ದಸಂಸ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ ಹೇಳಿಕೆ । 19ರಂದು ಬೆಂಗಳೂರು ಚಲೋಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಎಂಟು ತಿಂಗಳಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಹರಣ ಮಾಡುತ್ತ ದಲಿತರಿಗೆ ಅನ್ಯಾಯವೆಸಗುತ್ತಿದ್ದಾರೆ.
ಒಳ ಮೀಸಲಾತಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮಾರಸಂದ್ರಮುನಿಯಪ್ಪ ನೇತೃತ್ವದಲ್ಲಿ ಮಾ.19 ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ, ಬಿಎಸ್‍ಪಿ, ಆರ್‌ಪಿಐ, ಮಾದಿಗ ದಂಡೋರ, ಆದಿಜಾಂಬವ ಸಂಘಟನೆ ಒಳಗೊಂಡಂತೆ 50ಕ್ಕೂ ಹೆಚ್ಚು ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ನೆರೆಯ ಆಂಧ್ರದಲ್ಲಿ ಈಗಾಗಲೆ ಒಳ ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಎ.ಜೆ.ಸದಾಶಿವ ಆಯೋಗವನ್ನು ರಚಿಸಿದ ಸರ್ಕಾರವೇ ಕೈಕಟ್ಟಿ ಹಾಕಿದೆ. 2ನೇ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೂ ಸದಾಶಿವ ಆಯೋಗದ ವರದಿ ನೋಡಿಲ್ಲವೆಂದರು.
ಕಾಂಗ್ರೆಸ್ ಮೃದು ಕೋಮುವಾದಿಯಾದರೆ ಬಿಜೆಪಿಯವರು ನೇರ ಕೋಮುವಾದಿಗಳು. ಇವರಿಬ್ಬರ ನಡುವೆ ಪರಿಶಿಷ್ಟ ಜಾತಿಯಲ್ಲಿನ ನೂರ ಒಂದು ಜಾತಿಯವರು ಹೈರಾಣಾಗಿದ್ದಾರೆ. ದಲಿತರ ಅಭಿವೃದ್ದಿಗಾಗಿಯೇ ಬಳಬೇಕಾಗಿರುವ ಎಸ್ಸಿಪಿ, ಟಿಎಸ್ಪಿ ಹಣವನ್ನು ಐದು ಉಚಿತ ಗ್ಯಾರೆಂಟಿಗಳಿಗೆ ಮುಖ್ಯಮಂತ್ರಿ ಬಳಸುತ್ತಿದ್ದಾರೆ. ಏಳು ಅಭಿವೃದ್ದಿ ನಿಗಮಗಳಿಗೆ ಹಂಚಿಕೆಯಾಗಿರುವ ಪ್ರಕಾರ ಹಣ ಬಿಡುಗಡೆಯಾಗಿಲ್ಲ. ಒಳ ಮೀಸಲಾತಿ ಜಾರಿಯಾಗುವತನಕ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ಡಾ.ಎನ್.ಮೂರ್ತಿ ಎಚ್ಚರಿಸಿದರು. ಬೈಲ ಹೊನ್ನಯ್ಯ, ಲೇಖಕ ಹೆಚ್.ಆನಂದ್‍ಕುಮಾರ್, ವಿಶ್ವನಾರಾಯಣಮೂರ್ತಿ, ದಲಿತ ಮುಖಂಡ ಬಿ.ರಾಜಪ್ಪ, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.