ನ.5ರಂದು ಸಿಎಂ ಡಿ.ಕೆ.ಶಿವಕುಮಾರ್‌ ಜಿಲ್ಲೆಗೆ ಭೇಟಿ

KannadaprabhaNewsNetwork |  
Published : Oct 17, 2026, 01:15 AM IST
16ಕೆಆರ್ ಎಂಎನ್ 1.ಜೆಪಿಜಿನಗರದ ಹೊರ ವಲಯದ ಅರ್ಚಕರಹಳ್ಳಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿರುವ ಶ್ರೀ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕ - ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಶಾಸಕ ಇಕ್ಬಾಲ್ ಹುಸೇನ್ ರವರು ವಿದ್ಯಾರ್ಥಿಗಳ ಅವಹಾಲು ಆಲಿಸಿದರು. | Kannada Prabha

ಸಾರಾಂಶ

ರಾಮನಗರ: ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನವೆಂಬರ್ 5ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು

ರಾಮನಗರ: ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನವೆಂಬರ್ 5ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ನಗರದ ಹೊರವಲಯದ ಅರ್ಚಕರಹಳ್ಳಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿರುವ ಡಿ.ದೇವರಾಜ ಅರಸು ಬಾಲಕ - ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಗಡಿ, ರಾಮನಗರ ಹಾಗೂ ಕನಕಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.

ಮಾಗಡಿ ತಾಲೂಕಿನ ಕುದೂರು, ರಾಮನಗರ ತಾಲೂಕಿನ ಅವ್ವೇರಹಳ್ಳಿ, ಪಾದರಹಳ್ಳಿ, ಬನ್ನಿಕುಪ್ಪೆ, ಹಾರೋಹಳ್ಳಿ ತಾಲೂಕಿನ ಚೀಲೂರು, ಕನಕಪುರ ತಾಲೂಕಿನ ಹೆಗ್ಗನೂರು ಗ್ರಾಮಗಳಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ ಪೂರ್ಣಗೊಂಡಿದ್ದು, ಅವುಗಳನ್ನು ಮುಖ್ಯಮಂತ್ರಿಗಳು ಲೋಕಾಪರ್ಣೆ ಮಾಡುವರು ಎಂದು ತಿಳಿಸಿದರು.

ಸುಗ್ಗನಹಳ್ಳಿಯಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಜಾಗವನ್ನು ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣಕ್ಕಾಗಿ ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಇನ್ನು ರಾಮನಗರ ಟೌನಿನಲ್ಲಿ ಹಳೇ ಜಿಲ್ಲಾಸ್ಪತ್ರೆ ಕಟ್ಟಡದಲ್ಲಿಯೇ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭಿಸಲಾಗುತ್ತಿದೆ. ಆ ಜಾಗವನ್ನು ಆರೋಗ್ಯ ಇಲಾಖೆಯಿಂದ ಶಿಕ್ಷಣ ಇಲಾಖೆಗೆ ಹಸ್ತಾಂತರ ಮಾಡಿದ್ದೇವೆ. 6 -7 ಕೋಟಿ ರುಪಾಯಿ ವೆಚ್ಚದಲ್ಲಿ ಕಟ್ಟಡ ನವೀಕರಣ ಮಾಡಲಾಗುವುದು ಎಂದು ಹೇಳಿದರು.

ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಜಿಲ್ಲಾ ಕೇಂದ್ರ ಹೊಂದಿರುವ ರಾಮನಗರ ಕ್ಷೇತ್ರ ಅಭಿವೃದ್ಧಿಯಲ್ಲಿ ಮಾತ್ರವಲ್ಲ ಮೂಲಸೌಕರ್ಯ ಕಲ್ಪಿಸುವ ವಿಚಾರದಲ್ಲಿಯೇ ಸಾಕಷ್ಟು ಹಿಂದುಳಿದಿದೆ. ಹಾಗಾಗಿ ಮುಖ್ಯಮಂತ್ರಿಗಳು ತಮ್ಮೊಂದಿಗೆ ರಾಮನಗರ ಕ್ಷೇತ್ರದ ಅಭಿವೃದ್ಧಿ ಬಗ್ಗೆಯೇ ಚರ್ಚೆ ನಡೆಸಿದ್ದು, ಅಗತ್ಯ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕೇಂದ್ರ ರಾಮನಗರದಲ್ಲಿ ಸುಸಜ್ಜಿತವಾದ ನ್ಯಾಯಾಲಯ ಬೇಕಾಗಿತ್ತು. ಹೀಗಾಗಿ ತಾಲೂಕು ಪಂಚಾಯಿತಿಗೆ ಸೇರಿದ 2 ಎಕರೆ ಜಾಗವನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಸ್ತಾಂತರ ಮಾಡಿಸಲಾಗಿದೆ. ಅಲ್ಲಿ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ 76 ಕೋಟಿ ರುಪಾಯಿಗಳ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದ್ದು, ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಮಂಚನಬೆಲೆ ಎಡ - ಬಲ ದಂಡೆ ನಾಲೆಗಳನ್ನು 70 ಕೋಟಿ ರು.ವೆಚ್ಚದಲ್ಲಿ ಆಧುನೀಕರಣ ಮಾಡಲಾಗುತ್ತಿದೆ.

ಈ ನಾಲೆಗಳು ಸುಮಾರು 32 ಕಿ.ಮೀ ಉದ್ದವಿದ್ದು, ಇದರಲ್ಲಿ 22 ಕಿ.ಮೀ ಉದ್ದದಷ್ಟು ನಾಲೆಗಳನ್ನು ಹೊಸದಾಗಿ ನಿರ್ಮಿಸಲಾಗುವುದು. ಈ ನಾಲೆಗಳ ಮೂಲಕ ಕಸಬಾ ಮತ್ತು ಕೈಲಾಂಚ ಭಾಗಕ್ಕೆ ನೀರು ಹರಿಸಲಾಗುವುದು ಎಂದು ತಿಳಿಸಿದರು.

ಮಂಚನಬೆಲೆ ಜಲಾಶಯದಿಂದ ಕಸಬಾ ಮತ್ತು ಕೈಲಾಂಚ ಹೋಬಳಿಯ ಪ್ರತಿ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಪ್ರಗತಿಯಲ್ಲಿದೆ. 146 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಂಬಂಧ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ರದ್ದಾಗಿದೆ. ಬಡವರಿಗೆ 10 ಸಾವಿರ ನಿವೇಶನಗಳ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಹಾರೋಹಳ್ಳಿ ರಸ್ತೆ ಅಗಲೀಕರಣಕ್ಕಾಗಿ 49 ಕೋಟಿ ವೆಚ್ಚದ ಎಸ್ಟಿಮೆಂಟ್ ಅನ್ನು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಕಳುಹಿಸಿದ್ದರು. ಇದಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿರವರು 10 ಕೋಟಿ ನೀಡಿದ್ದರು. ಮುಖ್ಯಮಂತ್ರಿಗಳು 39 ಕೋಟಿ ಮಂಜೂರು ಮಾಡಿದ್ದು, 20 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.

ರಾಮನಗರದಲ್ಲಿ ದೇವರಾಜ ಅರಸು ಭವನ, ತಿಗಳರ ಸಮುದಾಯ ಭವನ, ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ತಲಾ 2 ಕೋಟಿ ಹಾಗೂ ಶಿಡ್ಲಕಲ್ಲುನಲ್ಲಿ ವಸತಿ ಗೃಹ ನಿರ್ಮಾಣ ಸಂಬಂಧ 27 ಕೋಟಿ ಬಿಡುಗಡೆ ಅನುದಾನ ಬಿಡುಗಡೆಯಾಗಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಬಾಕ್ಸ್‌

ಎಚ್ಡಿಕೆ ಬಾಯಿಗೆ ಬಂದಂತೆ ಮಾತಾಡಿದರೆ ಗೌವರ ಇರಲ್ಲ

ರಾಮನಗರ: ಭಗವಂತ ಅವರಿಗೆ ಉನ್ನತ ಸ್ಥಾನ ಕೊಟ್ಟಿದ್ದಾನೆ. ಎಲ್ಲಿ ಕುಳಿತು ಏನು ಮಾತನಾಡಬೇಕೊ ಅದಷ್ಟೇ ಮಾತನಾಡಬೇಕು. ಬಾಯಿಗೆ ಬಂದಂತೆ ಮಾತನಾಡಿದರೆ ಗೌರವ ಇರುವುದಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳಾಗಿ ನಾವು ಮಾಡಬೇಕಾಗಿರುವ ಕೆಲಸಗಳು ಬೇಕಾದಷ್ಟಿದೆ. ಕೇಂದ್ರದಲ್ಲಿ ಅವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಆ ಜವಾಬ್ದಾರಿಯನ್ನು ಮೊದಲು ನಿಭಾಯಿಸಲಿ. ಎಲ್ಲಿ ಏನು ಮಾತನಾಡಬೇಕೊ ಅದಷ್ಟೇ ಮಾತನಾಡಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವರು ಮತ್ತು ಶಾಸಕರಿಗೆ ಸ್ಟಿಂಗ್ ಆಪರೇಷನ್ ಬಗ್ಗೆ ಎಚ್ಚರವಾಗಿರುವಂತೆ ಹೇಳಿದ್ದಾರೆ. ಅದನ್ನು ಹೇಳಿದಾಕ್ಷಣ ಅವರಿಗೆಯೇ ಸ್ಟಿಂಗ್ ಆಪರೇಷನ್ ಪಟ್ಟ ಕಟ್ಟುವುದು ಎಷ್ಟು ಸರಿ ಎಂದು ಇಕ್ಬಾಲ್ ಹುಸೇನ್ ಪ್ರಶ್ನೆ ಮಾಡಿದರು.

16ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಹೊರವಲಯದ ಅರ್ಚಕರಹಳ್ಳಿಯಲ್ಲಿರುವ ದೇವರಾಜ ಅರಸು ಬಾಲಕ - ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಶಾಸಕ ಇಕ್ಬಾಲ್ ಹುಸೇನ್ ವಿದ್ಯಾರ್ಥಿಗಳ ಅವಹಾಲು ಆಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡ್ರಗ್ಸ್ ವಿರೋಧಿ ಜಾಗೃತಿ ರಾಯಭಾರಿಗಳಾಗಿ: ಡೀಸಿ ಡಾ.ಅನುರಾಧ
ಜಿ.ಪಂ ಮೀಸಲಾತಿ ಪಾರದರ್ಶಕತೆ ಪರಿಶೀಲಿಸಿ: ಇನಾಮ್ದಾರ್‌