ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆ । ಮಾಹಿತಿ ಶಿಕ್ಷಣ ಕಾರ್‍ಯಕ್ರಮ
ಕನ್ನಡಪ್ರಭ ವಾರ್ತೆ ಚಿತ್ರದುರ್ಗತಾಯಿ ಮತ್ತು ಮಗುವಿನ ಮರಣ ನಿಯಂತ್ರಿಸಲು ಕಿಲ್ಕಾರಿ ಯೋಜನೆಯ ಸಮರ್ಪಕ ಬಳಕೆ ಅಗತ್ಯವಾಗಿದೆ. ಗರ್ಭಿಣಿಯರಿಗೆ ಕಿಲ್ಕಾರಿ ಯೋಜನೆಯ ಮಹತ್ವ ತಿಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಆಡಿಯೋ ಸಂದೇಶಗಳನ್ನು ಆಲಿಸಲು ವ್ಯವಸ್ಥೆ ಮಾಡುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಎನ್.ಜೆ.ಸೋಮಶೇಖರ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕಿಲ್ಕಾರಿ ಯೋಜನೆಯ ಅನುಷ್ಠಾನ ಕುರಿತಂತೆ ನಡೆದ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗನವಾಡಿಗೆ ಬರುವ ಎಲ್ಲಾ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಸೇವನೆಯ ಜೊತೆಗೆ ಮುಂಜಾಗ್ರತೆ ಕ್ರಮಗಳನ್ನು ತಿಳಿಸಬೇಕು ಎಂದರು.ಆಶಾ ಕಾರ್ಯಕರ್ತೆಯರು ನಿಯಮಿತವಾಗಿ ಗರ್ಭಿಣಿಯರ ಮನೆಗಳಿಗೆ ತೆರಳಿ, ಅವರ ಆರೋಗ್ಯದ ಕುರಿತು ಮಾಹಿತಿ ಸಂಗ್ರಹಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಹ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳೊಂದಿಗೆ ಸಹಕರಿಸಿ ಕಿಲ್ಕಾರಿ ಯೋಜನೆ ಅನುಷ್ಠಾನಕ್ಕೆ ಬೆಂಬಲಿಸಿಬೇಕು. ತಾಯಿ ಹಾಗೂ ಶಿಶು ಮರಣ ನಿಯಂತ್ರಿಸಲು, ಅಪೌಷ್ಟಿಕತೆ ಹೋಗಲಾಡಿಸಲು, ಮಕ್ಕಳ ಲಸಿಕಾ ಪ್ರಮಾಣ 100ಕ್ಕೆ 100ರಷ್ಟು ಗುರಿ ಸಾಧಿಸಲು ಕಿಲ್ಕಾರಿ ಯೋಜನೆ ಸಹಕಾರಿಯಾಗಿಲಿದೆ. ತಾಯಿ ಮಕ್ಕಳ ಆರೋಗ್ಯ ಬಲಪಡಿಸಲು ಕಿಲ್ಕಾರಿ ಯೋಜನೆಯನ್ನು ಜಿಲ್ಲೆಯ ಎಲ್ಲಾ ನೊಂದಾಯಿತ ಮತ್ತು ಒಂದು ವರ್ಷದೊಳಗಿನ ಮಕ್ಕಳ ತಾಯಂದಿರಿಗೆ ಮೊಬೈಲ್ ಮೂಲಕ ಮಾಹಿತಿ ಶಿಕ್ಷಣ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ, ಆರ್‌ಸಿಎಚ್ ಪೋರ್ಟಲ್‌ನಲ್ಲಿ ಪ್ರಸಕ್ತ ವರ್ಷದಲ್ಲಿ 12,015 ಗರ್ಭಿಣಿಯರು, 26,100 ಒಂದು ವರ್ಷದೊಳಗಿನ ಮಕ್ಕಳ ತಾಯಂದಿರು ಜಿಲ್ಲೆಯಾದ್ಯಂತ ನೋಂದಣಿಯಾಗಿದ್ದಾರೆ. ಇವರೆಲ್ಲರೂ ಕಿಲ್ಕಾರಿ ಯೋಜನೆಯ ಫಲಾನುಭವಿಗಳು. ಇವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಿಲ್ಕಾರಿ ಯೋಜನೆ ಸಂದೇಶದ ರೆಕಾರ್ಡ್ ಕರೆ ಮಾಡಲಾಗುತ್ತಿದೆ ಎಂದರು.ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮ ಚಟುವಟಿಕೆಗಳನ್ನು ಸಭೆಯಲ್ಲಿ ಪ್ರದರ್ಶಿಸಿದರು.
ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ.ಅಭಿನವ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಕುಟುಂಬ ಯೋಜನಾಧಿಕಾರಿ ಡಾ.ರೇಖಾ, ಹೊಸದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ರಾಘವೇಂದ್ರ ಪ್ರಸಾದ್, ಮೊಳಕಾಲ್ಮೂರು ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಕುಮಾರ್, ಜಿಲ್ಲಾ ವ್ಯವಸ್ಥಾಪಕ ಪ್ರಫುಲ್ಲಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ವೀರೇಂದ್ರ ಪಾಟೀಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಪೂರ್ಣಿಮಾ, ಅರ್ಜುನ್, ದಸ್ತಗೀರ್ ಸಾಬ್ ಇದ್ದರು.ಯಲ್ಲದಕೆರೆ ಶುಶ್ರೂಷಾಧಿಕಾರಿ ಅಮಾನತು:
ಅನಧಿಕೃತ ಗೈರು ಹಾಗೂ ಕರ್ತವ್ಯದ ವೇಳೆ ಪಾನಮತ್ತರಾಗಿ ಮೇಲಾಧಿಕಾರಿಗಳೊಂದಿಗೆ ಅನುಚಿತ ವರ್ತನೆ ತೋರಿದ ಯಲ್ಲದಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಾಧಿಕಾರಿ ಎಸ್.ಸಿದ್ದೇಶ್ವರ ಅವರನ್ನು ಅಮಾನತುಗೊಳಿಸಿ ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.ಎಸ್.ಸಿದ್ದೇಶ್ವರ ಅವರಿಗೆ ಈ ಕುರಿತು ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಮೇಲಾಧಿಕಾರಿಗಳು ಸೂಚನೆಗಳನ್ನು ಸಹ ನೀಡಿದ್ದರು. ಆದರೂ ಎಸ್.ಸಿದ್ದೇಶ್ವರ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ತೋರಲಿಲ್ಲ. ಆದ ಕಾರಣ ಆಡಳಿತಾಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದ್ದರು. ಈ ಹಿನ್ನಲೆಯಲ್ಲಿ ಕೆಸಿಎಸ್(ಸಿಸಿಎ) ನಿಯಮಾವಳಿ-1957ರ ನಿಯಮ -10(1)ರ ಅನ್ವಯ ಅಮಾನತು ಮಾಡಲಾಗಿದೆ.