ತೊಟ್ಟಂನ ಸಂತ ಅನ್ನಮ್ಮ ಚರ್ಚ್‌ನ ಸಾಮಾಜಿಕ ಸಂಪರ್ಕ ಸಾಧನಗಳ ಆಯೋಗ, ಪ್ರತಿಭಾಂಗಣ್ ಸಾಂಸ್ಕೃತಿಕ ಸಂಘಟನೆ ತೊಟ್ಟಂ ಹಾಗೂ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಆಶ್ರಯದಲ್ಲಿ ತೊಟ್ಟಂ ಚರ್ಚ್ ವಠಾರದಲ್ಲಿ ನಾದಮಣಿ ನಾಲ್ಕೂರು ನೇತೃತ್ವದಲ್ಲಿ ಕತ್ತಲ ಹಾಡು ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ರಂಗಭೂಮಿ ಸ್ವಾಂತ್ರ್ಯಪೂರ್ವ ದಿನಗಳಿಂದಲೂ ಆಡಳಿತ ನಡೆಸುವವರಿಗೆ ಪ್ರಶ್ನೆಗಳನ್ನು ಕೇಳಿದೆ ಹಾಗೂ ಸಮಾಜ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತೊಟ್ಟಂ ಚರ್ಚಿನ ಧರ್ಮಗುರು ಡೆನಿಸ್ ಡೆಸಾ ಹೇಳಿದರು.ಅವರು ಶನಿವಾರ ಇಲ್ಲಿನ ತೊಟ್ಟಂನ ಸಂತ ಅನ್ನಮ್ಮ ಚರ್ಚ್‌ನ ಸಾಮಾಜಿಕ ಸಂಪರ್ಕ ಸಾಧನಗಳ ಆಯೋಗ, ಪ್ರತಿಭಾಂಗಣ್ ಸಾಂಸ್ಕೃತಿಕ ಸಂಘಟನೆ ತೊಟ್ಟಂ ಹಾಗೂ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ಆಶ್ರಯದಲ್ಲಿ ಶನಿವಾರ ತೊಟ್ಟಂ ಚರ್ಚ್ ವಠಾರದಲ್ಲಿ ನಾದಮಣಿ ನಾಲ್ಕೂರು ನೇತೃತ್ವದಲ್ಲಿ ಕತ್ತಲ ಹಾಡು ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಮಾತನಾಡಿದರು.ಯೇಸು ಕ್ರಿಸ್ತ, ಬಸವಣ್ಣ, ಬುದ್ಧ, ಕನಕದಾಸ ಇವರೆಲ್ಲರೂ ಅನ್ಯಾಯದ ವಿರುದ್ಧ ದನಿ ಎತ್ತಿ, ಧಾರ್ಮಿಕ, ರಾಜಕೀಯ ನಾಯಕರಿಗೆ ಪ್ರಶ್ನೆಗಳನ್ನು ಹಾಕುವುದರ ಮೂಲಕ ಮಾದರಿಯಾದರು. ಕಲ್ಮಶ ತುಂಬಿದ ಜಗತ್ತಿನಲ್ಲಿ ತಮ್ಮ ತಂಬೂರಿ ನಾದದಲ್ಲಿ ಶಾಂತಿ, ಪ್ರೀತಿ, ಸೌಹಾರ್ದತೆ, ಸಹಿಷ್ಣುತೆ, ತ್ಯಾಗ, ಅಧ್ಯಾತ್ಮದ ಮಹತ್ವಗಳನ್ನು ಪ್ರಚುರಪಡಿಸುವ ವಿಶಿಷ್ಟ ಕಾಯಕವನ್ನು ನಾದಮಣಿ ನಾಲ್ಕೂರು ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಪ್ರಶ್ನೆ ಕೇಳುವ ಹಕ್ಕಿದ್ದು, ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷವನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗಿದ್ದು ಅದನ್ನು ಉಪಯೋಗಿಸೋಣ ಎಂದರು.ಕಾರ್ಯಕ್ರಮದಲ್ಲಿ ಕತ್ತಲಲ್ಲಿ ತೊಳಲಾಡುತ್ತಿರುವ ಹಲವಾರು ಜನರ ಬಾಳಿಗೆ ಬೆಳಕಾದ ಆಪತ್ಫಾಂಧವ ಈಶ್ವರ್ ಮಲ್ಪೆ ಹಾಗೂ ನಾದಮಣಿ ನಾಲ್ಕೂರು ಅವರನ್ನು ಸನ್ಮಾನಿಸಲಾಯಿತು.‘ಕತ್ತಲ ಹಾಡು’ ಪರಿಕಲ್ಪನೆಯಲ್ಲಿ ತತ್ವಪದ, ದಾಸರ ಪದ, ಕಡಕೋಳ ಮಡಿವಾಳಪ್ಪರ ವಚನ, ಅಬ್ರಹಾಂ ಲಿಂಕನ್ ಬರೆದ ಪತ್ರ, ಜಿ.ಎಸ್.ಶಿವರುದ್ರಪ್ಪ ಅವರ ಭಾವಗೀತೆ ಮಾತ್ರವಲ್ಲದೆ ಹೊಸ ತಲೆಮಾರಿನ ಕವಿತೆಗಳನ್ನು ನಾದಮಣಿ ಅವರು ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರಸ್ತುತಪಡಿಸಿದರು.ಕಾರ್ಯಕ್ರಮದಲ್ಲಿ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಪಾಲನಾ ಸಮಿತಿ ಉಪಾಧ್ಯಕ್ಷ ಸುನೀಲ್ ಫರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫರ್ನಾಂಡಿಸ್, ಕಾನ್ವೆಂಟಿನ ಮುಖ್ಯಸ್ಥರಾದ ಸಿಸ್ಟರ್ ಸುಷ್ಮಾ, ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿ ತೊಟ್ಟಂ ರಮೇಶ್ ತಿಂಗಳಾಯ, ಸಾಮಾಜಿ ಸಂಪರ್ಕ ಸಾಧನಗಳ ಸಂಯೋಜಕರಾದ ಆಗ್ನೆಲ್ ಫರ್ನಾಂಡಿಸ್, ಪ್ರತಿಭಾಂಗಣ್ ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ ಕ್ಲಾರೆನ್ಸ್ ಫರ್ನಾಂಡಿಸ್, ವಿನೋದ್, ಯಾದವ ಹಾಗೂ ಇತರರು ಉಪಸ್ಥಿತರಿದ್ದರು. ಲವೀನಾ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.