ತೆರಿಗೆ ಏರಿಸಿ ವೈಸರಾಯ್‌ನಂತೆ ಸಿಎಂ ವರ್ತನೆ: ಬಿಜೆಪಿ

KannadaprabhaNewsNetwork | Published : Apr 2, 2025 1:00 AM

ಸಾರಾಂಶ

ಕರುಣೆ, ಕನಿಕರವೇ ಇಲ್ಲದೇ ತೆರಿಗೆ ವಿಧಿಸುತ್ತ, ಬೆಲೆ ಏರಿಕೆ ಮಾಡುತ್ತ ಸಿಎಂ ಸಿದ್ದರಾಮಯ್ಯ ಈಸ್ಟ್ ಇಂಡಿಯಾ ಕಂಪನಿಯ ವೈಸರಾಯ್‌ನಂತೆ ವರ್ತಿಸುತ್ತಿದ್ದಾರೆ. ಉಪ್ಪಿನಿಂದ ಗಾಳಿವರೆಗೆ ಎಲ್ಲದರ ಮೇಲೂ ಮನಸ್ಸಿಗೆ ಬಂದಂತೆ ತೆರಿಗೆ ಹೇರುತ್ತಿದ್ದಾರೆ. ಜನರ ಬದುಕಿಗೆ ಬರೆ ಎಳೆಯುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಆರೋಪಿಸಿದ್ದಾರೆ.

- ಕರುಣೆ, ಕನಿಕರ ಇಲ್ಲದೇ ಬೆಲೆಗಳ ಏರಿಸಿ, ತೆರಿಗೆ ಹೇರಿಕೆ: ಬಿಜೆಪಿ ಜಿಲ್ಲಾಧ್ಯಕ್ಷ ಆರೋಪ - ಇಂದು ಬೆಂಗಳೂರಲ್ಲಿ, ಏ.5ರಿಂದ ದಾವಣಗೆರೆಯಲ್ಲಿ ಬಿಜೆಪಿ ಹೋರಾಟ: ರಾಜಶೇಖರ ನಾಗಪ್ಪ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕರುಣೆ, ಕನಿಕರವೇ ಇಲ್ಲದೇ ತೆರಿಗೆ ವಿಧಿಸುತ್ತ, ಬೆಲೆ ಏರಿಕೆ ಮಾಡುತ್ತ ಸಿಎಂ ಸಿದ್ದರಾಮಯ್ಯ ಈಸ್ಟ್ ಇಂಡಿಯಾ ಕಂಪನಿಯ ವೈಸರಾಯ್‌ನಂತೆ ವರ್ತಿಸುತ್ತಿದ್ದಾರೆ. ಉಪ್ಪಿನಿಂದ ಗಾಳಿವರೆಗೆ ಎಲ್ಲದರ ಮೇಲೂ ಮನಸ್ಸಿಗೆ ಬಂದಂತೆ ತೆರಿಗೆ ಹೇರುತ್ತಿದ್ದಾರೆ. ಜನರ ಬದುಕಿಗೆ ಬರೆ ಎಳೆಯುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಚಿತ ಗ್ಯಾರಂಟಿ ಭರವಸೆಗಳ ಮೇಲೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೆರಿಗೆ ಭಾರ ಹೊರಿಸುವ ಮೂಲಕ ಈಸ್ಟ್ ಇಂಡಿಯಾ ಕಂಪನಿಯ ವೈಸರಾಯ್‌ನಂತೆ ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದರು.

ಎಐಸಿಸಿ ನಾಯಕಿ ಸೋನಿಯಾ ಗಾಂಧಿಯವರದ್ದು ಬ್ರಿಟಿಷ್ ರಾಜಮನೆತನದಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇ ರಾಜ ಪರಿವಾರದ ವೈಸರಾಯ್‌ನಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶಕ್ಕೂ, ರಾಜ್ಯಕ್ಕೂ ಸಂಬಂಧವೇ ಇಲ್ಲವೆಂಬಂತೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವರ್ತನೆ ಇದೆ ಎಂದರು.

ಇಂದು ಅಹೋರಾತ್ರಿ ಧರಣಿ:

ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಏ.2ರಂದು ಬೆಳಗ್ಗೆ 11ರಿಂದ ಏ.3ರ ಬೆಳಗ್ಗೆ 11 ಗಂಟೆವರೆಗೆ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ಹೋರಾಟದಲ್ಲಿ ಪಕ್ಷದ ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಪಕ್ಷದ ಹಿರಿಯ-ಕಿರಿಯ ಮುಖಂಡರು ಭಾಗವಹಿಸುವರು ಎಂದು ತಿಳಿಸಿದರು.

ಹೋರಾಟದ ಮುಂದುವರಿದ ಭಾಗವಾಗಿ ಏ.5ರಿಂದ 3 ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಬಿಜೆಪಿ ಜಿಲ್ಲಾ ಘಟಕ ನಡೆಸಲಿದೆ. ಜಿಲ್ಲಾ, ಮಂಡಲ ಮಟ್ಟದಲ್ಲೂ ಹೋರಾಟ ನಡೆಯಲಿದೆ. ಬೆಂಗಳೂರಿನಲ್ಲಿ ಏ.2 ಮತ್ತು 3ರಂದು ನಡೆಯುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ದಾವಣಗೆರೆ ಜಿಲ್ಲೆಯಿಂದ ಸುಮಾರು 50-60 ಮುಖಂಡರು, ಪದಾಧಿಕಾರಿಗಳು ಸಹ ಭಾಗವಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಎಲ್ಲ ವರ್ಗದ ತೆರಿಗೆಯನ್ನೂ ಕಾಂಗ್ರೆಸ್ ಸರ್ಕಾರ ಏರಿಸಿದೆ. ಜನಸಾಮಾನ್ಯರ ಹಣವನ್ನು ಲೂಟಿ ಮಾಡಿ, ಮುಸ್ಲಿಮರಿಗೆ ನೀಡುತ್ತಿದೆ. ಈ ಮೂಲಕ ಓಲೈಕೆ ರಾಜಕಾರಣಕ್ಕೆ ಇಳಿದಿದೆ. ಮುಸ್ಲಿಮರಿಗಾಗಿ ಪ್ರತ್ಯೇಕ ನೀತಿಯನ್ನೇ ಸಿದ್ದರಾಮಯ್ಯ ಸರ್ಕಾರ ಅನುಸರಿಸುತ್ತಿದೆ. ಪ್ರತಿ ಹೆಜ್ಜೆಯಲ್ಲೂ ದರ ಏರಿಕೆ ಮಾಡಿದೆ. ವಿದ್ಯುತ್ ದರ, ವೈದ್ಯಕೀಯ ವೆಚ್ಚ, ಮುದ್ರಾಂಕ ಶುಲ್ಕ, ವೃತ್ತಿ ಪರ ತೆರಿಗೆ ಹೆಚ್ಚಿಸಿದೆ. ಅಲ್ಲದೇ, ಪರಿಶಿಷ್ಟರಿಗೆ ಮೀಸಲಾಗಿಟ್ಟಿದ್ದ ₹38 ಸಾವಿರ ಕೋಟಿಯನ್ನು ಗ್ಯಾರೆಂಟಿ ಹೆಸರಲ್ಲಿ ಬಳಸಿ, ಪರಿಶಿಷ್ಟರಿಗೆ ಘೋರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ₹9 ಹಾಲಿನ ದರ ಏರಿಕೆ ಮಾಡಿದೆ. ರೈತರಿಗೆ ಪ್ರೋತ್ಸಾಹಧನ ನೀಡಿಲ್ಲ. ಸರ್ಕಾರವು ಬೆಲೆ, ತೆರಿಗೆ ಏರಿಕೆ ಮಾಡುವ ಮೂಲಕ ಬೊಕ್ಕಸ ತುಂಬಿಸಿಕೊಳ್ಳುವತ್ತ ನಿರತವಾಗಿದೆ. ರೈತರು, ಬಡವರ ಮೇಲಿನ ಕಾಳಜಿ ಇಲ್ಲ. ಇದು ಕಾಳಜಿ ಇಲ್ಲದ ಸರ್ಕಾರ. ಗ್ಯಾರಂಟಿ ಹೆಸರಲ್ಲಿ ರಾಜ್ಯದ ಜನತೆಗೆ ಮೋಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಬಡವರ, ರೈತರ, ಮಹಿಳೆಯರ ಹಿತಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳು, ಅನಿಲಕುಮಾರ ನಾಯ್ಕ, ಐರಣಿ ಅಣ್ಣೇಶಕುಮಾರ, ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ, ಎಚ್.ಪಿ.ವಿಶ್ವಾಸ್, ಕೊಟ್ರೇಶ ಗೌಡ ಇದ್ದರು.

- - -

-1ಕೆಡಿವಿಜಿ62.ಜೆಪಿಜಿ:

ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article