ಅಧಿಕಾರ ಭಯದಿಂದ ಸಿಎಂ ಜಾತಿಗಣತಿ ಬ್ರಹ್ಮಾಸ್ತ್ರ: ರೇಣು

KannadaprabhaNewsNetwork |  
Published : Apr 17, 2025, 12:45 AM IST
16ಕೆಡಿವಿಜಿ1-ದಾವಣಗೆರೆ ಬಿಜೆಪಿ ಕಚೇರಿಯಲ್ಲಿ ಏ.21ರ ಜನಾಕ್ರೋಶ ಯಾತ್ರೆ ಪೂರ್ವಭಾವಿಯಾಗಿ ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಅಧ್ಯಕ್ಷತೆಯ ಸಭೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಇತರರು ಭಾಗವಹಿಸಿದ್ದರು. | Kannada Prabha

ಸಾರಾಂಶ

ಅಧಿಕಾರ ಹಂಚಿಕೆ ಭಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಜನಗಣತಿ ಬ್ರಹ್ಮಾಸ್ತ್ರವನ್ನು ಬಿಡುತ್ತಿದ್ದಾರೆ. ಇಂತಹ ಅವೈಜ್ಞಾನಿಕ ಜಾತಿ ಜನಗಣತಿ ವರದಿಗೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

- ಅವೈಜ್ಞಾನಿಕ ವರದಿಗೆ ವಿರೋಧವಿದೆ । ಖರ್ಗೆ, ಸಿದ್ದು, ಡಿಕೆಶಿ, ನಮ್ಮನೆಗೂ ಸಮೀಕ್ಷೆಗೆ ಬಂದಿಲ್ಲ: ರೇಣುಕಾಚಾರ್ಯ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಧಿಕಾರ ಹಂಚಿಕೆ ಭಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಜನಗಣತಿ ಬ್ರಹ್ಮಾಸ್ತ್ರವನ್ನು ಬಿಡುತ್ತಿದ್ದಾರೆ. ಇಂತಹ ಅವೈಜ್ಞಾನಿಕ ಜಾತಿ ಜನಗಣತಿ ವರದಿಗೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಃ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ನಮ್ಮ ಯಾರ ಮನೆಗೂ ಬಂದು ಸಮೀಕ್ಷೆ ಕೈಗೊಂಡಿಲ್ಲ. ಆದರೂ ಇಂತಹ ಜಾತಿ ಜನಗಣತಿ ವರದಿ ಬಿಡುಗಡೆಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದರು.

ಜಾತಿ ಜನಗಣತಿ ವರದಿ ನಾವು ವಿರೋಧಿಸುತ್ತೇವೆ. ಜಾತಿ ಜನಗಣತಿಯಲ್ಲಿ ಪರಿಶಿಷ್ಟ ಜಾತಿ-ಪಂಗಡ, ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ಜಾತಿ, ಸಮುದಾಯಗಳ ಕುರಿತಂತೆ ಅವೈಜ್ಞಾನಿಕ ಮಾಹಿತಿ ಇದೆ. ವೀರಶೈವ ಲಿಂಗಾಯತ, ಒಕ್ಕಲಿಗ ಸೇರಿದಂತೆ ಎಲ್ಲ ಜಾತಿಗಳನ್ನು ಒಡೆಯುವ ಕೆಲಸ ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಹೀಗೆಯೇ ಪರಿಸ್ಥಿತಿ ಮುಂದುವರಿದರೆ ರಾಜ್ಯದ ಜನತೆ ದಂಗೆ ಏಳುತ್ತಾರೆ. ಜಾತಿ ಜನಗಣತಿ ವರದಿ ಅನುಷ್ಠಾನಕ್ಕೆ ತಂದರೆ ಬೆಂಕಿಹೊತ್ತಿ ಉರಿಯುತ್ತದೆ ಎಂದು ಎಚ್ಚರಿಸಿದರು.

ಪರಿಶಿಷ್ಟ ಜಾತಿ, ಪಂಗಡ, ವೀರಶೈವ ಲಿಂಗಾಯತ, ಬ್ರಾಹ್ಮಣರು, ಒಕ್ಕಲಿಗ, ಹಾಲುಮತ, ಮರಾಠರು, ಯಾದವರು, ಗೊಲ್ಲರು, ಉಪ್ಪಾರರು, ಇತರೆ ಸಣ್ಣಪುಟ್ಟ ಸಮಾಜಗಳ ಮುಖಂಡರು, ಸಾಮಾನ್ಯ ಜನರ ಮನೆ ಬಾಗಿಲಿಗೆ ಹೋಗಿ ಸಮೀಕ್ಷೆ ಮಾಡಿಲ್ಲ. ಅವೈಜ್ಞಾನಿಕ ಜಾತಿ ಜನಗಣತಿ ವರದಿ ರಾಜ್ಯ ಸಂಪುಟದ ವೀರಶೈವ ಲಿಂಗಾಯತ ಸಚಿವರು ವಿರೋಧ ಮಾಡದಿದ್ದರೆ, ಸಮಾಜದ ಬಗ್ಗೆ ಕಾಳಜಿ, ಸ್ವಾಭಿಮಾನ ಇಲ್ಲದಿದ್ದರೆ ತಕ್ಷಣ ರಾಜೀನಾಮೆ ಕೊಟ್ಟು ಹೊರಬನ್ನಿ ಎಂದರು.

ಡಿಸೆಂಬರೊಳಗೆ ಅಧಿಕಾರ ಹಸ್ತಾಂತರ:

ಇದೇ ಡಿಸೆಂಬರ್ ವೇಳೆಗೆ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಆಗೇ ಆಗುತ್ತದೆ. ಇದು ನೂರಕ್ಕೆ ನೂರರಷ್ಟು ಸತ್ಯ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯೂ ಅಷ್ಟೇ ಸತ್ಯ. ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ. ವೀರಶೈವ ಲಿಂಗಾಯತ ಸಚಿವರು, ಶಾಸಕರು ಸ್ಥಾನಮಾನ, ಅಧಿಕಾರ ಮರೆತು, ಸಮಾಜಕ್ಕಾಗಿ, ನಿಮ್ಮ ಸ್ವಾಭಿಮಾನಕ್ಕಾಗಿ ಜಾತಿ ಜನಗಣತಿ ವರದಿ ವಿರುದ್ಧ ಧ್ವನಿ ಎತ್ತಿ ಎಂದು ಸಲಹೆ ನೀಡಿದರು.

ಹೊಸದುರ್ಗ ಶ್ರೀಗಳ ಹೇಳಿಕೆ ವಿವಾದಾತ್ಮಕ ಹೇಳಿಕೆ ಮಾಡುವುದಿಲ್ಲ. ನಾವು ಹೇಳುವುದಿಷ್ಟೇ. ಹಸಿದವರಿಗೆ ಈ ಜಾತಿ ಜನಗಣತಿ ಉಪಯೋಗವಾಗಬೇಕೆಂದರೆ ಸಣ್ಣಪುಟ್ಟ ಸಮಾಜಗಳು, ವೀರಶೈವ ಲಿಂಗಾಯತರು, ಹಿಂದುಳಿದ ವರ್ಗಗಳು, ಉಪ ಜಾತಿಗಳು, ಒಳ ಪಂಗಡಗಳಿಗೆ ನ್ಯಾಯ ಸಿಗಬೇಕು. ಆ ಎಲ್ಲ ಜಾತಿ, ಪಂಗಡ, ಒಳಪಂಗಡಗಳಿಗೂ ನ್ಯಾಯ ಸಿಗಬೇಕು ಎಂದು ರೇಣುಕಾಚಾರ್ಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮುಖಂಡರಾದ ಲೋಕಿಕೆರೆ ನಾಗರಾಜ, ಮಾಡಾಳು ಮಲ್ಲಿಕಾರ್ಜುನ, ಬಿ.ಜಿ. ಅಜಯಕುಮಾರ, ಎಚ್.ಪಿ.ವಿಶ್ವಾಸ, ರಾಜು ವೀರಣ್ಣ, ಪಂಜು ಇತರರು ಇದ್ದರು.

- - -

(ಬಾಕ್ಸ್)

* 21ಕ್ಕೆ ಜನಾಕ್ರೋಶ ಯಾತ್ರೆ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳಾಗಿವೆ. 48 ವಸ್ತುಗಳ ಬೆಲೆಗಳನ್ನು ರಾಜ್ಯ ಸರ್ಕಾರ ಏರಿಸಿದೆ. ಇದೀಗ ಮೂರನೇ ಹಂತದ ಜನಾಕ್ರೋಶ ಯಾತ್ರೆ ಏ.21ರಂದು ದಾವಣಗೆರೆಯಿಂದ ಶುರುವಾಗಲಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ, ಮೊದಲ ಹಂತದ ಜಯ ಗಳಿಸಿದ್ದೇವೆ. ಮೂರನೇ ಹಂತದ ಹೋರಾಟವೂ ಯಶಸ್ವಿಯಾಗುವ ಸಂಪೂರ್ಣ ವಿಶ್ವಾಸವಿದೆ ಎಂದು ರೇಣುಕಾಚಾರ್ಯ ಹೇಳಿದರು.

- - - -16ಕೆಡಿವಿಜಿ1.ಜೆಪಿಜಿ:

ದಾವಣಗೆರೆ ಬಿಜೆಪಿ ಕಚೇರಿಯಲ್ಲಿ ಏ.21ರ ಜನಾಕ್ರೋಶ ಯಾತ್ರೆ ಪೂರ್ವಭಾವಿಯಾಗಿ ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಅಧ್ಯಕ್ಷತೆ ಸಭೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಇತರರು ಭಾಗವಹಿಸಿದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು