ಮಡಿಕೇರಿ ; ಕೊಡಗಿನ ಗೌರಮ್ಮ ತಮ್ಮ ಕಾಲಘಟ್ಟದಲ್ಲಿಯೇ ಮಹಿಳಾ ಸಂವೇದನೆ, ಮಹಿಳಾ ಸ್ವಾತಂತ್ರ‍್ಯ ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತು ಪ್ರಬುದ್ಧ ಚಿಂತನೆಗಳನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ್ದು, ಇಂದಿನ ಮಹಿಳೆಯರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ಸಂಶೋಧಕರು ಹಾಗೂ ಗೌರಮ್ಮ ಪ್ರಶಸ್ತಿ ಪುರಸ್ಕೃತ ಡಾ.ಲಲಿತ ಕೆ.ಪಿ. ಅಭಿಪ್ರಾಯಪಟ್ಟರು.
1930ರ ದಶಕದಲ್ಲಿಯೇ ಮಹಿಳಾವಾದದ ಕುರಿತು ಬರೆಯುವ ಧೈರ್ಯ ತೋರಿದ ಗೌರಮ್ಮ ಅವರ ಸಾಧನೆಯನ್ನು ಸ್ಮರಿಸಿದರು. ಆ ಕಾಲದಲ್ಲಿ ಆಧುನಿಕತೆಯ ಪ್ರಭಾವ ಕಡಿಮೆ ಇದ್ದ ಗ್ರಾಮೀಣ ಪರಿಸರದಲ್ಲಿ ಬದುಕಿದ್ದರೂ, ಮಹಿಳೆಯರ ಬದುಕು, ಹಕ್ಕುಗಳು ಮತ್ತು ಸಾಮಾಜಿಕ ಅಸಮಾನತೆಗಳ ಕುರಿತು ಅವರು ವ್ಯಕ್ತಪಡಿಸಿದ ಆಲೋಚನೆಗಳು ದೂರದೃಷ್ಟಿಯಿಂದ ಕೂಡಿದ್ದವು ಎಂದು ಹೇಳಿದರು.ಮಹಿಳೆಯ ಸೌಂದರ್ಯವನ್ನು ಬಾಹ್ಯ ರೂಪಕ್ಕೆ ಸೀಮಿತಗೊಳಿಸಬಾರದು. ಬೌದ್ಧಿಕ ಸಾಮರ್ಥ್ಯ, ಧೈರ್ಯ, ಸ್ವಾವಲಂಬನೆ, ಆತ್ಮಗೌರವ ಮತ್ತು ಆತ್ಮವಿಶ್ವಾಸವೇ ಮಹಿಳೆಯ ನಿಜವಾದ ಸೌಂದರ್ಯ ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್, ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದರೊಂದಿಗೆ ಬರವಣಿಗೆಯಲ್ಲಿಯೂ ಆಸಕ್ತಿ ತೋರಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದು ಅಗತ್ಯ ಎಂದರು. ಈ ದತ್ತಿಯನ್ನು ಗೌರಮ್ಮ ಅವರ ಪುತ್ರ ಬಿ.ಜಿ.ವಸಂತ ಅವರು ಕೊಡಗಿನ ಮಹಿಳಾ ಲೇಖಕಿಯರು ಪ್ರಕಟ ಪಡಿಸಿದ ಉತ್ತಮ ಕೃತಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಲುವಾಗಿ ಸ್ವಾಪಿಸಲಾಗಿದ್ದು, ಇಲ್ಲಿಯವರೆಗೆ 23 ಲೇಖಕಿಯರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.ಗೋಣಿಕೊಪ್ಪಲು ವಿಶ್ರಾಂತ ಪ್ರಾಂಶುಪಾಲ ಡಾ.ಜೆ.ಸೋಮಣ್ಣ ಉಪನ್ಯಾಸ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ವೇಣುಗೋಪಾಲ್ ಮಾತನಾಡಿದರು.2026-27ನೇ ಸಾಲಿನಲ್ಲಿ ಗೌರಮ್ಮ ಸಣ್ಣಕತೆಗಳ ಸ್ಪರ್ಧೆ ವಿಜೇತರಾದ ಸಂತ ಜೋಸೆಫರ ಕಾನ್ವೆಂಟ್ ಮತ್ತು ಪ್ರೌಢಶಾಲೆ ವಿದ್ಯಾರ್ಥಿನಿ ಎಂ.ಎಸ್.ಆಕಾಂಕ್ಷ (ಪ್ರಥಮ), ಮಡಿಕೇರಿ ಎಎಲ್‌ಜಿ ಕ್ರೆಸೆಂಟ್ ಶಾಲೆಯ ಗುರುಪ್ರಿಯ (ದ್ವಿತೀಯ) ಹಾಗೂ ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ಪಿ.ಎಸ್.ಯಶಸ್ವಿ (ತೃತೀಯ) ಬಹುಮಾನ ಹಾಗೂ ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು.ಪರಿಷತ್ತಿನ ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್, ಗೌರಮ್ಮ ಅವರ ಕುಟುಂಬಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಸ್ವಾಗತಿಸಿದರು. ವಿದ್ಯಾರ್ಥಿನಿ ಲಿಖಿತ ನಿರೂಪಿಸಿ, ವಂದಿಸಿದರು.