ಬೆಳ್ತಂಗಡಿ: ಪ್ರತಿ ಮಗುವಿನಲ್ಲೂ ಒಂದೊಂದು ಪ್ರತಿಭೆ ಇದ್ದೇ ಇರುತ್ತದೆ. ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಹೆತ್ತವರು ಹಾಗೂ ಶಿಕ್ಷಕರ ಕರ್ತವ್ಯ. ಶಾಲೆಯ ಪ್ರತಿಭಾ ಕಾರಂಜಿ ಮಕ್ಕಳ ಸುಪ್ತ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಲು ಇರುವ ವೇದಿಕೆ. ಮಕ್ಕಳು ಯಾವುದೇ ಅಳುಕಿಲ್ಲದೆ ತಮ್ಮ ಪ್ರತಿಭಾ ಪ್ರದರ್ಶನದ ಮೂಲಕ ತಮ್ಮ ಕಲೆ, ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಉಜಿರೆ ಗ್ರಾ.ಪಂ.ಅಧ್ಯಕ್ಷೆ ಉಷಾಕಿರಣ್ ಕಾರಂತ್ ಹೇಳಿದ್ದಾರೆ.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಜಿರೆ-ಹಳೆಪೇಟಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಶಾಲೆಯ ನಿವೃತ್ತ ಶಿಕ್ಷಕರಾದ ಹರಿದಾಸ್ ಎ ಮತ್ತು ಹರ್ಷಕುಮಾರ್ ಕೆ ಎನ್ ಹಾಗು ಶಿಕ್ಷಕ ಶೀನಪ್ಪ ಗೌಡ ಅವರನ್ನು ಶಾಲಾ ಶತಮಾನೋತ್ಸವ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕ ಕೂಸಪ್ಪ ಗೌಡ, ಕಾವ್ಯ ಮತ್ತು ಅಶ್ವಿನಿ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಧನ್ಯಕುಮಾರ್, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರತಿಮಾ, ಶಾಲಾ ಶತಮಾ ನೋತ್ಸವ ಸಮಿತಿ ಸಂಚಾಲಕ ಸೋಮಶೇಖರ ಶೆಟ್ಟಿ, ಕಾರ್ಯದರ್ಶಿ ಅಬೂಬಕ್ಕರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬೂಬಕ್ಕರ್, ಮುಖ್ಯ ಶಿಕ್ಷಕ ಬಾಲಕೃಷ್ಣ ನಾಯ್ಕ್ ಉಪಸ್ಥಿತರಿದ್ದರು.
ಶಿಕ್ಷಕಿ ಪುಷ್ಪಾವತಿ ನಿರೂಪಿಸಿದ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ಸ್ವಾಗತಿಸಿ, ಮುಖ್ಯ ಶಿಕ್ಷಕ ಬಾಲಕೃಷ್ಣ ನಾಯ್ಕ್ ವಂದಿಸಿದರು. 11 ಸರಕಾರಿ, 2 ಅನುದಾನಿತ ಹಾಗು 2 ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ವಿವಿಧ ವಿಷಯಗಳಲ್ಲಿ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು.