ಕೊಪ್ಪಳ: ಈ ಬಾರಿಯ ಮುಂಗಾರು ಬಹುತೇಕ ಮುನಿಸಿಕೊಂಡಿದ್ದು. ಸುರಿದ ಅಲ್ಪಸ್ವಲ್ಪ ಮಳೆಗೆ ಈಗಾಗಲೇ ಬಿತ್ತನೆ ಮಾಡಿದ ರೈತ ದುಬಾರಿ ಖುರ್ಚು ಮಾಡಿಕೊಂಡು ಹೈರಾಣಾಗಿದ್ದಾನೆ. ಮುಂಗಾರಿನ ಮುನಿಸಿನಿಂದ ಮುಂದಿನ ದಿನಗಳಲ್ಲಿ ಬರದ ಛಾಯೆ ಆವರಿಸಲಿದೆ. ಮೋಡದ ವಾತಾವರಣ ಇದ್ದರೂ ಸಹ ಭೂಮಿಗೆ ಮಳೆ ಹನಿ ತಲುಪುತ್ತಿಲ್ಲ. ರೈತ ವರ್ಗ ಮಳೆ ದಾರಿ ಕಾಯುತ್ತಾ ಕುಳಿತಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಇದುವರೆಗೆ ವಾಡಿಕೆಗಿಂತ ಶೇ. 3ರಷ್ಟು ಹೆಚ್ಚು ಮಳೆ ದಾಖಲಿಸಿದ್ದರೂ ಕಳೆದ 10 ರಿಂದ 12 ದಿನಗಳಿಂದ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಮಳೆಯಾಶ್ರಿತ ಪ್ರದೇಶಗಳ ಬೆಳೆ ಬಾಡುವ ಸ್ಥಿತಿಗೆ ತಲುಪಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ.
ಜಿಲ್ಲೆಯಲ್ಲಿ ಜೂ.28ರ ಅಂತ್ಯದವರೆಗೆ ವಾಡಿಕೆ 157 ಮಿಮೀ ಮಳೆಯಾಗಬೇಕಿದ್ದರೆ ವಾಸ್ತವವಾಗಿ 161.60 ಮಿಮೀ ಮಳೆಯಾಗಿದ್ದು, ಒಟ್ಟಾರೆ ಶೇ.3ಕ್ಕೂ ಅಧಿಕ ಮಳೆ ದಾಖಲಾಗಿದೆ. ಆದರೆ, ಕಳೆದ ಕೆಲವು ದಿನಗಳಿಂದ ಮಳೆ ಕೈಕೊಟ್ಟ ಪರಿಣಾಮ ಜಿಲ್ಲಾದ್ಯಂತ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಜಿಲ್ಲೆಯ ಮುಂಗಾರು ಬಿತ್ತನೆ ಗುರಿ 3,49,892 ಹೆಕ್ಟೇರ್ ಆಗಿದ್ದು, ಇದುವರೆಗೆ 1,63,546 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಒಟ್ಟು ಗುರಿಯ ಶೇ. 47ರಷ್ಟು ಬಿತ್ತನೆ ಪೂರ್ಣಗೊಂಡಿದೆ.ಅಂತರ್ಜಲ ಮಟ್ಟ ಕುಸಿತ: ಮಳೆ ಅಭಾವದ ಹಿನ್ನೆಲೆ ಅಂತರ್ಜಲ ಮಟ್ಟ ಸಹ ಕುಸಿಯುತ್ತಿದೆ. ಬೇಸಿಗೆ ದಿನದಲ್ಲಿ ಮಾತ್ರವಲ್ಲದೆ ಮಳೆಗಾಲದ ಈ ದಿನದಲ್ಲೂ ಸಹ ಬೋರವೆಲ್‌ಗಳಲ್ಲಿ ಮಳೆ ಅಭಾವದಿಂದ ನೀರಿನ ಪ್ರಮಾಣ ಕಡಿಮೆ ಆಗಿದೆ. ಜಿಲ್ಲಾದ್ಯಂತ ವರುಣನ ಮುನಿಸು ಮುಂದುವರೆದಿರುವುದರಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆ ಬಾಡಲಾರಂಭಿಸಿವೆ.
ಕಳೆದ ವರ್ಷ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿ ಕಾರ್ಯ ಹಮ್ಮಿಕೊಂಡ ಹಿನ್ನೆಲೆ ರೈತರು ಎರಡನೇ ಬೆಳೆ ಬೆಳೆಯದೇ ತ್ಯಾಗ ಮಾಡಿದ್ದರು. ಆದರೀಗ ಪ್ರಕೃತಿ ವಿಕೋಪದ ಪರಿಣಾಮ ಪ್ರಸಕ್ತ ಸಾಲಿನಲ್ಲಿ ಮೊದಲನೇ ಬೆಳೆ ಬೆಳೆಯಲಾರದ ಸಂದಿಗ್ಧ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ಜಿಲ್ಲೆಯ ಕುಕನೂರು, ಯಲಬುರ್ಗಾ, ಕನಕಗಿರಿ, ಕುಷ್ಟಗಿ ಹಾಗೂ ಕೊಪ್ಪಳ ತಾಲೂಕಿನ ಅಳವಂಡಿ, ಇರಕಲ್ಲಗಡ ಹೋಬಳಿ ರೈತರು ದಿನನಿತ್ಯ ಮಳೆರಾಯನಿಗಾಗಿ ಜಪ ಶುರು ಮಾಡಿದ್ದು, ವರುಣ ದೇವ ಕೃಪೆ ತೊರಬೇಕಿದೆ.
ಜೂನ್ ತಿಂಗಳ ಮೊದಲ ವಾರದಲ್ಲಿ ಮಳೆ ಆಗಿದ್ದು ನಂತರ ದಿನದಲ್ಲಿ ಒಣ ಹವೆ ಇದೆ. ಮಳೆ ಅಭಾವ ಇದೆ ಎಂದು ಕೊಪ್ಪಳ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಟಿ. ಕೃಷ್ಣಮೂರ್ತಿ ತಿಳಿಸಿದ್ದಾರೆ.