ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ದಲಿತ ಜನಾಂಗದ ದೇವರಾಜು (65) ಭಾನುವಾರ ನಿಧನರಾಗಿದ್ದರು. ಸರ್ಕಾರಿ ಪಾಲಿಟೆಕ್ನಿಕ್ ಹಿಂಭಾಗ ಮೃತರ ಕುಟುಂಬಸ್ಥರಿಗೆ ಸೇರಿದ 3 ಎಕರೆ ಕೃಷಿ ಭೂಮಿ ಇದ್ದು, ಈ ಹಿಂದೆ ಇದ್ದ ರೈತರ ರಸ್ತೆಯನ್ನು ಪಾಲಿಟೆಕ್ನಿಕ್ ಸಂಸ್ಥೆ ಮುಚ್ಚಿದ ಪರಿಣಾಮ ರೈತರು ತಮ್ಮ ಜಮೀನುಗಳಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ.
ಅಲ್ಲದೇ, ರೈತರು ಕೃಷಿ ಚಟುವಟಿಕೆಗೆ ತೆರಳಲು 4 ಕಿ.ಮಿ ಬಳಸಬೇಕಾದ ಸ್ಥಿತಿ ಇತ್ತು. ರೈತ ಕುಟುಂಬದಲ್ಲಿ ಯಾರಾದರೂ ಸತ್ತರೆ ಕಾಲೇಜು ಹಿಂಭಾಗದ ತಮ್ಮ ಜಮೀನಿಗೆ ತೆರಳಿ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗಿತ್ತು. ರಸ್ತೆ ಬಿಡುವಂತೆ ಹಲವು ಸತ್ತಿನ ಹೋರಾಟ ನಡೆಸುತ್ತಿದ್ದರೂ ತಾಲೂಕು ಆಡಳಿತ ಮೂಲ ನಕಾಶೆಯ ಹಳೆಯ ರಸ್ತೆಯನ್ನು ಬಿಡಿಸುವ ಅಥವಾ ಪರ್ಯಾಯ ರಸ್ತೆ ಬಿಡಿಸಿಕೊಡುವ ಬಗ್ಗೆ ಇದುವರೆಗೂ ಮುಂದಾಗದ ಕಾರಣ ಅನಿವಾರ್ಯವಾಗಿ ಶವವನ್ನು ಕಾಲೇಜು ಆವರಣದ ಮೂಲಕವೇ ಸಾಗಿಸಲಾಯಿತು.ರೈತರಿಗೆ ಅಗತ್ಯ ರಸ್ತೆ ಬಿಡಿಸದೆ ಕಾಲೇಜು ಆಡಳಿತ ಮಂಡಲಿ, ತಾಲೂಕು ಆಡಳಿತ ಅಸಡ್ಡೆ ತೋರುತ್ತಿದೆ. ತಕ್ಷಣವೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರ ರಸ್ತೆ ಬಿಡಿಸಿಕೊಡದಿದ್ದರೆ ಮುಂದಿನ ದಿನಗಳಲ್ಲಿ ದಲಿತರ ಶವ ಸಂಸ್ಕಾರವನ್ನು ಕಾಲೇಜು ಆವರಣದಲ್ಲಿಯೇ ನೆರವೇರಿಸುವುದಾಗಿ ಪುರಸಭೆ ಸದಸ್ಯ ಡಿ.ಪ್ರೇಂಕುಮಾರ್ ಎಚ್ಚರಿಸಿದ್ದಾರೆ.