ಕನ್ನಡಪ್ರಭ ವಾರ್ತೆ ರಾಮನಗರ
ಸದಾಶಿವ ಆಯೋಗ ಸೇರಿದಂತೆ ಸಂಪುಟ ಉಪ ಸಮಿತಿ ವರದಿಗಳಲ್ಲಿ ಹೊಲೆಯ/ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಮುಂದೆ ನಡೆಯುವ ಜಾತಿ ಗಣತಿಯಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ರಾಜ್ಯ ಎಸ್‌ಸ್ಸಿ/ಎಸ್ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರಯ್ಯ ಆಗ್ರಹಿಸಿದರು.ರಾಮನಗರದ ಅಂಬೇಡ್ಕರ್ ಭವನದಲ್ಲಿ ನ್ಯಾ.ನಾಗಮೋಹನ್‌ದಾಸ್ ಏಕ ಸದಸ್ಯ ಆಯೋಗದ ಶಿಫಾರಸ್ಸಿನಂತೆ ಒಳಮೀಸಲಾತಿ ಜಾರಿಗಾಗಿ ಶೀಘ್ರದಲ್ಲೇ ನಡೆಯಲಿರುವ ಜಾತಿ ಗಣತಿ ಕುರಿತು ಬಲಗೈ ಸಮುದಾಯದಲ್ಲಿ ಅರಿವು ಮೂಡಿಸಲು ಆಯೋಜಿಸಿದ್ದ ಹೊಲೆಯ/ಬಲಗೈ ಸಂಬಂಧಿತ ಜಾತಿಗಳ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
ಜಾತಿ ಗಣತಿ ವೇಳೆ ಸ್ಪಷ್ಟವಾಗಿ ಜಾತಿಯನ್ನು ನಮೂದಿಸಬೇಕು. ಶೇ.೧೦೦ರಷ್ಟು ಮನೆಗಳನ್ನು ಜಾತಿ ಗಣತಿಗೆ ಒಳಪಡಿಸಬೇಕು. ಬಲಗೈ ಸಮುದಾಯದ ಓರ್ವ ವ್ಯಕ್ತಿಯೂ ತಪ್ಪದಂತೆ ಪ್ರತಿಯೊಬ್ಬರ ಗಣತಿ ಆಗಬೇಕು. ಇದಕ್ಕಾಗಿ ಛಲವಾದಿ ಸಮುದಾಯದ ಎಲ್ಲ ಮುಖಂಡರು, ಯುವಕರು ಸೇನೆಯಂತೆ ಕೆಲಸ ಮಾಡಬೇಕು. ಜಾತಿ ಗಣತಿ ಮುಗಿದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗುವವರೆಗೂ ನಾವು ಕಾವಲು ಕಾಯಬೇಕು. ಯಾವುದೇ ಲೋಪದೋಷ ಆಗದಂತೆ ನೋಡಿಕೊಳ್ಳಬೇಕು ಎಂದರು.ಜಾತಿ ಗಣತಿ ನಮೂನೆಯಲ್ಲಿ ಧರ್ಮದ ಕಾಲಂ ಇರುವುದಿಲ್ಲ. ಇದ್ದರೂ ಅದು ನಗಣ್ಯವಾಗಲಿದೆ. ಕೋಲಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಈ ವ್ಯಾಪ್ತಿಯಲ್ಲಿ ಜಾತಿ ಕಲಂನಲ್ಲಿ ಬಲಗೈ ಸಮುದಾಯಗಳು ಹೊಲೆಯ ಎಂದೇ ನಮೂದಿಸಿ, ಇದರೆ ಜೊತೆಗೆ ಬಲಗೈ, ಛಲವಾದಿ ಸಮುದಾಯ ಎಂದು ನಮೂದಿಸಬಹುದು. ನಂತರ ಉಪ ಜಾತಿ ಕೇಳಿದರೆ ಆದಿ ಕರ್ನಾಟಕ ಎಂದು ನಮೂದಿಸಬಹುದು. ಜಾತಿ ಕಲಂನಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ನಮೂದಿಸಿರುವುದರಿಂದಲೇ ಹಿಂದಿನ ವರದಿಗಳಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಇವುಗಳು ಜಾತಿ ಅಲ್ಲ. ಜಾತಿಯ ಕಲಂನಲ್ಲಿ ಬಲಗೈ/ಹೊಲೆಯ/ಛಲವಾದಿ ಸಮಯದಾಯ ಎಂದೇ ಹೇಳಿ, ತಪ್ಪದೆ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.ಪ್ರಸ್ತುತ ಗಣತಿಯಲ್ಲಿ ಮನೆ ಮನೆಗೆ ಬಂದು ಗಣತಿ ಕಾರ್ಯ ಮಾಡುವ ಜೊತೆಗೆ, ಬೂತ್ ಆಫೀಸ್ ಹಾಗೂ ಮೊಬೈಲ್ ಆ್ಯಪ್ ಮೂಲಕವೂ ಗಣತಿ ಕಾರ್ಯ ನಡೆಯಲಿದೆ ಎಂದರು.
ಸಭೆಯಲ್ಲಿ ಕನಕಪುರ ಶಿವಣ್ಣ, ಲೋಕೋಪಯೋಗಿ ನಿವೃತ್ತ ಚೀಫ್ ಎಂಜಿನಿಯರ್ ಶಿವರಾಮ್, ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಶಿವಶಂಕರ್, ಮುಖಂಡರಾದ ಮಹೇಶ್, ಪ್ರದೀಪ್ , ಅಪ್ಪಗೆರೆ ಮಂಜುನಾಥ್, ಶ್ರೀನಿವಾಸ್ ಗೌತಮ್, ಶಿವಣ್ಣ, ಕೂಡ್ಲೂರು ಕಾಂತರಾಜು, ಹರೀಶ್ ಬಾಲು ಸೇರಿದಂತೆ ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಹಾರೋಹಳ್ಳಿ ತಾಲೂಕಿನ ಮುಖಂಡರು, ನೌಕರರು, ನಿವೃತ್ತ ನೌಕರರು ಇತರರು ಭಾಗವಹಿಸಿದ್ದರು.