ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು : ಅಶ್ವಥ್ ನಾರಾಯಣ್

KannadaprabhaNewsNetwork |  
Published : Aug 31, 2024, 01:44 AM ISTUpdated : Aug 31, 2024, 12:04 PM IST
ಅಶ್ವಥ್‌ನಾರಾಯಣ್  | Kannada Prabha

ಸಾರಾಂಶ

ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವುದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಬಿಜೆಪಿ ನಾಯಕ ಅಶ್ವಥ್ ನಾರಾಯಣ್ ಆಗ್ರಹಿಸಿದ್ದಾರೆ. ಮುಡಾ ಹಗರಣದ ಕುರಿತು ಸತ್ಯಾಂಶ ಬಹಿರಂಗಪಡಿಸಬೇಕೆಂದೂ ಅವರು ಒತ್ತಾಯಿಸಿದರು.

 ಚಾಮರಾಜನಗರ :  ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಬ್ಬರು ಸಹ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿರುವುದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಪ್ರಾಸಿಕ್ಯೂಷನ್ ನೀಡಿರುವ ರಾಜ್ಯಪಾಲರ ವಿರುದ್ಧ ಷಡ್ಯಂತರ ಹಾಗೂ ಪ್ರತಿಭಟನೆ ಮಾಡುತ್ತಿರುವುದು ಪ್ರಜಾ ಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ನಿಲುವಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ್ ತಿಳಿಸಿದರು.

 ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಪಕ್ಷದ ಮುಖಂಡರು ಹಾಗೂ ಸದಸ್ಯರೊಂದಿಗೆ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಪತ್ನಿಗೆ ಮುಡಾ ಸೈಟ್ ನೀಡಿದ್ದಾರೆ ಎಂಬುದು ಒಂದು ಕಡೆಯಾದರೆ, ಬಿಜೆಪಿ ಸರ್ಕಾರ ಅವಧಿಯಲ್ಲಿ ಮುಡಾ ಹಗರಣದ ಕುರಿತು ನೇಮಕ ಮಾಡಿದ್ದ ಅಧಿಕಾರಿಗಳ ತಂಡ ನೀಡಿರುವ ವರದಿಯನ್ನು ಬಹಿರಂಗ ಪಡಿಸಿ, ಈ ಹಗರಣದ ಕುರಿತು ಸತ್ಯಾಂಶವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿ ಎಂಬುದು ನಮ್ಮ ಒತ್ತಾಯವಾಗಿದೆ.

 ತನಿಖಾಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಪಡೆದುಕೊಂಡಿರುವ ಸೈಟು ಹಾಗೂ ಇತರೇ ಮುಖಂಡರು ಹಾಗೂ ಅವರ ಹಿಂಬಾಲಕರಿಗೆ ಯಾವ ರೀತಿ ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಸಂಪೂರ್ಣ ವರದಿ ಉಲ್ಲೇಖವಾಗಿದೆ. ಇದನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ವರದಿಯ ಬಗ್ಗೆ ಏಕೆ ಸಿದ್ದರಾಮಯ್ಯ ಅವರು ಮಾತನಾಡುತ್ತಿಲ್ಲ. 

ಸಿದ್ದರಾಮಯ್ಯ ಅವರ ೪೦ ವರ್ಷಗಳ ಆಡಳಿತದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲ ಎಂಬುವುದು ನಿಜವಾದರೆ ಈ ಹಗರಣದ ತನಿಖೆಯನ್ನು ಏಕೆ ಸಿಬಿಐಗೆ ವಹಿಸುತ್ತಿಲ್ಲ. ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ, ತನಿಖೆ ಎದುರಿಸಲಿ ಎಂದು ಅಶ್ವಥ್‌ನಾರಾಯಣ್ ಸವಾಲು ಹಾಕಿದರು.

 ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆದಾಯಕ್ಕಿಂತ ಅಧಿಕ ಆಸ್ತಿ ಮಾಡಿ, ಅಪರಾಧಿ ಸ್ಥಾನದಲ್ಲಿದ್ದಾರೆ. ಹೈಕೋರ್ಟ್‌ನಲ್ಲಿದ್ದ ಪ್ರಕರಣವನ್ನು ಸುಪ್ರಿಂಕೋರ್ಟ್‌ಗೆ ವರ್ಗಾವಣೆ ಮಾಡಿದೆ. ಇಂಥವರು ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಹೀಗಾಗಿ ರಾಜೀನಾಮೆ ಕೇಳುತ್ತಿದ್ದೇವೆ. ಕಳೆದ ತಿಂಗಳು ನಡೆದ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರ ಪರವಾಗಿ ಭಾಷಣ ಮಾಡಿದ ರಾಜ್ಯಪಾಲರನ್ನು ಇದೇ ಸರ್ಕಾರದ ಮುಖ್ಯಮಂತ್ರಿ, ಸಚಿವರು ಹೊಗಳಿದ್ದರು. ಒಂದು ತಿಂಗಳಲ್ಲಿಯೇ ಸಿದ್ದರಾಮಯ್ಯ ವಿರುದ್ದ ನ್ಯಾಯ ಸಮ್ಮತವಾದ ತನಿಖೆಗೆ ಆದೇಶ ನೀಡುತ್ತಿದ್ದಂತೆ ರಾಜ್ಯಪಾಲರು ಬಿಜೆಪಿ ಏಜೆಂಟರು ಆಗಿಬಿಟ್ಟರು. 

ರಾಜಭವನ ಬಿಜೆಪಿ ಕಚೇರಿಯಾಗಿದೆ ಎಂದು ಟೀಕೆ ಮಾಡುವ ಕಾಂಗ್ರೆಸ್ ಮುಖಂಡರು ಮೊದಲು ನೈತಿಕತೆಯನ್ನು ಪ್ರಶ್ನೆ ಮಾಡಿಕೊಳ್ಳಬೇಕು ಎಂದರು. ಸಂವಿಧಾನತ್ಮಕವಾದ ಹುದ್ದೆಯಲ್ಲಿರುವ ರಾಜ್ಯಪಾಲರ ವಿರುದ್ಧ ಜನರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುವುದು. ಒತ್ತಡ ತರುವ, ಜಾತಿ, ಜಾತಿಗಳ ನಡುವೆ ಭಿನ್ನಾಭಿಪ್ರಾಯವನ್ನು ಮೂಡಿಸುವ ಕಾಂಗ್ರೆಸ್ಸಿಗರ ಪ್ರಯತ್ನ ವಿಫಲವಾಗುತ್ತದೆ. 

ನ್ಯಾಯಾಲಯದ ತೀರ್ಪಿನ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗುತ್ತದೆ. ಮಂಡ್ಯ ಶಾಸಕ ಗಾಣಿಗ ರವಿ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್ ಶಾಸಕರು ಮಾರಾಟಕ್ಕಿಟ್ಟಿರುವ ವಸ್ತುಗಳೇ? 100 ಕೋಟಿ ರು.ಗೆ ಡೀಲ್‌ಗೆ ಬಿಜೆಪಿಅವರು ಆಹ್ವಾನಿಸಿದ್ದರು ಎಂಬ ಹೇಳಿಕೆ ವಿರುದ್ಧ ಅಂದೇ ಮಂಡ್ಯ ಪೊಲೀಸ್ ಠಾಣೆಯಲ್ಲಿ ರವಿ ವಿರುದ್ಧ ದೂರು ನೀಡಿದ್ದೇನೆ. ಕಾಂಗ್ರೆಸ್ ಸರ್ಕಾರವನ್ನು ವಿಪಕ್ಷಗಳು ಇಳಿಸಬೇಕಾಗಿಲ್ಲ. ತಾನಾಗಿಯೇ ಬೀಳುತ್ತದೆ ಎಂದು ಅಶ್ವಥ್‌ನಾರಾಯಣ್ ಹೇಳಿದರು. 

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್‌ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ಕೆ.ಆರ್.ಮಲ್ಲಿಕಾರ್ಜುನಪ್ಪ, ಕಾಡಾ ಮಾಜಿ ಅಧ್ಯಕ್ಷ ಸಿ.ಎಸ್. ನಿರಂಜನ್‌ಕುಮಾರ್, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಮಾಧ್ಯಮ ಪ್ರಮುಖ್ ಮಂಜುನಾಥ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌