ಹಾವೇರಿ: ಜಿಲ್ಲೆಯಲ್ಲಿ ವೈದ್ಯಕೀಯ ಪದವಿ ಪಡೆಯದೆ, ಕೆಪಿಎಂಇ ಕಾಯ್ದೆ ಅನುಸಾರ ನೋಂದಣಿಯಾಗದೆ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಕ್ಲಿನಿಕ್‌ಗಳನ್ನು ಬಂದ್ ಮಾಡಿಸಿ, ದೂರು ದಾಖಲಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಹಾಗೂ ಪಿಸಿ ಮತ್ತು ಪಿಎನ್‌ಡಿಸಿ ಕಾಯ್ದೆ ಕುರಿತ ಸಭೆಯಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಕ್ಲಿನಿಕ್‌ಗಳ ಮಾಹಿತಿ ಪಡೆದ ಅವರು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲರೂ ಸಮನ್ವಯದಿಂದ ಹಾಗೂ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.ನಿಗದಿತ ವಿದ್ಯಾರ್ಹತೆ ಇಲ್ಲದೆ ಅನಧಿಕೃತವಾಗಿ ವೈದ್ಯವೃತ್ತಿ ನಡೆಸುತ್ತಿರುವ ನಕಲಿ ವೈದ್ಯರ ವೈದ್ಯಕೀಯ ಸಂಸ್ಥೆಗಳ ಬಗ್ಗೆ ತೀವ್ರ ನಿಗಾ ವಹಿಸಬೇಕು. ವೈದ್ಯಕೀಯ ಪದವಿ ಪಡೆಯದೇ ಹೇಗೆ ಕ್ಲಿನಿಕ್ ನಡೆಸುತ್ತಾರೆ, ಚಿಕಿತ್ಸೆಗೆ ಬರುವ ಸಾರ್ವಜನಿಕರ ಜೀವನದ ಪ್ರಶ್ನೆಯಾಗಿರುವುದರಿಂದ ಕಾನೂನು ಉಲ್ಲಂಘಿಸಿದವರ ವಿರುದ್ಧ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.ಪರಿಣಾಮಕಾರಿ ಅನುಷ್ಠಾನಗೊಳಿಸಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಕ್ಯಾನಿಂಗ್ ಸಂಸ್ಥೆಗಳ ಮೇಲೆ ಅನಿರೀಕ್ಷಿತ ದಾಳಿ ಮಾಡಬೇಕು ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ತೀವ್ರ ನಿಗಾ ವಹಿಸಬೇಕು. ನ್ಯೂನತೆ ಕಂಡುಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು. ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ತಡೆ ಕಾನೂನು(ಪಿಸಿ ಮತ್ತು ಪಿಎನ್‌ಡಿಟಿ) ಕಾಯ್ದೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ ಸುರಗಿಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಅನಧಿಕೃತವಾಗಿ ಕಾರ್ಯ ನಿರ್ವಸುತ್ತಿರುವ ಕ್ಲಿನಿಕ್‌ಗಳ ಮೇಲೆ ನೇರವಾಗಿ ಕೋರ್ಟ್‌ನಲ್ಲಿ ದೂರು ದಾಖಲಿಸಿ ಹಾಗೂ ನಿಯಮಾನುಸಾರ ದಂಡ ವಿಧಿಸುವಂತೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ದೇವರಾಜ ಎಸ್. ಮಾತನಾಡಿ, ಜಿಲ್ಲೆಯಲ್ಲಿ 497 ಖಾಸಗಿ ಕ್ಲಿನಿಕ್‌ಗಳು, 109 ಖಾಸಗಿ ನರ್ಸಿಂಗ್ ಹೋಂಗಳು ಹಾಗೂ 88 ಲ್ಯಾಬೋರೇಟರಿಗಳು ಕಾರ್ಯನಿರ್ವಹಿಸುತ್ತಿವೆ. ನಿಗದಿತ ವಿದ್ಯಾರ್ಹತೆ ಹೊಂದಿ ಕೆಪಿಎಂಇ ಕಾಯ್ದೆಯಡಿ ನೋಂದಣಿ ಪಡೆಯದೇ 18 ಕ್ಲಿನಿಕ್‌ಗಳು ಹಾಗೂ ನಿಗದಿತ ವೈದ್ಯಕೀಯ ಪದವಿ ಪಡೆಯದೇ ಹಾಗೂ ಕೆಪಿಎಂಇ ಕಾಯ್ದೆಯಡಿ ನೋಂದಣಿ ಪಡೆಯದೇ 16 ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಈ ಕ್ಲಿನಿಕ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು. ಜಿಲ್ಲೆಯಲ್ಲಿ ಸರ್ಕಾರಿ 9 ಹಾಗೂ ಖಾಸಗಿ 76 ಸೇರಿ ಒಟ್ಟು 85 ಸ್ಕ್ಯಾನಿಂಗ್ ಸೆಂಟರ್‌ಗಳಿದ್ದು, ಈ ಪೈಕಿ ಎಂಟು ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಶಾಶ್ವತವಾಗಿ ಬಂದ್ ಮಾಡಲಾಗಿದೆ ಹಾಗೂ ಒಂದು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮೂರು ಸಂಸ್ಥೆಗಳು ಪಿಸಿಆರ್ ದಾಖಲಿಸಿವೆ. ಪ್ರಸ್ತುತ 73 ಸ್ಕ್ಯಾನಿಂಗ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ಸಭೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಿ.ಸಿ. ನಿಡಗುಂದಿ, ಭಾರತೀಯ ವೈದ್ಯಕೀಯ ಸಂಘದ ಪ್ರತಿನಿಧಿ, ಜಿಲ್ಲೆಯ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಸಂಘದ ಪ್ರತಿನಿಧಿ, ಮಹಿಳಾ ಪ್ರತಿನಿಧಿ ಪರಿಮಳಾ ಜೈನ್, ತಾಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಅನಿರೀಕ್ಷೀತ ಭೇಟಿ ನೀಡಿ..ಕೆಪಿಎಂಇ ತಾಲೂಕು ತಪಾಸಣಾ ಸಮಿತಿಯು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಚಿಕಿತ್ಸೆ ದರಪಟ್ಟಿ ಅಳವಡಿಕೆ, ಆಸ್ಪತ್ರೆಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ನಿಯಮಾನುಸಾರ ವಿಲೇವಾರಿ ಮಾಡುತ್ತಿರುವ ಕುರಿತು ಸೇರಿದಂತೆ ಅಲ್ಲಿನ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು. ನಿಯಮ ಉಲ್ಲಂಘನೆ ಮಾಡುವವರಿಗೆ ನೋಟಿಸ್ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.ಕಾಲಮಿತಿಯೊಳಗೆ ನೋಂದಣಿ ಮಾಡಿ..ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿಗೆ ಕೆಪಿಎಂಇ ಆನ್‌ಲೈನ್ ಪೋರ್ಟಲ್‌ನಲ್ಲಿ ಸ್ವೀಕೃತಿಯಾಗುವ ಅರ್ಜಿಗಳನ್ನು ಕಾಲಮಿತಿಯೊಳಗೆ ಪರಿಶೀಲಿಸಿ ದಾಖಲಾತಿಗಳು ಸರಿಯಾಗಿದ್ದರೆ ವಿಳಂಬ ಮಾಡದೇ ನೋಂದಣಿ ಮಾಡಬೇಕು. ನೋಂದಣಿ ಹಾಗೂ ನವೀಕರಣಕ್ಕಾಗಿ ಸ್ವೀಕೃತವಾಗುವ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.