ಕುರ್ಚಿ ಕಿತ್ತಾಟದಲ್ಲಿ ರಾಜ್ಯ ಮರೆತ ಸಿಎಂ, ಡಿಸಿಎಂ: ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Jul 09, 2025, 12:26 AM IST
ಫೋಟೋ ಬೊಮ್ಮಾಯಿ | Kannada Prabha

ಸಾರಾಂಶ

ಪಡಿತರ ಆಹಾರ ಸಾಗಣೆ ಲಾರಿಗಳಿಗೆ ಸುಮಾರು ₹250 ಕೋಟಿ ಬಾಕಿ ಇರುವುದು ಅಕ್ಷಮ್ಯ. ರಾಜ್ಯ ಸರ್ಕಾರ ಹಣಕಾಸು ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಅನೇಕ ಬಿಲ್ ಬಾಕಿ ಇತ್ತು. ಅದನ್ನು ನಮ್ಮ ಸರ್ಕಾರ ಬಂದು ತೀರಿಸಿತ್ತು. ಕೋವಿಡ್ ಸಂದರ್ಭದಲ್ಲಿಯೂ ಯಾವುದೇ ಹಣಕಾಸು ತೊಂದರೆಯಾಗದಂತೆ ಯಡಿಯೂರಪ್ಪ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ.

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಕುರ್ಚಿ ಕಿತ್ತಾಟದಲ್ಲಿ ಜನರು ಮತ್ತು ರಾಜ್ಯವನ್ನು ಮರೆತಿದ್ದಾರೆ. ಈ ಸರ್ಕಾರವನ್ನು ಅಧಿಕಾರಕ್ಕೆ ತಂದಿರುವ ಜನ ಪಶ್ಚಾತಾಪ ಪಡುತ್ತಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡಿತರ ಆಹಾರ ಸಾಗಣೆ ಲಾರಿಗಳಿಗೆ ಸುಮಾರು ₹250 ಕೋಟಿ ಬಾಕಿ ಇರುವುದು ಅಕ್ಷಮ್ಯ. ರಾಜ್ಯ ಸರ್ಕಾರ ಹಣಕಾಸು ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಅನೇಕ ಬಿಲ್ ಬಾಕಿ ಇತ್ತು. ಅದನ್ನು ನಮ್ಮ ಸರ್ಕಾರ ಬಂದು ತೀರಿಸಿತ್ತು. ಕೋವಿಡ್ ಸಂದರ್ಭದಲ್ಲಿಯೂ ಯಾವುದೇ ಹಣಕಾಸು ತೊಂದರೆಯಾಗದಂತೆ ಯಡಿಯೂರಪ್ಪ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ನನ್ನ ನೇತೃತ್ವದ ಸರ್ಕಾರದಲ್ಲಿಯೂ ಆರ್ಥಿಕವಾಗಿ ಸದೃಢವಾಗಿ ಕೆಲಸ ಮಾಡಿದ್ದೇವೆ. ಈ ಸರ್ಕಾರ ಜನರಿಗೆ ದ್ರೋಹ ಮಾಡುತ್ತಿದೆ ಎಂದು ಆರೋಪಿಸಿದರು.

ಸು‍ಳ್ಳಿನ ಕಂತೆ:

ಬಡವರಿಗೆ ಆಹಾರ ಕೊಡದಿದ್ದರೆ ಬಡವರ ಪರಿಸ್ಥಿತಿ ಏನು? ಇವರು ಹದಿನೈದು ಕೆಜಿ ಕೊಡುವುದು ಹೋಗಲಿ ಹತ್ತು ಕೆಜಿಯನ್ನೂ ಕೊಡುತ್ತಿಲ್ಲ. ಹಣದ ಬದಲು ಅಕ್ಕಿ ಕೊಡುತ್ತೇವೆ ಎಂದರು ಅದನ್ನೂ ಕೊಡುತ್ತಿಲ್ಲ. ಬರಿ ಸುಳ್ಳಿನ ಕಂತೆ. ಜನರಿಗೆ ಆಹಾರ ಪದಾರ್ಥ ಸಿಗುತ್ತಿಲ್ಲ. ಆರೋಗ್ಯ ವ್ಯವಸ್ಥೆ ಸರಿ ಇಲ್ಲ. ಎಸ್‌ಎಸ್‌ಎಲ್‌ಸಿ ಫಲಿತಾಂಶ ನೋಡಿದರೆ ಶಿಕ್ಷಣ ವ್ಯವಸ್ಥೆ ಸರಿ ಇಲ್ಲ. ರಸ್ತೆ, ಕುಡಿಯುವ ನೀರಿಗೂ ಹಣ ಬಿಡುಗಡೆಯಾಗುತ್ತಿಲ್ಲ. 10 ಮಹಾನಗರ ಪಾಲಿಕೆ ಸಿಬ್ಬಂದಿಗೆ ಸಂಬಳ ನೀಡಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ನಗರಸಭೆ, ಪುರಸಭೆ ಉದ್ಯೋಗಿಗಳಿಗೆ ಸರ್ಕಾರ ಕೊಡಬೇಕಿರುವ ಹಣ ಕೊಡುತ್ತಿಲ್ಲ. ಪುರಸಭೆಯೇ ತನ್ನ ಹಣಕಾಸಿನ ವ್ಯವಸ್ಥೆಯಲ್ಲಿ ನೌಕರರ ಸಂಬಳ ನೀಡಬೇಕೆಂಬ ಆದೇಶ ಬಂದು ಒಂದು ವರ್ಷವಾಗಿದೆ. ಇದು ದುಸ್ಥಿತಿಯ ಸಂಕೇತ. ಮುಖ್ಯಮಂತ್ರಿಗಳು ತಮ್ಮ ತಪ್ಪು ಒಪ್ಪಿಕೊಂಡು ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಹೃದಯಾಘಾತ ಸಂಖ್ಯೆ ಹೆಚ್ಚಾಗಿದೆ. ಎಲ್ಲ ಇಲಾಖೆಯಲ್ಲಿ ಅವ್ಯವಸ್ಥೆ ಇದ್ದರೂ ಸರ್ಕಾರ ಇದ್ದೂ ಸತ್ತಂತೆ, ಕುರ್ಚಿ ಕಿತ್ತಾಟದಲ್ಲಿ ಜನರು ಮತ್ತು ರಾಜ್ಯವನ್ನು ಮರೆತಿದ್ದಾರೆ ಎಂದು ಹೇಳಿದರು.

PREV