ಕನ್ನಡಪ್ರಭ ವಾರ್ತೆ ಹಾಸನ
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ವ್ಯಾಪಕ ಮಟ್ಟದಲ್ಲಿ ನಡೆಯುತ್ತಿರುವ ಈ ನಿಯಮ ಉಲ್ಲಂಘನೆಗಳು ರೋಗಿಗಳ ಜೀವ ಭದ್ರತೆ ಹಾಗೂ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಕಾರ್ಯಾಲಯಕ್ಕೆ ಸಲ್ಲಿಸಲಾದ ಮನವಿಯಲ್ಲಿ, ಕಾನೂನುಬದ್ಧ ಎನ್‌ಒಸಿಗಳಿಲ್ಲದ ಆಸ್ಪತ್ರೆಗಳನ್ನು ಗುರುತಿಸಿ ತಕ್ಷಣವೇ ಪರಿಶೀಲನೆ ನಡೆಸಿ, ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳನ್ನು ಬಂದ್ ಮಾಡಲೇಬೇಕು ಎಂದು ಒತ್ತಾಯಿಸಿದರು.
ಪರವಾನಗಿ ಇಲ್ಲದೆ ಆಸ್ಪತ್ರೆಗಳನ್ನು ನಡೆಸುತ್ತಿರುವುದು ಸಾರ್ವಜನಿಕ ಆರೋಗ್ಯಕ್ಕೆ ನೇರ ಬೆದರಿಕೆ, ಅನೇಕ ಆಸ್ಪತ್ರೆಗಳು ಕೆಳಗಿನ ಕಡ್ಡಾಯ ಪರವಾನಗಿಗಳನ್ನು ಪಡೆಯದೇ ಕಾರ್ಯನಿರ್ವಹಿಸುತ್ತಿವೆ. ನೋಂದಣಿ ಮತ್ತು ಪರವಾನಗಿ ನವೀಕರಣ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (೨೦೦೭) ಯಡಿಯಲ್ಲಿ ಪ್ರತಿಯೊಂದು ಖಾಸಗಿ ಆಸ್ಪತ್ರೆಯೂ ಮಾನ್ಯ ಪರವಾನಗಿ, ವಾರ್ಷಿಕ / ಅವಧಿ ನವೀಕರಣ, ಕಟ್ಟಡ, ಸಿಬ್ಬಂದಿ, ಉಪಕರಣಗಳ ಪರಿಶೀಲನೆ ಇವನ್ನು ಕಡ್ಡಾಯವಾಗಿ ಪೂರೈಸಬೇಕಿದೆ. ಆದರೆ ಜಿಲ್ಲೆಯಲ್ಲಿ ಅನೇಕ ಆಸ್ಪತ್ರೆಗಳು ಪರವಾನಗಿ ಅವಧಿ ಮುಗಿದರೂ ನವೀಕರಿಸದೇ, ಅಥವಾ ನೋಂದಣಿಯೇ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ ಎಂದರು.ನೂರಾರು ರೋಗಿಗಳು ಮತ್ತು ಸಿಬ್ಬಂದಿಯ ಪ್ರಾಣ ಭದ್ರತೆ ಅವಲಂಬಿಸಿರುವ ಈ ಮೂಲಸೌಕರ್ಯವನ್ನೇ ಅನೇಕ ಆಸ್ಪತ್ರೆಗಳು ಹೊಂದಿಲ್ಲ ಎಂದು ಹೇಳಲಾಗಿದೆ. ವಿದ್ಯುತ್ ಪರಿವೀಕ್ಷಣೆ ಇಲಾಖೆ ಕಡ್ಡಾಯ. ಎಲ್ಲಾ ವಿದ್ಯುತ್ ಅಳವಡಿಕೆಗಳಿಗೆ ಕೆ.ಎಸ್.ಇ.ಐ. ಅನುಮೋದನೆ ಕಡ್ಡಾಯ, ಆಸ್ಪತ್ರೆಯಲ್ಲಿ ವಿದ್ಯುತ್ ದೋಷವು ಉಂಟಾದರೆ ಆಮ್ಲಜನಕ ಸಿಲಿಂಡರ್ ಸ್ಫೋಟ, ಐಸಿಯು ಉಪಕರಣ ದೋಷ, ಜೀವ ರಕ್ಷಣಾ ಯಂತ್ರಗಳ ಸ್ಥಗಿತ ಹಾಗೂ ದೊಡ್ಡ ಪ್ರಮಾಣದ ಜೀವಹಾನಿ ಸಂಭವಿಸುವ ಸಾಧ್ಯತೆ ಇದೆ. ವಿದ್ಯುತ್ ಸುರಕ್ಷತಾ ಪ್ರಮಾಣಪತ್ರವಿಲ್ಲದೆ ಐಸಿಯು ಮತ್ತು ಓಟಿಗಳನ್ನು ನಡೆಸುತ್ತಿರುವುದು ಕಾನೂನುಬಾಹಿರ ಹಾಗೂ ಅಪಾಯಕಾರಿ ಎಂದು ಆರೋಪಿಸಿದರು.
ತಕ್ಷಣವೇ ಸಮಗ್ರ ಶೋಧ ಮತ್ತು ಪರಿಶೀಲನೆಯನ್ನು ಜಿಲ್ಲಾಡಳಿತ ನಡೆಸಬೇಕು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಖಾಸಗಿ ಆಸ್ಪತ್ರೆಗೆ ಸಮಗ್ರ ಪರಿಶೀಲನೆ, ಪರವಾನಗಿ ಇಲ್ಲದ ಆಸ್ಪತ್ರೆಗಳನ್ನು ತಕ್ಷಣವೇ ಮುಚ್ಚಬೇಕು. ಅಗ್ನಿಶಾಮಕ, ವಿದ್ಯುತ್, ಮಾಲಿನ್ಯ ಮಂಡಳಿ, ಸಂಯುಕ್ತ ದಾಳಿಗೆ ತಂಡ ರಚಿಸಿ ತಪ್ಪಿತಸ್ಥರಿಗೆ ಕಾನೂನು ಕ್ರಮ, ದಂಡ, ಮತ್ತು ಪರವಾನಗಿ ರದ್ದು ಮಾಡಬೇಕು ಎಂದು ಹೇಳಿದರು. ರೋಗಿಗಳ ಜೀವಕ್ಕಿಂತ ಲಾಭ ಮುಖ್ಯವೆಂದು ಪರವಾನಗಿ ಇಲ್ಲದೇ ಆಸ್ಪತ್ರೆಗಳನ್ನು ನಡೆಸುವುದು ಮಾನವೀಯತೆಯ ವಿರುದ್ಧ. ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆರ್‌ಪಿಐ ಸತೀಶ್, ಆದಿವಾಸಿ ಮುಖಂಡ ನವೀನ್ ಸದಾ, ಜೈ ಭೀಮ್ ಕ್ರಾಂತಿ ಸೇನೆ ಜಿಲ್ಲಾಧ್ಯಕ್ಷ ಬಿ.ಎನ್. ಬಸವರಾಜು, ಹರೀಶ್ ಉಳುವಾರೆ ಇತರರು ಇದ್ದರು.