75 ಮಂದಿ ಜಿಬಿಎ ಸಮಿತಿಗೆ ಸಿಎಂ ಅಧ್ಯಕ್ಷ

KannadaprabhaNewsNetwork |  
Published : Aug 27, 2025, 01:00 AM IST
ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ | Kannada Prabha

ಸಾರಾಂಶ

ಐದು ನಗರ ಪಾಲಿಕೆಗಳ ಅಸ್ತಿತ್ವಕ್ಕೆ ಬರುವ ಸೆ.2ರಂದು ಮುಹೂರ್ತ ನಿಗದಿಪಡಿಸಿರುವ ರಾಜ್ಯ ಸರ್ಕಾರವು, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚಿಸಿ ಮಂಗಳವಾರ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಐದು ನಗರ ಪಾಲಿಕೆಗಳ ಅಸ್ತಿತ್ವಕ್ಕೆ ಬರುವ ಸೆ.2ರಂದು ಮುಹೂರ್ತ ನಿಗದಿಪಡಿಸಿರುವ ರಾಜ್ಯ ಸರ್ಕಾರವು, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚಿಸಿ ಮಂಗಳವಾರ ಆದೇಶಿಸಿದೆ.

ಈ ಮೂಲಕ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಅಸ್ತಿತ್ವ ಕಳೆದುಕೊಂಡಂತಾಗಿದೆ.

ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ-2024ರ ಅಡಿ ಪ್ರಾಧಿಕಾರದ ಸಮಿತಿ ರಚನೆ ಮಾಡಿರುವ ರಾಜ್ಯ ಸರ್ಕಾರವು, ಮುಖ್ಯಮಂತ್ರಿ ಸೇರಿದಂತೆ ಒಟ್ಟು 75 ಮಂದಿ ಸದಸ್ಯರನ್ನು ಒಳಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಉಪಾಧ್ಯಕ್ಷರಾಗಿದ್ದಾರೆ. ಸದಸ್ಯ ಕಾರ್ಯದರ್ಶಿಯಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರನ್ನು ನೇಮಿಸಲಾಗಿದೆ.

ಉಳಿದಂತೆ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದ ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್‌, ಬೆಂಗಳೂರು ಉತ್ತರ ಲೋಕಸಭಾ ಸಂಸದೆ ಹಾಗೂ ಸಚಿವೆ ಶೋಭಾಕರಂದ್ಲಾಜೆ, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್‌, ಬಿ.ಎಸ್‌.ಸುರೇಶ್‌, ದಿನೇಶ್‌ ಗುಂಡೂರಾವ್‌, ಕೃಷ್ಣಬೈರೇಗೌಡ, ಜಮೀರ್‌ ಅಹ್ಮದ್‌ ಖಾನ್‌, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್‌.ಮಂಜುನಾಥ್‌, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್‌, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯರಾದ ನಾರಾಯಣ ಕೊರಗಪ್ಪ, ಜೈರಾಮ್‌ ರಮೇಶ್‌, ಜಗ್ಗೀಶ್‌, ಲಹರ್‌ ಸಿಂಗ್‌ ಸಿರೋಯಾ, ಜಿ.ಸಿ.ಚಂದ್ರಶೇಖರ್‌, ಶಾಸಕರಾದ ಎಸ್‌.ಆರ್‌.ವಿಶ್ವನಾಥ್‌, ಬಿ.ಎ.ಬಸವರಾಜ್‌, ಎಸ್‌.ಟಿ.ಸೋಮಶೇಖರ್‌, ಮುನಿರತ್ನ, ಎಸ್‌.ಮುನಿರಾಜು, ಕೆ.ಗೋಪಾಲಯ್ಯ, ಡಾ.ಸಿ.ಎನ್‌.ಅಶ್ವತ್‌ನಾರಾಯಣ್‌, ಎ.ಸಿ.ಶ್ರೀನಿವಾಸ, ಎಸ್‌.ರಘು, ರಿಜ್ವಾನ್‌ ಅರ್ಷದ್‌, ಎನ್‌.ಎ.ಹ್ಯಾರಿಸ್‌, ಎಸ್‌.ಸುರೇಶ್‌ ಕುಮಾರ್‌, ಪ್ರಿಯಕೃಷ್ಣ, ಎಂ.ಕೃಷ್ಣಪ್ಪ, ಉದಯ್‌.ಬಿ.ಗರುಡಾಚಾರ್‌, ಎಲ್‌.ಎ.ರವಿಸುಬ್ರಮಣ್ಯ, ಆರ್‌.ಅಶೋಕ್‌, ಸಿ.ಕೆ.ರಾಮಮೂರ್ತಿ, ಮಂಜುಳಾ ಅರವಿಂದ ಲಿಂಬಾವಳಿ, ಎಂ.ಸತೀಶ್‌ ರೆಡ್ಡಿ, ಎಂ.ಕಷ್ಣಪ್ಪ, ವಿಧಾನಪರಿಷತ್ತು ಸದಸ್ಯರಾದ ಪುಟ್ಟಣ್ಣ, ಡಾ.ಕೆ.ಗೋವಿಂದರಾಜ್‌, ಎಚ್‌.ಎಸ್.ಗೋಪಿನಾಥ್, ಬಿ.ಕೆ.ಹರಿಪ್ರಸಾದ್‌, ಟಿ.ಎನ್‌.ಜವರಾಯಿಗೌಡ, ಎಸ್‌.ಕೇಶವ್‌ ಪ್ರಸಾದ್‌, ಎನ್‌.ನಾಗರಾಜು, ಟಿ.ಎ.ಶರವಣ, ಯತೀಂದ್ರ ಸಿದ್ದರಾಮಯ್ಯ, ಬೆಂಗಳೂರು ದಕ್ಷಿಣ, ಕೇಂದ್ರ, ಉತ್ತರ, ಪೂರ್ವ ಹಾಗೂ ಪಶ್ಚಿಮ ನಗರ ಪಾಲಿಕೆಯ ಮೇಯರ್‌ ಹಾಗೂ ಆಯುಕ್ತರು, ಬಿಡಿಎ ಆಯುಕ್ತ, ಬೆಂಗಳೂರು ನಗರ ಪೊಲೀಸ್‌ ಆಯುಕ್ತ, ಬೆಂಗಳೂರು ಘನತಾಜ್ಯ ನಿರ್ವಹಣೆ ನಿಯಮಿತದ ನಿರ್ದೇಶಕರು, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಹಾನಗರ ಆಯುಕ್ತರು, ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರದ ಕಾರ್ಯನಿರ್ವಹಣಾ ಅಧಿಕಾರಿ, ಬೆಂಗಳೂರು ಜಲಮಂಡಳಿ ಅಧ್ಯಕ್ಷರು, ಬಿಎಂಟಿಸಿ ಮತ್ತು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಜಿಬಿಎ ಮುಖ್ಯ ನಗರ ಯೋಜಕರು ಹಾಗೂ ಮುಖ್ಯ ಎಂಜಿನಿಯರ್‌ಗಳನ್ನು ಪ್ರಾಧಿಕಾರ ಒಳಗೊಂಡಿದೆ.

ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ಪ್ರಾಧಿಕಾರ ಅಸ್ತಿತ್ವದಲ್ಲಿ ಇರಲಿದೆ.ಮಹೇಶ್ವರ್‌ ರಾವ್‌ ಜಿಬಿಎ

ಪ್ರಭಾರಿ ಮುಖ್ಯ ಆಯುಕ್ತ

ರಾಜ್ಯ ಸರ್ಕಾರವು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಜಿಬಿಎ ರಚನೆ ಮಾಡಿ ಆದೇಶಿಸಿದೆ. ಹೀಗಾಗಿ, ಬಿಬಿಎಂಪಿಯು ತನ್ನ ಅಸ್ಥಿತ್ವ ಕಳೆದುಕೊಂಡಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಬಿಬಿಎಂಪಿಯ ಮುಖ್ಯ ಆಯುಕ್ತ ಎಂ.ಮಹೇಶ್ವರ್‌ ರಾವ್‌ ಅವರನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಪ್ರಭಾರಿ ಮುಖ್ಯ ಆಯುಕ್ತರಾಗಿ ನೇಮಕ ಮಾಡಿ ಮಂಗಳವಾರ ಆದೇಶಿಸಿದೆ.

ವಾರದೊಳಗೆ ಐದು ನಗರ

ಪಾಲಿಕೆಗೆ ಆಯುಕ್ತರ ನೇಮಕ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಸ್ಥಿತ್ವಕ್ಕೆ ಬಂದಿದ್ದು, ಶೀಘ್ರದಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಆಡಳಿತ ವ್ಯವಸ್ಥೆಯ ನೀಲನಕ್ಷೆ ರೂಪಿಸಿ, ಅಗತ್ಯವಿರುವ ಅಧಿಕಾರಿಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಲಿದೆ. ವಾರದೊಳಗೆ ಐದು ಹೊಸ ನಗರ ಪಾಲಿಕೆಗಳಿಗೆ ಆಯುಕ್ತರನ್ನು ನೇಮಕ ಮಾಡಲಾಗುತ್ತದೆ. ನೇಮಕಗೊಂಡ ಆಯುಕ್ತರು, ಆಯಾ ಪಾಲಿಕೆಗಳ ಅಧಿಕಾರ ನಿರ್ವಹಿಸಲಿದ್ದಾರೆ. ಆ ಬಳಿಕ ಐದು ಪಾಲಿಕೆಗಳ ವಾರ್ಡ್‌ ರಚನೆಗೆ ಪ್ರತ್ಯೇಕ ಸಮಿತಿಯನ್ನು ಸರ್ಕಾರ ರಚಿಸಿ ನಿರ್ಧಿಷ್ಟ ಕಾಲಾವಧಿ ನೀಡಲಿದೆ. ಆ ಅವಧಿಯಲ್ಲಿ ವಾರ್ಡ್‌ ರಚನೆ ಮಾಡಿ ಆಕ್ಷೇಪಣೆ ಆಹ್ವಾನಿಸಿ ಅಂತಿಮ ಅಧಿಸೂಚನೆಗೆ ಸರ್ಕಾರಕ್ಕೆ ವರದಿ ನೀಡಬೇಕು. ಆ ಬಳಿಕ ಸರ್ಕಾರವು ವಾರ್ಡ್‌ ವಾರು ಮೀಸಲಾತಿ ನಿಗದಿ ಪಡಿಸಿ ಅಧಿಸೂಚನೆ ಹೊರಡಿಸಲಿದೆ. ಬಳಿಕ ಚುನಾವಣೆ ಪ್ರಕ್ರಿಯೆ ಗರಿಗೆದರಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ