ಲಕ್ಷ್ಮೇಶ್ವರ ತಾಲೂಕಿನಲ್ಲಿ ಹೂಳು ತುಂಬಿ ವ್ಯರ್ಥವಾಗುತ್ತಿರುವ ಬಾಂದಾರಗಳು

KannadaprabhaNewsNetwork |  
Published : Apr 02, 2025, 01:00 AM IST
ಪೊಟೋ-ಸಮೀಪದ ಗೊಜನೂರು ಗ್ರಾಮದ ಹತ್ತಿರದ ಬಾಂದಾರದಲ್ಲಿ ಹೂಳು ತುಂಬಿ ಕಸ ಕಡ್ಡಿಗಳು ಬೆಳೆದಿರುವುದು . | Kannada Prabha

ಸಾರಾಂಶ

ಲಕ್ಷ್ಮೇಶ್ವರ ತಾಲೂಕಿನಲ್ಲಿ ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ಹಳ್ಳದ ನೀರು ವ್ಯರ್ಥವಾಗಿ ಹರಿದು ಹೋಗಬಾರದು ಎನ್ನುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆ ನಿರ್ಮಿಸಿರುವ ಬಾಂದಾರಗಳಲ್ಲಿ ಹೂಳು ತುಂಬಿ, ಕಸಕಡ್ಡಿಗಳು ಬೆಳೆದು ನೀರು ನಿಲ್ಲದಂತಾಗಿದೆ.

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ಹಳ್ಳದ ನೀರು ವ್ಯರ್ಥವಾಗಿ ಹರಿದು ಹೋಗಬಾರದು ಎನ್ನುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆ ನಿರ್ಮಿಸಿರುವ ಬಾಂದಾರಗಳಲ್ಲಿ ಹೂಳು ತುಂಬಿ, ಕಸಕಡ್ಡಿಗಳು ಬೆಳೆದು ನೀರು ನಿಲ್ಲದಂತಾಗಿದೆ.

ಲಕ್ಷ್ಮೇಶ್ವರ ತಾಲೂಕಿನಲ್ಲಿ ಹರಿಯುವ ದೊಡ್ಡ ಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆಯು ಸುಮಾರು 20ಕ್ಕೂ ಹೆಚ್ಚು ಬಾಂದಾರಗಳನ್ನು ಕಳೆದ 10 ವರ್ಷಗಳ ಹಿಂದೆ ನಿರ್ಮಿಸಿದೆ. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ಅವಧಿಯಲ್ಲಿ ನಿರ್ಮಿಸಿರುವ ಬಾಂದಾರಗಳಲ್ಲಿ ಈಗ ಹೂಳು ತುಂಬಿ ಕಸ ಕಡ್ಡಿಗಳು ಬೆಳೆದು ನೀರು ನಿಲ್ಲದೆ ನಿರರ್ಥಕವಾಗುತ್ತಿವೆ.

ಬಾಂದಾರ ನಿರ್ಮಾಣದಿಂದ ಮಳೆಗಾಲದಲ್ಲಿ ವೇಗವಾಗಿ ಹಳ್ಳದ ನೀರು ಹರಿದು ಹೋಗುವುದನ್ನು ತಡೆದು ಬಾಂದಾರದಲ್ಲಿ ನೀರು ನಿಲ್ಲುವುದರಿಂದ ಅಕ್ಕ ಪಕ್ಕದ ಜಮೀನುಗಳ ರೈತರು ಮಳೆ ಹೋದ ವೇಳೆಯಲ್ಲಿ ತಮ್ಮ ಹೊಲಗಳಿಗೆ ನೀರು ಹಾಯಿಸಿಕೊಳ್ಳುವ ಮೂಲಕ ಬೆಳೆ ಉಳಿಸಿಕೊಳ್ಳುವ ಜೊತೆಯಲ್ಲಿ ಭೂ ಸವಕಳಿ ತಡೆಯುವ ಮಹತ್ವದ ಉದ್ದೇಶ ಹೊಂದಿತ್ತು.

ಆದರೆ ಕಳೆದ 10-12 ವರ್ಷಗಳಿಂದ ಮಳೆಯಿಂದಾಗಿ ಬಾಂದಾರದಲ್ಲಿ ಹೂಳು ತುಂಬಿ ನೀರು ನಿಲ್ಲದಂತಾಗಿ ಬಾಂದಾರ ನಿರ್ಮಿಸಿದ ಉದ್ದೇಶವೇ ವ್ಯರ್ಥವಾಗಿ ಹೋಗಿದೆ. ಅಲ್ಲದೆ ಬಾಂದಾರದಲ್ಲಿ ಹೂಳು ತುಂಬಿದ್ದರಿಂದ ಹಳ್ಳದ ನೀರು ಅಕ್ಕ ಪಕ್ಕದ ಹೊಲಗಳಿಗೆ ನುಗ್ಗುವ ಮೂಲಕ ಹೊಲದಲ್ಲಿನ ಬದುವುಗಳು ಕಿತ್ತು ಹೋಗಿ ಹೊಲಗಳಲ್ಲಿ ಕೊರಕಲು ಬಿದ್ದಿವೆ. ಇದರಿಂದ ರೈತರು ಫಲವತ್ತಾದ ಮಣ್ಣನ್ನು ಕಳೆದುಕೊಂಡು ಪರಿತಪಿಸುವಂತಾಗಿದೆ ಎನ್ನುತ್ತಾರೆ ತಾಲೂಕಿನ ಗೊಜನೂರ, ಪು,ಬಡ್ನಿ, ಬಟ್ಟೂರ, ಹುಲ್ಲೂರು ಗ್ರಾಮದ ರೈತರು.

ಕಣ್ಣು ಮುಚ್ಚಿಕೊಂಡಿರುವ ಸಣ್ಣ ನೀರಾವರಿ ಇಲಾಖೆ: ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಈ ಬಾಂದಾರಗಳಲ್ಲಿ ಹೂಳು ತುಂಬಿಕೊಂಡಿದ್ದರೂ ಅದರಲ್ಲಿನ ಹೂಳು ತೆಗೆಯಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕಾದ ಅಧಿಕಾರಿಗಳು, ಬಾಂದಾರದಲ್ಲಿನ ಹೂಳು ತೆಗೆಯಿಸಲು ನಮ್ಮಲ್ಲಿ ಯಾವುದೇ ಅನುದಾನವಿಲ್ಲ ಹಾಗೂ ಗ್ರಾಮ ಪಂಚಾಯಿತಿಗಳು ಆ ಗ್ರಾಮದ ವ್ಯಾಪ್ತಿಯಲ್ಲಿನ ಬಾಂದಾರಗಳ ಹೂಳನ್ನು ನರೇಗಾ ಯೋಜನೆ ಅಡಿಯಲ್ಲಿ ತೆಗೆಯಿಸಬಹುದಾಗಿದೆ ಎಂದು ಸಬೂಬು ಹೇಳುತ್ತಾರೆ.

ಗ್ರಾಪಂ ಪಿಡಿಓಗಳು ನರೇಗಾ ಯೋಜನೆ ಅಡಿಯಲ್ಲಿ ಹೊಲದಲ್ಲಿ ಬದುವು ನಿರ್ಮಾಣ, ಕೆರೆ ನಿರ್ಮಾಣಕ್ಕೆ ಆಧ್ಯತೆ ನೀಡುತ್ತೇವೆ. ಅಲ್ಲದೆ ಹೂಳು ತೆಗೆಯಿಸಿ ಬೇರೆಡೆಗೆ ಸಾಗಿಸಲು ನಮ್ಮಲ್ಲಿ ಅವಕಾಶವಿಲ್ಲ ಎನ್ನುತ್ತಾರೆ.

ಬಾಂದಾರಗಳಲ್ಲಿ ನೀರು ನಿಲ್ಲಿಸುವ ಉದ್ದೇಶದಿಂದ ಆದರೆ ಈಗ ಅದು ವ್ಯರ್ಥವಾಗಿ ಹೋಗುತ್ತಿರುವುದು ನೋವಿನ ಸಂಗತಿಯಾಗಿದೆ. ಈಗ ಬೇಸಿಗೆ ಕಾಲವಾಗಿದ್ದರಿಂದ ಜಿಲ್ಲಾಧಿಕಾರಿಗಳು ಈಗಲಾದರೂ ಸಣ್ಣ ನೀರಾವರಿ ಇಲಾಖೆಗೆ ಸೂಚನೆ ನೀಡಿ ಬಾಂದಾರಗಳಲ್ಲಿನ ಹೂಳು ತೆಗೆಯಿಸಿ ನೀರು ನಿಲ್ಲುವಂತೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಪು.ಬಡ್ನಿ ಗ್ರಾಮದ ಮುತ್ತಣ್ಣ ಚೋಟಗಲ್ಲ ಹಾಗೂ ಸುಭಾಷ ಬಟಗುರ್ಕಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ