ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಕಲಿಕಾ ಹಬ್ಬ ಕಾರ್ಯಕ್ರಮವನ್ನು ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷೆ ಗೀತಾ ಹರೀಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು-ಶಿಕ್ಷಣ ಇಲಾಖೆ ಹಮ್ಮಿಕೊಂಡಿರುವ ಕಲಿಕಾ ಹಬ್ಬ ಕಾರ್ಯಕ್ರಮದ ಮೂಲಕ ಮಕ್ಕಳ ಬುದ್ಧಿಶಕ್ತಿ ಬೆಳೆಯಲು ಇದು ಸಹಕಾರಿಯಾಗುತ್ತದೆ. ಇದರ ಜೊತೆಯಲ್ಲಿ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಇದೊಂದು ಉತ್ತಮವಾದ ವೇದಿಕೆಯಾಗುತ್ತದೆ ಎಂದರು.
ಶನಿವಾರಸಂತೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಿ.ಕೆ.ದಿನೇಶ್ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಕಲಿಕೆಗಳಿಗೆ ಪೂರಕವಾದ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಶಿಕ್ಷಣ ಇಲಾಖೆ ನೂತನವಾಗಿ ರೂಪಿಸಿರುವ ಎಫ್‍ಎಲ್‍ಎನ್ ಆಧಾರಿತ ಕಾರ್ಯಕ್ರಮದ ಮೂಲಕ ಪ್ರತಿಯೊಂದು ಕ್ಲಸ್ಟರ್ ಹಂತದಲ್ಲಿ ಮಕ್ಕಳ ಕಲಿಕಾ ಹಬ್ಬವನ್ನು ಹಮ್ಮಿಕೊಳ್ಳುತ್ತದೆ. ಒಂದರಿಂದ ಐದನೇ ತರಗತಿಯ ವರೆಗಿನ ಶಾಲಾ ಮಕ್ಕಳು ಕಲಿಕಾ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.ಕಲಿಕಾ ಹಬ್ಬದಲ್ಲಿ ಮಕ್ಕಳಿಗೆ ಗಣಿತ, ರಶಪ್ರಶ್ನೆ, ಭಾಷಣ, ಕತೆ ಹೇಳುವುದು, ಕತೆ ಕಟ್ಟುವುದು, ಚಿತ್ರಕಲೆ, ಹಸ್ತಾಕ್ಷರ ಮುಂತಾದ ಪ್ರತಿಭೆಗಳಿಗೆ ಸಂಬಂಧ ಪಟ್ಟ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂ.ಎಸ್.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ್ ವಿವಿಧ ಶಾಲಾ ಮುಖ್ಯಸ್ಥರಾದ ಬಿ.ಟಿ.ಪುಟ್ಟರಾಜು, ಪುಟ್ಟಸ್ವಾಮಿ, ಎಚ್. ಆರ್. ಮಲ್ಲೇಶ್, ಶಾಂತಮ್ಮ, ಶಿಕ್ಷಕಿ ಮಮತ, ಎಸ್‍ಡಿಎಂಸಿ ಸದಸ್ಯರು, ವಿವಿಧ ಶಾಲೆಗಳ ಶಿಕ್ಷಕ, ಶಿಕ್ಷಕಿಯರು ಹಾಜರಿದ್ದರು. ಕಲಿಕಾ ಹಬ್ಬದಲ್ಲಿ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳಿಂದ ಬಂದ 110 ಮಕ್ಕಳು ಭಾಗವಹಿಸಿದ್ದರು.