಡೆಯಾಜ್ಞೆ ಇದೇ ಎಂದೆ ವ್ಯಾಪಾರಸ್ಥರು ಹೇಳಿ ಕಾರ್ಯಾ ಚರಣೆಗೆ ಅಡ್ಡಿಪಡಿಸಿದರು.

ಗಾಂಧಿ ಮೈದಾನ ವಾಹನ ನಿಲುಗಡೆ ಪ್ರದೇಶ ಎಂದು ಶುಲ್ಕ ವಸೂಲಾತಿ ಮಾಡಲಾಗುತ್ತಿತ್ತು. ನಂತರ ಇದು ಹೊಳೆ ಕರಾಬು ಜಾಗವೆಂದು ಕಳೆದ ವರ್ಷದಿಂದ ವಾಹನ ಶುಲ್ಕ ಪದ್ದತಿಯನ್ನು ರದ್ದುಪಡಿಸಲಾಗಿತ್ತು.

-- ಕೋಟ್‌--

ನಾವು ಸುಮಾರು 20 ವರ್ಷಗಳಿಂದ ವ್ಯಾಪಾರ ನಡೆಸುತ್ತಾ ಜೀವನ ಸಾಗಿಸುತ್ತಿದ್ದೇವೆ. ದ್ವೇಷದ ರಾಜಕಾರಣಕ್ಕಾಗಿ ನಮ್ಮ ಹಿತಾಸಕ್ತಿ ಬಲಿಪಡೆದಿದ್ದಾರೆ. ಶಾಂತಿಯುತವಾಗಿ ಎಲ್ಲವೂ ನಡೆಯುತ್ತಿತ್ತು. ಇದರಿಂದ ಯಾರಿಗೂ ತೊಂದರೆಯಾಗುತ್ತಿರಲಿಲ್ಲ. ಇಷ್ಟು ವರ್ಷಗಳು ಇಲ್ಲದ ಸಮಸ್ಯೆ ಈಗ ದಿಢೀರನೇ ಉದ್ಭವಿಸಿದ್ದು ಆಶ್ಚರ್ಯವಾಗಿದೆ. ಬಲವಂತವಾಗಿ ತೆರವುಗೊಳಿಸಿರುವುದು ಸರಿಯಲ್ಲ ಎಂದು

-ರಾಜೇಶ್, ವರ್ತಕ

---

-ಬಾಕ್ಸ್-

ಬದುಕಿನ ಆಸರೆ ಕಸಿದುಕೊಂಡಿದ್ದಾರೆ

ನಾವು ಹಲವು ವರ್ಷಗಳಿಂದ ವ್ಯಾಪಾರ ನಡೆಸಿಕೊಂಡು ಬದುಕು ಸಾಗಿಸಿಕೊಂಡು ಬರುತ್ತಿದ್ದೆವು. ಇದು ಜೀವನೋಪಾಯಕ್ಕೆ ದಾರಿಯಾಗಿತ್ತು. ಪ್ರವಾಸಿ ತಾಣವಾದ ಶೃಂಗೇರಿಗೆ ಬರುವ ಪ್ರವಾಸಿಗರಿಂದ ಆಗುವ ವ್ಯಾಪಾರದಿಂದ ನಮ್ಮ ಬದುಕು ಸಾಗುತ್ತಿತ್ತು. ನಮ್ಮ ಬದುಕು, ಮಕ್ಕಳ ಶಿಕ್ಷಣಕ್ಕೆ ಆಧಾರವಾಗಿತ್ತು. ಈಗ ಏಕಾ ಏಕಿ ನಮಗೆ ಇಲ್ಲಿಂದ ತೆರವುಗೊಳಿಸಿ ಬೀದಿಗೆ ತಳ್ಳಿದ್ದಾರೆ. ಜೀವನೋಪಾಯಕ್ಕೆ ಮುಂದೇನು ಮಾಡುವುದು ಎಂಬ ಚಿಂತೆ ನಮಗೆ ಕಾಡುತ್ತಿದೆ. ನಮ್ಮ ಸಮಸ್ಯೆ ಪರಿಹರಿಸಬೇಕು ಎಂದು ಧರಣಿ ನಿರತ ಮಹಿಳೆಯರು ಆಗ್ರಹಿಸಿದರು.

16 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದಲ್ಲಿನ ಗಾಂಧಿ ಮೈದಾನದಲ್ಲಿ ಅಂಗಡಿ ಹೋಟೆಲುಗಳನ್ನು ತೆರವುಗೊಳಿಸಿರುವುದು,

16 ಶ್ರೀ ಚಿತ್ರ 2-ಕಂದಾಯ,ಪೋಲೀಸ್ ಅಧಿಕಾರಿಗಳು ತೆರವುಗೊಳಿಸಲು ಮುಂದಾದಾಗ ಉಂಟಾದ ವಾಗ್ವಾದ.ತಳ್ಳಾಟ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌