ಹೊಸಪೇಟೆ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ ಖಂಡಿಸಿ ವಿಶ್ವ ಹಿಂದೂ ಪರಿಷತ್‌ನ ವಿಜಯನಗರ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ವಕ್ಫ್ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಸಲಾಗಿದೆ. ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಬೇಕು. ಕಾಶ್ಮೀರದ ಸುಂದರ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಧರ್ಮಕೇಳಿ ಹಿಂದೂಗಳನ್ನು ಗುರಿಯಾಗಿಸಿಕೊಂಡು, ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ದುಷ್ಕೃತ್ಯವನ್ನು ಸಹಿಸಲು ಆಗುವುದಿಲ್ಲ. ಈಗಾಗಲೇ ಕೇಂದ್ರ ಸರ್ಕಾರ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಪೆಟ್ಟು ನೀಡಿದೆ. ಆದರೆ, ದುಷ್ಟ ಉಗ್ರರಿಗೆ ತಕ್ಕ ಶಿಕ್ಷೆ ನೀಡಬೇಕು. ಭಾರತದಲ್ಲಿ ಉಗ್ರಗಾಮಿಗಳನ್ನು ನಿರ್ನಾಮ ಮಾಡಬೇಕು ಎಂದು ಒತ್ತಾಯಿಸಿದರು.
ವಿಜಯನಗರ ಜಿಲ್ಲೆಯಲ್ಲಿ ಅನಧಿಕೃತ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಗೋವುಗಳ ಕಳ್ಳಸಾಗಣೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಅವರು ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆಯಬೇಕು. ಪ್ರಾರ್ಥನಾ ಮಂದಿರಗಳ ಮೇಲಿನ ಧ್ವನಿವರ್ಧಕಗಳಲ್ಲಿ ಸರ್ವೋಚ್ಚ ನ್ಯಾಯಾಲಯ ನಿಗದಿ ಮಾಡಿರುವ ಶಬ್ದದ ಮಿತಿ ಉಲ್ಲಂಘಿಸಲಾಗುತ್ತಿದೆ. ಈ ಕರ್ಕಶ ಶಬ್ದದಿಂದ ವೃದ್ಧರಿಗೆ, ಮಕ್ಕಳಿಗೆ, ರೋಗಿಗಳಿಗೆ, ಗರ್ಭಿಣಿಯರಿಗೆ ತೊಂದರೆಯಾಗುತ್ತಿದೆ. ನ್ಯಾಯಾಲಯದ ಆದೇಶ ಪಾಲಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.ಮುಖಂಡರಾದ ನರಸಿಂಹಮೂರ್ತಿ, ಕಿಚಿಡಿ ಕೊಟ್ರೇಶ್, ಅಶೋಕ್ ಜೀರೆ, ರಮೇಶ್ ಗುಪ್ತಾ, ಜಗದೀಶ ಕಾಮಟಗಿ, ಭೂಪಾಳ ಪ್ರಹ್ಲಾದ, ಗೊಗ್ಗ ಚನ್ನಬಸವರಾಜ, ನಾಗಾರ್ಜುನ, ಮಧುರಚನ್ನಶಾಸ್ತ್ರಿ, ಕಾಸಟ್ಟಿ ಉಮಾಪತಿ, ವಿಜಯ ಲಕ್ಷ್ಮಿ, ಅನುರಾಧಾ ಮತ್ತಿತರರಿದ್ದರು.