ಆರ್ಥಿಕ ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರದಿಂದ ಬೆಲೆ ಏರಿಕೆಯ ಲೂಟಿ: ಸೋಮಶೇಖರ ರೆಡ್ಡಿ

KannadaprabhaNewsNetwork | Published : Apr 2, 2025 1:00 AM

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬೆಲೆ ಏರಿಕೆ ನಿಯಂತ್ರಣ ತಪ್ಪಿದ್ದು, ಗ್ಯಾರಂಟಿ ಜಾರಿಗೆ ಈ ಸರ್ಕಾರ ಜನರ ಲೂಟಿಗಿಳಿದಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬೆಲೆ ಏರಿಕೆ ನಿಯಂತ್ರಣ ತಪ್ಪಿದ್ದು, ಗ್ಯಾರಂಟಿ ಜಾರಿಗೆ ಈ ಸರ್ಕಾರ ಜನರ ಲೂಟಿಗಿಳಿದಿದೆ ಎಂದು ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಆಪಾದಿಸಿದರು.

ಪಕ್ಷದ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಜನರ ಹಿತ ಕಾಯುವ ಯಾವುದೇ ಯೋಚನೆ, ಯೋಜನೆಗಳಿಲ್ಲ. ಹೀಗಾಗಿಯೇ ಬೆಲೆ ಏರಿಕೆಯ ಮೂಲಕ ಮಧ್ಯಮ ವರ್ಗದ ಜನರ ಜೀವ ಹಿಂಡುತ್ತಿದೆ. ಸರ್ಕಾರದ ಧೊರಣೆಯಿಂದ ಜನರು ಈಗಾಗಲೇ ರೋಸಿ ಹೋಗಿದ್ದಾರೆ ಎಂದರು.

ವಿದ್ಯುತ್ ದರ, ಹೊರ ರೋಗಿಗಳ ನೋಂದಣಿ ಶುಲ್ಕ, ಮರಣೋತ್ತರ ಪ್ರಮಾಣಪತ್ರ ಶುಲ್ಕ ಹೆಚ್ಚಳ, ವೈದ್ಯಕೀಯ ಪ್ರಮಾಣಪತ್ರ, ದಾಖಲಾತಿ, ಲ್ಯಾಬ್ ಪರೀಕ್ಷೆ, ಆಪರೇಷನ್ ಎಕ್ಸರೇ, ಡ್ರೆಸ್ಸಿಂಗ್ ಶುಲ್ಕ, ಇಸಿಜಿ, ರಕ್ತಪರೀಕ್ಷೆ ಸೇರಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ ನಾನಾ ಸೇವೆಗಳ ಮೇಲೆ ವಿಪರೀತ ಸೇವಾ ಶುಲ್ಕ ಹೆಚ್ಚಿಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಆಸ್ಪತ್ರೆಗಳು, ಒಪಿಡಿಗಳಲ್ಲಿ ಶೇ.10ರಿಂದ 30ರಷ್ಟು ಸೇವಾಶುಲ್ಕ ದರ ಏರಿಕೆಯಾಗಿದೆ. ಮುದ್ರಾಂಕ ಶುಲ್ಕ ವಿಪರೀತ ಏರಿಸಲಾಗಿದೆ. ಅಫಿಡವಿಟ್ ಶುಲ್ಕ, ದತ್ತು ಸ್ವೀಕಾರಪತ್ರ, ಕ್ಯಾನ್ಸಲೇಷನ್ ಡೀಡ್, ಸರ್ಟಿಫೈಡ್ ಕಾಪಿ, ಮಾರ್ಟಗೇಜ್, ಲೀಸ್ ಸರೆಂಡರ್ ಶುಲ್ಕ ಸೇರಿದಂತೆ ಒಟ್ಟು ನಾಲ್ಕು ಪಟ್ಟು ಏರಿಕೆ ಮಾಡಲಾಗಿದೆ.

ವೃತ್ತಿಪರ ತೆರಿಗೆಯಲ್ಲೂ ಏರಿಕೆಯಾಗಿದೆ. ಕೃಷಿ ಭೂಮಿ, ನಿವೇಶನಗಳು, ಅಪಾರ್ಟ್‌ಮೆಂಟ್‌ಗಳು, ವಾಹನ ನೋಂದಣಿ, ರಾಜ್ಯಮಟ್ಟದ ಕಾಲೇಜು ಶುಲ್ಕ, ಬಸ್‌ದರ, ಬಿತ್ತನೆ ಬೀಜಗಳು, ವಿದ್ಯುತ್‌, ನೀರಿನ ಸುಂಕವನ್ನು ಏರಿಕೆ ಮಾಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 9 ರೂಪಾಯಿಯಷ್ಟು ಹಾಲಿನ ದರ ಏರಿಕೆಯಾಗಿದೆ. ಹಾಲು ಉತ್ಪಾದಕ ರೈತರಿಗೆ ನೀಡಬೇಕಾದ ₹662 ಕೋಟಿಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಹಾಲು ಉತ್ಪಾದಕರ ಹಿತ ಕಾಯುವ ಯಾವುದೇ ಯೋಜನೆಗಳು ಈ ಸರ್ಕಾರದ ಬಳಿಯಿಲ್ಲ. ಬದಲಿಗೆ ಬರೀ ದರ ಏರಿಕೆಯ ಮಾರ್ಗವನ್ನಷ್ಟೇ ಅನುಸರಿಸುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿದೆ. ಸರ್ಕಾರ ನಡೆಸಲು ಇವರ ಬಳಿ ಹಣವಿಲ್ಲ. ಈ ಸರ್ಕಾರದ ಅವೈಜ್ಞಾನಿಕ ಆಡಳಿತ ನೀತಿಯಿಂದಾಗಿ ಆರ್ಥಿಕ ದಿವಾಳಿಯಾಗಿದೆ. ಇದರಿಂದ ಪಾರಾಗಲು ಬಡವರು ಹಾಗೂ ಮಧ್ಯಮವರ್ಗಗಳ ಮೇಲೆ ಬೆಲೆ ಏರಿಕೆ ಹಾಗೂ ಸೇವಾಶುಲ್ಕಗಳ ಏರಿಕೆಯ ಅಸ್ತ್ರ ಪ್ರಯೋಗಿಸಿದೆ. ಸರ್ಕಾರದ ನೀತಿ ನಿರ್ಧಾರಗಳಿಂದ ಜನರು ರೋಸಿ ಹೋಗಿದ್ದಾರೆ. ಪ್ರತಿಪಕ್ಷವಾಗಿ ಬಿಜೆಪಿ ಕಾಂಗ್ರೆಸ್ ಜನವಿರೋಧಿ ನಿಲುವುಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ವನದಲ್ಲಿ ಬುಧವಾರದಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಬಳ್ಳಾರಿಯಿಂದ ಸಹ ಕಾರ್ಯಕರ್ತರು, ಮುಖಂಡರು ಬೆಂಗಳೂರಿಗೆ ತೆರಳಿಲಿದ್ದಾರೆ. ಸರ್ಕಾರದ ವಿರುದ್ಧ ಹೋರಾಟ ಮುಂದುವರಿಯಲಿದ್ದು ಜಿಲ್ಲಾ, ತಾಲೂಕು ಮಟ್ಟದಲ್ಲಿ ಸಹ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ಮೇಗಾ ಡೈರಿ ಸ್ಥಾಪನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಶಾಸಕರು, ಡೈರಿ ಬಳ್ಳಾರಿಯಲ್ಲಿ ಸ್ಥಾಪನೆಯಾಗಬೇಕು. ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು. ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಡೈರಿಯನ್ನು ವಿಜಯನಗರ ಜಿಲ್ಲೆಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡರೆ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು. ಪಕ್ಷದ ಮುಖಂಡರಾದ ಡಾ. ಅರುಣಾ ಕಾಮಿನೇನಿ, ಡಾ. ಬಿ.ಕೆ. ಸುಂದರ್, ಎಸ್.ಗುರುಲಿಂಗನಗೌಡ, ಓಬಳೇಶ್ ಸುದ್ದಿಗೋಷ್ಠಿಯಲ್ಲಿದ್ದರು.

Share this article