ಹಿರಿಯಡ್ಕ ಕೆಪಿ ಶಾಲೆಗೆ 75 ವರ್ಷ: ಅಮೃತ ಮಹೋತ್ಸವ ಆಚರಣೆ ಸಿದ್ಧತೆ

KannadaprabhaNewsNetwork | Published : Apr 25, 2025 11:54 PM

ಸಾರಾಂಶ

ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್ 75 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಅಮೃತ ಮಹೋತ್ಸವ ಸಮಿತಿಯ ಉದ್ಘಾಟನೆ ಹಾಗೂ ಅಮೃತ ಮಹೋತ್ಸವ ಕಾರ್ಯಾಲಯದ ಉದ್ಘಾಟನೆ ಭಾನುವಾರ ಬೆಳಗ್ಗೆ 11 ಗಂಟೆಗೆ ಕಾಲೇಜಿನ ಚಂದಯ್ಯ ಹೆಗ್ಡೆ ಸಭಾಭವನದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್ 75 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.

ಈ ಪ್ರಯುಕ್ತ ಈಗಾಗಲೇ ಅಮೃತ ಮಹೋತ್ಸವ ಸಮಿತಿ ರಚಿಸಲಾಗಿದ್ದು ಸಮಿತಿಯ ಉದ್ಘಾಟನೆ ಹಾಗೂ ಅಮೃತ ಮಹೋತ್ಸವ ಕಾರ್ಯಾಲಯದ ಉದ್ಘಾಟನೆ ಭಾನುವಾರ ಬೆಳಗ್ಗೆ 11 ಗಂಟೆಗೆ ಕಾಲೇಜಿನ ಚಂದಯ್ಯ ಹೆಗ್ಡೆ ಸಭಾಭವನದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1950 ರಲ್ಲಿ ಪ್ರಾರಂಭವಾದ ಹಿರಿಯಡ್ಕ ಬೋರ್ಡ್ ಹೈಸ್ಕೂಲ್, 1975 ರಲ್ಲಿ ಪದವಿ ಪೂರ್ವ ಕಾಲೇಜಾಗಿ ಪರಿವರ್ತನೆಗೊಂಡಿತ್ತು. ಪ್ರಸ್ತುತ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂಬ ಹೆಸರಿನಲ್ಲಿ ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಕಾಲೇಜಿನವರೆಗೆ ಸುಮಾರು 2,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸವನ್ನು ನೀಡುತ್ತಿದ್ದು, ಪ್ರಸ್ತುತ ವರ್ಷದಲ್ಲಿ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ವರ್ಷಪೂರ್ತಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ನೂತನ ಅಮೃತ ಮಹೋತ್ಸವ ಸಮಿತಿ ಹಾಗು ಕಾರ್ಯಾಲಯದ ಉದ್ಘಾಟನೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಲಿದ್ದಾರೆ. ಸಮಿತಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಕೃಷಿ ಅರ್ಥಶಾಸ್ತ್ರಜ್ಞ ಡಾ.ಎನ್.ಎಸ್ ಶೆಟ್ಟಿ, ಗೌರವಾಧ್ಯಕ್ಷ ಎ.ಬಾಲಕೃಷ್ಣ ಹೆಗ್ಡೆ ಬೆಂಗಳೂರು, ಪಳ್ಳಿ ನಟರಾಜ ಹೆಗ್ಡೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್.ಶ್ರೀನಿವಾಸ್ ರಾವ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಬಿ.ಎಲ್ ವಿಶ್ವಾಸ್ ಉಪಸ್ಥಿತರಿರುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ನಟರಾಜ್ ಹೆಗ್ಡೆ, ಪ್ರಾಂಶುಪಾಲ ಮಂಜುನಾಥ್ ಭಟ್, ಉಪಪ್ರಾಂಶುಪಾಲ ಪ್ರಕಾಶ್ ಪ್ರಭು, ಪ್ರಧಾನ ಕಾರ್ಯದರ್ಶಿ ನಾಗರಾಜೇಂದ್ರ ಎಂ.ಆರ್ ಉಪಸ್ಥಿತರಿದ್ದರು.

Share this article