ಮಾರುತಿ ಶಿಡ್ಲಾಪೂರ ಹಾನಗಲ್ಲ
ಸುದ್ದಿಯಲ್ಲಿರುವ ರಸ್ತೆ: ಹುಬ್ಬಳ್ಳಿ, ಶಿವಮೊಗ್ಗ, ಶಿರಸಿ, ಮುಂಡಗೋಡ, ಹಾವೇರಿಗೆ ಸಂಪರ್ಕ ರಸ್ತೆಯಾಗಿರುವ ಪಟ್ಟಣದಲ್ಲಿರುವ ತಡಸ-ಗೊಂದಿ ರಸ್ತೆ ಈ ಹಿಂದೆ ದುರಸ್ತಿಗಾಗಿ ಭಾರೀ ಸುದ್ದಿ ಮಾಡಿತ್ತು. ಈಗ ರಸ್ತೆಯಲ್ಲೆ ಅಂಗಡಿಗಳು, ಫುಟ್‌ಪಾತ್ ಮೇಲೆಯೇ ಗೂಡಂಗಡಿಗಳು, ರಸ್ತೆ ತುಂಬಿಕೊಂಡು ವಾಹನ ಪಾರ್ಕಿಂಗ್, ವಾಹನ ಚಾಲಕರ ಗೋಳಾಟ ಇದೆಲ್ಲಕ್ಕೂ ಪರಿಹಾರವಾಗಿ, ರಸ್ತೆಯ ಬದಿಗೆ ಪಾರ್ಕಿಂಗ್ ಲೈನ್‌ಔಟ್ ಹಾಕುವುದು, ರಸ್ತೆ ಫುಟ್‌ಪಾತ್‌ನಲ್ಲಿನ ಗೂಡಂಗಡಿ ತೆರವುಗೊಳಿಸುವುದು, ಬಸ್ ನಿಲ್ದಾಣದ ಬಳಿಯಲ್ಲಿ ವಾಹನ ದಟ್ಟಣೆ ನಿಯಂತ್ರಿಸುವುದು ಬಹು ಮುಖ್ಯ ಕಾರ್ಯವಾಗಿದೆ. ಇದಕ್ಕಾಗಿ ತಹಸೀಲ್ದಾರ್ ವಿಠಲ್ ಚೌಗಲಾ ೪ ಸಭೆಗಳನ್ನು ನಡೆಸಿದ್ದಾರೆ.
ಮುಗಿದ ಗಡುವು: ಪುರಸಭೆ, ಲೋಕೋಪಯೋಗಿ, ಪೊಲೀಸ್, ಕೆಎಸ್‌ಆರ್‌ಟಿಸಿ ಇಲಾಖೆಗಳ ಅಧಿಕಾರಿಗಳು ವಾಹನ ಚಾಲಕರ, ಮಾಲಕರ ಸಂಘದ ಪದಾಧಿಕಾರಿಗಳು, ಹೂ ಹಣ್ಣಿನ ಅಂಗಡಿಗಳ ಮಾಲೀಕರನ್ನೊಳಗೊಂಡು ಅಕ್ಟೋಬರ್ ೯ರಂದು ನಡೆದ ಸಭೆಯಲ್ಲಿ ಎಲ್ಲರೂ ಸಭೆಯ ತೀರ್ಮಾನಕ್ಕೆ ಒಪ್ಪಿದ್ದಾರೆ. ಈಗಾಗಲೇ ರಸ್ತೆಯಲ್ಲಿ ವಾಹನ ನಿಲುಗಡೆಗೆ ಮಾರ್ಕಿಂಗ್‌ಗಾಗಿ ಟೆಂಡರ್ ಕರೆಯಲಾಗಿದೆ. ಬೀದಿ ಬದಿಯ ವ್ಯಾಪಾರಸ್ಥರಿಗೆ ಮಳಿಗೆ ನಿರ್ಮಿಸಿದಾಗ ಪ್ರಥಮ ಆದ್ಯತೆ ನೀಡಲಾಗುತ್ತದೆ. ಖಾಸಗಿ ಬಸ್‌ನಿಲ್ದಾಣವಿದ್ದ ಜಾಗದಲ್ಲಿರುವ ಮಳಿಗೆಗಳಲ್ಲಿಯೂ ಅವಕಾಶ ನೀಡಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ ಸಭೆಗೆ ತಿಳಿಸಿದ್ದಾರೆ. ತಹಸೀಲ್ದಾರ್ ಈ ಗಡುವಿನಲ್ಲಿ ರಸ್ತೆ ಸುರಕ್ಷತೆಗೆ ಎಲ್ಲರೂ ಸಹಕರಿಸಬೇಕು, ತಪ್ಪಿದಲ್ಲಿ ಶಿಸ್ತಿನ ಕ್ರಮ ಅನಿವಾರ್ಯ ಎಂದೂ ಕೂಡ ಎಚ್ಚರಿಕೆ ನೀಡಿದ್ದಾರೆ. ಆದರೆ ಮೂರನೆ ಗಡುವಿನ ೧೦ ದಿನಗಳು ಮುಗಿದು ವಾರವಾದರೂ ಇನ್ನೂ ತೆರವು ಕಾರ್ಯಾಚರಣೆಯ ಸುಳಿವೇ ಇಲ್ಲ.ಯಕ್ಷಪ್ರಶ್ನೆ: ೫-೬ ತಿಂಗಳಿನಿಂದ ಸುದ್ದಿಯಲ್ಲಿರುವ ಫುಟ್‌ಪಾತ್ ತೆರವು ಕಾರ್ಯಾಚರಣೆ ಹಿನ್ನಡೆಗೆ ಯಾರು ಕಾರಣ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ. ಇಷ್ಟೆಲ್ಲ ಆದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದು ಮಾತ್ರ ಜಾಣ ಕುರುಡು ಎಂಬಂತೆ ಭಾಸವಾಗುತ್ತಿದೆ. ವಿವಿಧ ಇಲಾಖೆಗಳ ಸಮನ್ವಯದ ಕೊರತೆ ಕಾರಣವೇ ಎಂಬ ಪ್ರಶ್ನೆ ಎಲ್ಲರ ಮುಂದಿದೆ. ಗೂಡಂಗಡಿಗಳ ವ್ಯಾಪಾರಸ್ಥರು ಮುಕ್ತ ಒಪ್ಪಿಗೆ ನೀಡಿದಾಗಲೂ ವಿಳಂಬವೇಕೆ ಎಂಬುದೇ ಅರ್ಥವಾಗದ ಸಂಗತಿ.