ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮಿಷನ್ ಸುರಕ್ಷಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಮತ್ತು ವೈದ್ಯರು ಮಿಷನ್ ಸುರಕ್ಷಾ ಕಾರ್ಯಾಗಾರದ ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕು. ಜಿಲ್ಲೆಯಲ್ಲಿ 146 ಪೋಕ್ಸೊ ಪ್ರಕರಣಗಳು ದಾಖಲಾಗಿದೆ. ಇದನ್ನು ತಡೆಗಟ್ಟಲು, ಅಗತ್ಯವಾದ ತರಬೇತಿಯನ್ನು ಈ ಕಾರ್ಯಾಗಾರದಲ್ಲಿ ನೀಡಲಿದ್ದು, ಇದನ್ನು ಶಿಕ್ಷಕರು ಬಳಕೆ ಮಾಡಿಕೊಂಡು ಮಕ್ಕಳಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಇಂದಿನ ಮಕ್ಕಳಿಗೆ ಲೈಂಗಿಕ ಶಿಕ್ಷಣ ಮತ್ತು ಆಪ್ತ ಸಮಾಲೋಚನೆಗೆ ಒಳಪಡಿಸುವುದು ಬಹು ಮುಖ್ಯವಾಗಿದೆ. ಶಾಲೆ, ಮನೆ ಹಾಗು ಸಮಾಜದಲ್ಲಾಗುವ ಅನೇಕ ಘಟನೆಗಳು ಅವರ ಮೇಲೆ ಪರಿಣಾಮ ಬೀರುತ್ತದೆ. ಅದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ತಪ್ಪು ದಾರಿಯನ್ನು ತುಳಿಯುವ ಸಾಧ್ಯತೆ ಇರುತ್ತದೆ ಎಂದರು.ಸಂಕುಚಿತ ಭಾವನೆ ತೆಗೆದು ಹಾಕುವುದು, ಶಿಕ್ಷಕರು ಮತ್ತು ವೈದ್ಯರು ಪ್ರತಿ ತಿಂಗಳು ಆಪ್ತ ಸಮಾಲೋಚನೆ ಮಾಡುವುದು ಹಾಗೂ ಬಾಲ್ಯ ವಿವಾಹದ ಮೇಲೆ ಏರಿರುವ ಮೂಡನಂಭಿಕೆ ಹೋಗಲಾಡಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದ್ದು, ಆ ನಿಟ್ಟಿನಲ್ಲಿ ಶಿಕ್ಷಕರು, ವೈದ್ಯರು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಹೊಣೆಗಾರಿಕೆ ಶಿಕ್ಷಕರದಾಗಿದ್ದು, ಅವರಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್, ಇತರೆ ವಿಷಯಗಳ ಬಗ್ಗೆ ತಿಳಿಸಬೇಕು. ಅಶ್ಲೀಲ ಪದಗಳ ಬಳಕೆ, ಖಾಸಗಿ ಅಂಗಗಳನ್ನು ಮುಟ್ಟುವುದು, ಖಾಸಗಿ ವಿಡಿಯೋ, ಫೋಟೋ ಹಂಚಿಕೆ ಮಾಡುವುದು ತಪ್ಪು. ಇಂತಹ ಅಪರಾಧ ಕೃತ್ಯ ಮಾಡಿದರೆ 67ಬಿ ಐಐಟಿ ಪ್ರಕಾರ ಶಿಕ್ಷೆ ನೀಡಲಾಗುತ್ತದೆ ಎಂಬ ಕಾನೂನಿನ ಮಾಹಿತಿಯನ್ನು ಮಕ್ಕಳಿಗೆ ತಿಳಿಸಬೇಕು ಎಂದರು.