ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಚಿಟ್ಟನಹಳ್ಳಿ ಬಡಾವಣೆಯಲ್ಲಿರುವ ನರ್ಸಿಂಗ್ ಕಾಲೇಜು ಸಮೀಪದ ಕೈಗಾರಿಕಾ ಪ್ರದೇಶದಲ್ಲಿರುವ ಝಮ್ ಝಮ್ ಟಿಂಬರ್ಸ್ ಎಂಬ ಪ್ಲೈವುಡ್ ಫ್ಯಾಕ್ಟರಿಯಲ್ಲಿ ಗುರುವಾರ ಮಧ್ಯಾಹ್ನ ೧.೪೫ರ ಸುಮಾರಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಬಿಸಿಲು ಹಾಗೂ ಒಣಗಿದ್ದ ಮರದ ಸಾಮಾನುಗಳಿಗೆ ಕಾಳ್ಗಿಚ್ಚಿನಂತೆ ಕ್ಷಣ ಮಾತ್ರದಲ್ಲಿ ಬೆಂಕಿ ಹರಡಿ ಕಾರ್ಖಾನೆಯಲ್ಲಿದ್ದ ಭಾರಿ ಪ್ರಮಾಣದ ಮರದ ದಿಮ್ಮಿಗಳು ಹಾಗೂ ಕತ್ತರಿಸಿ ಇಟ್ಟಿದ್ದ ಮರದ ದಿಮ್ಮಿಗಳು, ಪ್ಲೈವುಡ್‌ಗಳು ಸುಟ್ಟು ಹೋಗಿವೆ.
ಬೆಂಕಿಯ ತೀವ್ರತೆ ಹೆಚ್ಚಿದ ಕಾರಣ ಹಾಸನ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನವೀನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಅಗ್ನಿಶಾಮಕ ಠಾಣಾಧಿಕಾರಿ ಸೋಮಶೇಖರ್ ಹಾಗೂ ಚನ್ನರಾಯಪಟ್ಟಣದ ಅಗ್ನಿಶಾಮಕ ಠಾಣಾಧಿಕಾರಿ ದೇವರಾಜೇಗೌಡ ಮತ್ತು ಪಟ್ಟಣದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಬಹಳ ಶ್ರಮಿಸಿದರು.