ಮಹಿಳಾ ಸಮಾನತೆ ಮನಸ್ಥಿತಿ ಮನೆಯಿಂದಲೇ ಆರಂಭವಾಗಬೇಕು : ಲೇಖಕಿ ನೇಮಿಚಂದ್ರ ಅಭಿಪ್ರಾಯ

KannadaprabhaNewsNetwork | Updated : Mar 09 2025, 12:25 PM IST

ಸಾರಾಂಶ

ಮಹಿಳಾ ಸಮಾನತೆ ಮನೆಯಿಂದಲೇ ಆರಂಭವಾಗಬೇಕು. ಮಹಿಳೆಯರನ್ನು ಸಮಾನವಾಗಿ ಕಾಣುವ ಮನಸ್ಥಿತಿಯನ್ನು ಗಂಡುಮಕ್ಕಳಲ್ಲಿ ಆರಂಭದಲ್ಲಿಯೇ ಬಿತ್ತಬೇಕು. ಗಂಡ ಹೆಂಡತಿ ಪರಸ್ಪರ ಗೌರವಿಸಿಕೊಂಡು ಬಾಳುವ ಮನೋಭಾವ ಬೆಳೆಯಬೇಕು ಎಂದು ಲೇಖಕಿ ನೇಮಿಚಂದ್ರ ಅಭಿಪ್ರಾಯಪಟ್ಟರು

  ತುಮಕೂರು :  ಮಹಿಳಾ ಸಮಾನತೆ ಮನೆಯಿಂದಲೇ ಆರಂಭವಾಗಬೇಕು. ಮಹಿಳೆಯರನ್ನು ಸಮಾನವಾಗಿ ಕಾಣುವ ಮನಸ್ಥಿತಿಯನ್ನು ಗಂಡುಮಕ್ಕಳಲ್ಲಿ ಆರಂಭದಲ್ಲಿಯೇ ಬಿತ್ತಬೇಕು. ಗಂಡ ಹೆಂಡತಿ ಪರಸ್ಪರ ಗೌರವಿಸಿಕೊಂಡು ಬಾಳುವ ಮನೋಭಾವ ಬೆಳೆಯಬೇಕು ಎಂದು ಲೇಖಕಿ ನೇಮಿಚಂದ್ರ ಅಭಿಪ್ರಾಯಪಟ್ಟರು. 

ತುಮಕೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಚಾರಣೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಪರಿಸ್ಥಿತಿ ಮೊದಲಿಗಿಂತ ಈಗ ಸುಧಾರಿಸಿದೆ. ಆದರೆ ಸಮಾನತೆಯ ಸಂಸ್ಕೃತಿ ಇನ್ನೂ ನಮ್ಮಲ್ಲಿ ಪಕ್ವವಾಗಿಲ್ಲ ಎಂದರು. 

ಹುಟ್ಟಿನಿಂದಲೇ ಯಾರೂ ಶ್ರೇಷ್ಠರಲ್ಲ, ಕನಿಷ್ಠರೂ ಅಲ್ಲ. ಸ್ತ್ರೀಪುರುಷರ ವಿಷಯದಲ್ಲೂ ಇದು ಸರಿ. ಈ ಚಿಂತನೆ ಎಲ್ಲರಲ್ಲೂ ಮೂಡಿಬರಬೇಕು. ಆದರೆ ನಮ್ಮ ಸಮಾಜದ ದೃಷ್ಟಿಕೋನ ಬದಲಾಗಿಲ್ಲ. ಹೆಂಡತಿ ಗಂಡನಿಗೆ ವಿಧೇಯಳಾಗಿರಬೇಕು, ಗಂಡ ಹೆಂಡತಿಗೆ ಹೊಡೆಯುವುದು ಸರಿ ಎಂಬ ಮನಸ್ಥಿತಿ ಈಗಲೂ ಬಹುಪಾಲು ಇದೆ. ಹೀಗೆ ಭಾವಿಸುವವರಲ್ಲಿ ಮಹಿಳೆಯರೂ ಇದ್ದಾರೆ ಎಂಬುದು ಆಶ್ಚರ್ಯಕರ ಎಂದರು. 

ಶೈಕ್ಷಣಿಕ ರಂಗದಲ್ಲಿ ಯಾವುದೇ ಪರೀಕ್ಷೆ ಫಲಿತಾಂಶ ಬಂದಾಗಲೂ ಬಾಲಕಿಯರದೇ ಮೇಲುಗೈ ಎಂದಿರುತ್ತದೆ. ಆಮೇಲೆ ಇವರೆಲ್ಲ ಎಲ್ಲಿ ನಾಪತ್ತೆಯಾಗುತ್ತಾರೆ ಎಂದೇ ತಿಳಿಯುವುದಿಲ್ಲ. ಅವಕಾಶಗಳ ಕೊರತೆ ಹಾಗೂ ಸಮರ್ಥ ಮಾದರಿಗಳ ಕೊರತೆಯೇ ಇದಕ್ಕೆ ಕಾರಣ. 120 ವರ್ಷಗಳ ನೊಬೆಲ್ ಪ್ರಶಸ್ತಿ ಇತಿಹಾಸದಲ್ಲಿ ವಿಜ್ಞಾನ ಕೇತ್ರದಲ್ಲಿ ಕೇವಲ 20 ಮಹಿಳೆಯರು ಮಾತ್ರ ನೊಬೆಲ್ ಪಡೆದಿದ್ದಾರೆ ಎಂದರು. 

ಸಮಾನತೆ ಇಲ್ಲದ ಸಂಸ್ಕೃತಿ ನಮ್ಮನ್ನು ಹೆಚ್ಚು ದೂರ ಕರೆದುಕೊಂಡು ಹೋಗುವುದಿಲ್ಲ. ಪ್ರಾಯೋಗಿಕವಾಗಿ ಜಾರಿಗೆ ಬರದ ಯಾವ ಸಿದ್ಧಾಂತಕ್ಕೂ ಅರ್ಥವಿಲ್ಲ. ಮಹಿಳೆಯರ ಕಾಲುಗಳನ್ನು ಕಟ್ಟಿಹಾಕಿ ನಿಮಗೆ ಗೆಲ್ಲಲು ಸಾಧ್ಯವಿಲ್ಲ ಎಂದು ನಂಬಿಸುವ ಸನ್ನಿವೇಶ ಇಂದಿಗೂ ಮುಂದುವರಿದಿದೆ. ಮಹಿಳೆಯರು ಈ ಬಂಧನಗಳಿಂದ ಮುಕ್ತವಾಗಿ ಅವರಿಗಾಗಿ ತೆರೆದಿರುವ ಅವಕಾಶಗಳನ್ನು ಆತ್ಮವಿಶ್ವಾಸದಿಂದ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

 ಮಹಿಳಾ ಅಧ್ಯಯನ ಕೇಂದ್ರ ಪ್ರಕಟಿಸಿರುವ ಸುದ್ದಿಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಇದು ವೇಗದ ಯುಗ ಮಹಿಳೆ ವಿವಿಧ ರಂಗಗಳಲ್ಲಿ ಇಂದು ಉನ್ನತ ಸಾಧನೆ ಮಾಡುತ್ತಿದ್ದಾಳೆ. ಆಕೆ ಇನ್ನಷ್ಟು ಸಾಧನೆ ಮಾಡುವಂತೆ ಸೂಕ್ತ ಬೆಂಬಲ ಹಾಗೂ ಸಹಾನುಭೂತಿಯ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದರು.

 ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಪ್ರಸನ್ನಕುಮಾರ್, ಕಲಾ ಕಾಲೇಜಿನ ಪ್ರಾಂಶುಪಾಲ ಬಿ. ಕರಿಯಣ್ಣ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಶೇಟ್, ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ಜ್ಯೋತಿ ಉಪಸ್ಥಿತರಿದ್ದರು.

Share this article