ಶಿಕ್ಷಣ, ಸಂಘಟನೆಯಿಂದ ಮಹಿಳಾ ಸಬಲೀಕರಣ

KannadaprabhaNewsNetwork | Published : Mar 9, 2025 1:51 AM

ಸಾರಾಂಶ

ಮಹಿಳೆಯರು ಶಿಕ್ಷಣ ಮತ್ತು ಸಂಘಟನೆಯ ಮಹತ್ವದ ಅರಿತಾಗ ಮಾತ್ರ ಸಮಾಜದಲ್ಲಿ ಸಮಾನತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸಕಿ ಡಿ.ಪುಷ್ಪಾವತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಮಹಿಳೆಯರು ಶಿಕ್ಷಣ ಮತ್ತು ಸಂಘಟನೆಯ ಮಹತ್ವದ ಅರಿತಾಗ ಮಾತ್ರ ಸಮಾಜದಲ್ಲಿ ಸಮಾನತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸಕಿ ಡಿ.ಪುಷ್ಪಾವತಿ ತಿಳಿಸಿದರು.

ನಗರದ ಡಿ.ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು ಆತ್ಮವಿಶ್ವಾಸ ಹಾಗೂ ಸ್ವ ಸಾಮರ್ಥ್ಯದಿಂದ ಸಮಾಜದಲ್ಲಿ ಮುನ್ನಡೆಯಬೇಕು. ಸಮಾಜದ ಪರಿವರ್ತನೆ ಹಾಗೂ ಅಭ್ಯುದಯಕ್ಕಾಗಿ ಮಹಿಳಾ ಜಾಗೃತಿಯೊಂದೇ ಮಾರ್ಗವಾಗಿದೆ. ಮಹಿಳಾ ಸಮಾನತೆ ಮೊದಲು ಮನೆಯಿಂದ ಶುರುವಾಗಬೇಕು. ಲಿಂಗ ತಾರತಮ್ಯ ಇರಬಾರದು ಎಂದರು.

ಮಹಿಳೆ ತನ್ನಲ್ಲಿರುವ ಅಂತರ್‌ ಶಕ್ತಿಯನ್ನು ಹೊರ ತಂದಾಗ ಮಾತ್ರ ಸಬಲರಾಗಲು ಸಾಧ್ಯ. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಒಪ್ಪಿ ಮುನ್ನಡೆದರೆ ಸಬಲೀಕರಣ, ಮಹಿಳಾ ಸಶಕ್ತೀಕರಣ‌ ಸಾಧ್ಯವಾಗುತ್ತದೆ. ಮಹಿಳೆಯರು ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಕಟ್ಟುಪಾಡುಗಳಿಂದ ಹೊರಬರಬೇಕು. ವೈಯಕ್ತಿಕ ಆರೋಗ್ಯ ಮತ್ತು ಪರಿಸರದ ಸ್ವಚ್ಛತೆಗೂ ಆದ್ಯತೆ ನೀಡಬೇಕು. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಮಹತ್ವವಾಗಿರುತ್ತದೆ ಎಂದರು.

ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್ ಮಾತನಾಡಿ, ಸದ್ಯ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಮಹಿಳಾ ಕಾರ್ಮಿಕರು ಉತ್ತಮ ದುಡಿಯುವ ಪರಿಸ್ಥಿತಿಗೆ ಒತ್ತಾಯಿಸಿ ನಡೆದ ಹೋರಾಟದ ಹಿನ್ನಲೆಯಲ್ಲಿ ಈ ದಿನ ಮಹತ್ವ ಪಡೆದಿದೆ ಎಂದರು.

ಬಾಲಕಿಯರ ವಿದ್ಯಾರ್ಥಿನಿಲಯದ ಮಹಿಳಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅನಿತಾದೇವಿ ನಾಯಕ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಮಮತಾ, ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಹಾಯಕ ಆಯುಕ್ತ ವೆಂಕಟರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ತಾಲೂಕು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಕಸಬಾ ಹೋಬಳಿ ಘಟದ ಕೋಶಾಧ್ಯಕ್ಷ ಜಿ.ಸುರೇಶ್ ಭಾಗವಹಿಸಿದ್ದರು.

Share this article