ಮಳೆಗಾಲ ಎದುರಿಸಲು ಅಧಿಕಾರಿಗಳು ಸಕಲ ಸನ್ನದ್ಧರಾಗಿ: ತಹಸೀಲ್ದಾರ್‌ ಅರ್ಚನಾ ಭಟ್‌ ಸೂಚನೆ

KannadaprabhaNewsNetwork |  
Published : Apr 25, 2025, 11:54 PM IST
೩೨ | Kannada Prabha

ಸಾರಾಂಶ

ಮಳೆಗಾಲಕ್ಕೆ ಪೂರ್ವಭಾವಿ ಸಿದ್ಧತೆ ಕುರಿತಾಗಿ ಬಂಟ್ವಾಳ ತಾ.ಪಂ. ಸಭಾಂಗಣದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಚಿನ್‌ ಕುಮಾರ್‌ ಉಪಸ್ಥಿತಿಯಲ್ಲಿ ಸಭೆ ನಡೆಸಿದ ತಹಸೀಲ್ದಾರ್ ಅರ್ಚನಾ ಭಟ್ ಪ್ರತೀ ಇಲಾಖೆಗಳೂ ತಂಡ ಪ್ರಯತ್ನ ಮಾಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಮಳೆಗಾಲ ಎದುರಿಸಲು ಅಧಿಕಾರಿಗಳು ಸಕಲ ಸನ್ನದ್ಧರಾಗಬೇಕು, ಕೇಂದ್ರ ಸ್ಥಾನದಲ್ಲಿದ್ದಕೊಂಡು ಸಾರ್ವಜನಿಕರ ಸಮಸ್ಯೆಗೆ ತುರ್ತಾಗಿ ಸ್ಪಂದಿಸಿ, ಯಾವುದೇ ಅನಾಹುತಕ್ಕೆ ಕಾರಣವಾಗದಂತೆ ಮುನ್ನೆಚ್ಚರಿಕೆ ವಹಿಸಿ, ಮೇ ೨ರೊಳಗೆ ಅಪಾಯಕಾರಿ ಜಾಗ ಗುರುತಿಸಿ ವರದಿ ನೀಡುವಂತೆ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.ಮಳೆಗಾಲಕ್ಕೆ ಪೂರ್ವಭಾವಿ ಸಿದ್ಧತೆ ಕುರಿತಾಗಿ ಬಂಟ್ವಾಳ ತಾ.ಪಂ. ಸಭಾಂಗಣದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಚಿನ್‌ ಕುಮಾರ್‌ ಉಪಸ್ಥಿತಿಯಲ್ಲಿ ಸಭೆ ನಡೆಸಿದ ಅವರು, ಪ್ರತೀ ಇಲಾಖೆಗಳೂ ತಂಡ ಪ್ರಯತ್ನ ಮಾಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.ತಾಲೂಕಿನಲ್ಲಿರುವ ಅಂಗನವಾಡಿ ಕೇಂದ್ರಗಳ ಬಳಿ ಇರುವ ಕಾಲುಸಂಕವನ್ನು ಗುರುತಿಸಬೇಕು. ಅಂಗನವಾಡಿ ಸಹಾಯಕಿಯರ ವಾಟ್ಸಾಪ್ ಗ್ರೂಪ್ ಮಾಡಿ, ಸಮಸ್ಯೆ ಕುರಿತು ಗಮನ ಸೆಳೆಯಬೇಕು ಎಂದು ಅವರು ಸಿ.ಡಿ.ಪಿ.ಒ ಅಧಿಕಾರಿಗೆ ಸೂಚನೆ ನೀಡಿದರು.

ಮಳೆಗಾಲದ ಸಮಯದಲ್ಲಿ ನದಿ ನೀರು ತುಂಬಿ ಹರಿಯುತ್ತಿದ್ದು, ನದೀ ತೀರದ ಜಾಗಗಳಲ್ಲಿ ಜನರು ಹೋಗಬಾರದು ಎಂಬ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಜನರು ಅಲ್ಲಿಗೆ ಸುಳಿದಾಡದಂತೆ ನೋಡಿಕೊಳ್ಳಬೇಕು. ನಾವೂರು, ಅಜಿಲಮೊಗರು, ಪುರಸಭೆಯ ಜಾಗಗಳಲ್ಲಿ ನದಿ ತೀರದ ಜಾಗಗಳಲ್ಲಿ ಎಚ್ಚರಿಕೆ ವಹಿಸಬೇಕು.ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಎಂದು ತಿಳಿಸಿದರು. ತಾಲೂಕಿನ ಕಾಳಜಿಕೇಂದ್ರಗಳ ಬಗ್ಗೆ ವರದಿ ಪಡೆದು ಸುಸ್ಥಿತಿಯಲ್ಲಿಡುವಂತೆ ಕಂದಾಯ ಅಧಿಕಾರಿಗಳ ಜವಾಬ್ದಾರಿ ನೆನಪಿಸಿದರು. ಗೂಡಿನ ಬಳಿ ನೆರೆ ಪೀಡಿತ ಪ್ರದೇಶಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.ಗ್ರಾಮ ಪಂಚಾಯಿತಿಗಳು ಹೆಚ್ಚು ಜಾಗೃತರಾಗಬೇಕು. ನೀರಲ್ಲಿ ಮುಳುಗಡೆಯಾಗುವ ಕಾಲುಸಂಕಗಳನ್ನು ಹುಡುಕಬೇಕು ಎಂದು ತಿಳಿಸಿದರು.

ಕಳೆದ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ಅತೀ ಹೆಚ್ಚು ಸಮಸ್ಯೆಯಾಗಿದ್ದು, ಈ ಬಾರಿ ಅಂತಹ ಸಮಸ್ಯೆಗಳು ಪುನಾರಾವರ್ತನೆಯಾಗದಂತೆ ಎಚ್ಚರ ವಹಿಸಲು ಕೆ‌ಎನ್.ಆರ್.ಸಿ.ಕಂಪನಿಗೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ. ಸರ್ವೀಸ್ ರಸ್ತೆಯ ಕಾಮಗಾರಿ ಶೀಘ್ರವಾಗಿ ಮುಗಿಯುವ ನಿಟ್ಟಿನಲ್ಲಿ ಕ್ರಮವಹಿಸಿ, ಜನಸಂದಣಿ ಹೆಚ್ಚು ಓಡಾಟ ನಡೆಸುವ ರಸ್ತೆಯ ಕಾಮಗಾರಿಯನ್ನು ಆದ್ಯತೆ ನೆಲೆಯಲ್ಲಿ ಕೆಲಸ ಮಾಡಿ ಎಂದರು.

ಫ್ಲೈಓವರ್ ನಲ್ಲಿ ನೀರು ಹೊರಚೆಲ್ಲದಂತೆ ಗಮನಹರಿಸಬೇಕು.ಕಾಮಗಾರಿ ಆಗುವ ಜಾಗದಲ್ಲಿ ಜನರಿಗೆ ತೊಂದರೆ ಆಗದಂತೆ, ಎಚ್ಚರಿಕೆಯಿಂದ ಕೆಲದ ಮಾಡಿ, ಅಂತಹ ಸ್ಥಳದಲ್ಲಿ ನೀರು ತುಂಬಿ ಯಾವುದೇ ರೀತಿಯಲ್ಲಿ ಸಂಚಾರಕ್ಕೆ ಅಡಚಣೆಯಾಗಬಾರದು, ಸಾರ್ವಜನಿಕರಿಗೂ ತೊಂದರೆಯಾಗದಂತೆ ಎಚ್ಚರ ವಹಿಸಿ, ಟ್ರಾಫಿಕ್ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.ಕನಿಷ್ಠ ಪಕ್ಷ ಹೆದ್ದಾರಿ ಬದಿಯಲ್ಲಿ ರಸ್ತೆಗೆ ಬಿದ್ದು ಅಪಾಯವನ್ನು ಹೊಂದಿರುವ ಕಡೆಗಳ ಬ್ಯಾನರ್ ಗಳನ್ನು ಆದರೂ ತೆರವು ಮಾಡಿ ಎಂದು ತಹಸೀಲ್ದಾರ್‌ ಪಿಡಿಒ ಗಳಿಗೆ ಸೂಚಿಸಿದ್ದಾರೆ. ಗಾಳಿ ಮಳೆಗೆ ಹೆದ್ದಾರಿಗೆ ಬಿದ್ದು ವಾಹನ ಸವಾರರಿಗೆ ಅಪಾಯವಾದರೆ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಬ್ರಿಟಿಷ್ ಸರ್ಕಾರದ ಕಾಲದಲ್ಲಿ ನಿರ್ಮಾಣವಾದ ಹಳೆಯ ಪಾಣೆಮಂಗಳೂರು ಸೇತುವೆಯ ಸಾಮಾರ್ಥ್ಯ ಪರೀಕ್ಷೆಗಾಗಿ ಪುರಸಭೆಯ ಇಂಜಿನಿಯರ್ ಡಿಮೆಲ್ಲೋ ಅವರಿಗೆ ತಿಳಿಸಲಾಗಿತ್ತು. ಆದರ ವರದಿ ಕೇಳಿದಾಗ, ಇನ್ನುಕೂಡ ಸಾಮಾರ್ಥ್ಯ ಪರೀಕ್ಷೆ ಮಾಡದೆ ಜವಾಬ್ದಾರಿ ಮರೆತ ಇಂಜಿನಿಯರ್ ಅವರನ್ನು ಸಸ್ಪಂಡ್ ಮಾಡಿ ಎಂದು ಪುರಸಭೆ ಸಿ.ಒ.ಗೆ ತಹಸೀಲ್ದಾರ್ ತಿಳಿಸಿದ್ದಾರೆ. ಆರಂಭದಲ್ಲಿ ಸಭೆಗೆ ಸರಿಯಾದ ಸಮಯದಲ್ಲಿ ಬರದ ಹಾಗೂ ಸಭೆಗೆ ಹಾಜರಾಗದ ಅಧಿಕಾರಿಗಳನ್ನು ‌ತಹಶೀಲ್ದಾರ್ ಅರ್ಚನಾ ಭಟ್ ಅವರು ತರಾಟೆಗೆ ತೆಗೆದುಕೊಂಡ ಘಟನೆ ಕೂಡ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!