ಬಜೆಟ್ ನಲ್ಲಿ ಕೃಷಿ ಕೂಲಿಕಾರರಿಗೆ ಬಿಡಿಗಾಸು ನೀಡದೆ ಸಿಎಂ ವಂಚನೆ: ಎಂ.ಪುಟ್ಟಮಾದು ಆಕ್ರೋಶ

KannadaprabhaNewsNetwork | Published : Mar 9, 2025 1:51 AM

ಸಾರಾಂಶ

ನಮಗೆ ಮುಖ್ಯಮಂತ್ರಿಗಳ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಕೇಂದ್ರ ಸರ್ಕಾರದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದಾಗ ಇದೇ ಸಿದ್ದರಾಮಯ್ಯ ಅವರು ಬಡವರಿಗೆ ಚೊಂಬು ಕೊಟ್ಟಿದ್ದಾರೆ ಎಂದು ಛೇಡಿಸಿದ್ದರು. ಈಗ ತಮ್ಮ ಬಜೆಟ್‌ನಲ್ಲಿಯೇ ಕೃಷಿ ಕೂಲಿಕಾರರಿಗೆ ಸಿಎಂ ದೊಡ್ಡ ಚೊಂಬು ಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸಕ್ತ ಬಜೆಟ್‌ನಲ್ಲಿ ಕೃಷಿ ಕೂಲಿಕಾರರಿಗೆ ಒಂದು ಬಿಡಿಗಾಸು ನೀಡದೆ ವಂಚಿಸಿದ್ದಾರೆ ಎಂದು ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕರ್ನಾಟಕ ಸಂಘದ ಆವರಣದಲ್ಲಿ ಪ್ರಾಂತ ಕೃಷಿ ಕೂಲಿಕಾರರ ಸಂಘ ಮಂಡ್ಯ ಜಿಲ್ಲಾ ಸಮಿತಿ ಆಯೋಜಿಸಿದ್ದ ವಿಭಾಗೀಯ ಸಂಘಟನಾ ಸಮಾವೇಶದಲ್ಲಿ ಮಾತನಾಡಿ, ಮುಖ್ಯಮಂತ್ರಿಗಳಿಗೆ ಕೃಷಿ ಕೂಲಿಕಾರರ ಬದುಕು ಬವಣೆಗಳ ಕುರಿತು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ದೂರಿದರು.

4 ಲಕ್ಷ ಕೋಟಿ ರು.ಗಳ ದಾಖಲೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು 1.34 ಕೋಟಿ ಕೃಷಿ ಕೂಲಿ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಮಹಿಳಾ ದಿನಾಚರಣೆ ಆಚರಿಸುತ್ತಿರುವ ಈ ದಿನ ಮಹಿಳೆಯರಿಗೆ ಇಂದು ಅತ್ಯಂತ ದುಃಖದ ದಿನವಾಗಿದೆ ಎಂದು ವಿಷಾಸಿದರು.

ರಾಜ್ಯದಲ್ಲಿಂದು ಕೃಷಿ ಕೂಲಿಕಾರರು ಬಹಳ ಸಂಕಷ್ಟದಲ್ಲಿದ್ದಾರೆ. ಅವರು ಸ್ವಂತ ಸೂರು ಹೊಂದಲು 6 ಲಕ್ಷ ರು ಗ್ರಾಂಟ್ ಕೊಡಲಿಲ್ಲ. ನಾವು ಬೇಡಿಕೆ ಇಟ್ಟಂತೆ ಒಂದು ಕಲ್ಯಾಣ ಮಂಡಳಿಯನ್ನೂ ಮಾಡಲು ಅವರಿಗೆ ಇದುವರೆಗೂ ಸಾಧ್ಯವಾಗಿಲ್ಲ ಎಂದರು.

ನಮಗೆ ಮುಖ್ಯಮಂತ್ರಿಗಳ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಕೇಂದ್ರ ಸರ್ಕಾರದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದಾಗ ಇದೇ ಸಿದ್ದರಾಮಯ್ಯ ಅವರು ಬಡವರಿಗೆ ಚೊಂಬು ಕೊಟ್ಟಿದ್ದಾರೆ ಎಂದು ಛೇಡಿಸಿದ್ದರು. ಈಗ ತಮ್ಮ ಬಜೆಟ್‌ನಲ್ಲಿಯೇ ಕೃಷಿ ಕೂಲಿಕಾರರಿಗೆ ಸಿಎಂ ದೊಡ್ಡ ಚೊಂಬು ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಕೃಷಿ ಕೂಲಿಕಾರರ ಬದುಕು, ಬವಣೆ ಉಲ್ಬಣಗೊಳ್ಳುತ್ತಿದೆ. ಹಾಗಾಗಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ದೊಡ್ಡ ಹೋರಾಟ ರೂಪಿಸಬೇಕಾದ ಅನಿವಾರ್ಯತೆ ಇದೆ. ಇದರ ಅಂಗವಾಗಿ ಮಂಡ್ಯ, ಉಡುಪಿ, ರಾಮನಗರ, ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ವಿಭಾಗೀಯ ಸಂಘಟನಾ ಸಮಾವೇಶ ನಡೆಸಲಾಗುತ್ತಿದೆ ಎಂದರು.

ಸಮಾರಂಭದಲ್ಲಿ ಅಖಿಲ ಭಾರತ ಕಾರ್ಯದರ್ಶಿ ಟಿ.ವೆಂಕಟ್ ಮಾತನಾಡಿದರು. ಸಮಾವೇಶದಲ್ಲಿ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೆರೆ, ರಾಜ್ಯ ಉಪಾಧ್ಯಕ್ಷ ಜಿ.ಎನ್.ನಾಗರಾಜು, ಎಂ.ವಿ.ಮುನಿವೆಂಕಟಪ್ಪ, ಮಂಡ್ಯ ಜಿಲ್ಲಾಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಎಲ.ಕೃಷ್ಣೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಸರೋಜಮ್ಮ, ಕವಿರಾಜ, ರಮೇಶ್, ಹುಂಡಿ ಶಾಂತಮ್ಮ, ಕೃಷ್ಣಪ್ಪ ಕೆ.ಎಚ್.ಪುಟ್ಟಮಾದೇಗೌಡ, ಅಜಯ್‌ಕುಮಾರ್ ಮತ್ತಿತರರಿದ್ದರು.

Share this article