ಕೊಡಗಿಗೆ ಇಂದು ಸಿಎಂ, ಡಿಸಿಎಂ: ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಉದ್ಘಾಟನೆ

KannadaprabhaNewsNetwork |  
Published : Jan 31, 2025, 12:46 AM IST
ಭಾಗಮಂಡಲದ ನೂತನ ಮೇಲು ಸೇತುವೆ | Kannada Prabha

ಸಾರಾಂಶ

ಭಾಗಮಂಡಲದ ಹತ್ತಿರ ಮಡಿಕೇರಿ-ತಲಕಾವೇರಿ ಮತ್ತು ನಾಪೋಕ್ಲು-ತಲಕಾವೇರಿ ರಸ್ತೆಗಳ ಛೇದಕದಲ್ಲಿ ಕಾವೇರಿ ನದಿಗೆ ಅಡ್ಡವಾಗಿ ನಿರ್ಮಿಸಿದ ಮೇಲು ಸೇತುವೆ ಕಾಮಗಾರಿ ಉದ್ಘಾಟನಾ ಸಮಾರಂಭ ಶುಕ್ರವಾರ ಅಪರಾಹ್ನ 3ಕ್ಕೆ ಭಾಗಮಂಡಲದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾಗಮಂಡಲದ ಹತ್ತಿರ ಮಡಿಕೇರಿ-ತಲಕಾವೇರಿ ಮತ್ತು ನಾಪೋಕ್ಲು-ತಲಕಾವೇರಿ ರಸ್ತೆಗಳ ಛೇದಕದಲ್ಲಿ ಕಾವೇರಿ ನದಿಗೆ ಅಡ್ಡವಾಗಿ ನಿರ್ಮಿಸಿದ ಮೇಲು ಸೇತುವೆ ಕಾಮಗಾರಿ ಉದ್ಘಾಟನಾ ಸಮಾರಂಭ ಶುಕ್ರವಾರ ಅಪರಾಹ್ನ 3ಕ್ಕೆ ಭಾಗಮಂಡಲದಲ್ಲಿ ನಡೆಯಲಿದೆ.

ಜಲಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮ ನೇತೃತ್ವದಲ್ಲಿ ಕಾಮಗಾರಿ ನಡೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಇಲಾಖೆ ಸಚಿವರಾದ ಡಿ.ಕೆ.ಶಿವಕುಮಾರ್ ಉಪಸ್ಥಿತಿಯಲ್ಲಿ ಉದ್ಘಾಟನೆ ಮಾಡಲಿದ್ದಾರೆ.

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಇಂಧನ ಸಚಿವ ಕೆ.ಜೆ.ಜಾರ್ಜ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ಡಾ.ಧನಂಜಯ ಸರ್ಜಿ, ಭಾಗಮಂಡಲ ಗ್ರಾ.ಪಂ. ಅಧ್ಯಕ್ಷ ಕಾಳನ ಎ.ರವಿ ಇತರರು ಪಾಲ್ಗೊಳ್ಳಲಿದ್ದಾರೆ.

ಪ್ರವಾಹ ಸಂಕಷ್ಟಕ್ಕೆ ಮುಕ್ತಿ:ಮುಂಗಾರಿನ ಅವಧಿಯಲ್ಲಿ ವರ್ಷಂಪ್ರತಿ ಭಾಗಮಂಡಲ ಕ್ಷೇತ್ರ ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿ, ಅಲ್ಲಿನ ನಿವಾಸಿಗಳು ಹಾಗೂ ಪುಣ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಸುಮಾರು ಒಂಭತ್ತು ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸ್ಥಳಕ್ಕೆ ಭೇಟಿ ನೀಡಿ ಜನರ ಮೂಲಭೂತ ಸಮಸ್ಯೆಗಳನ್ನು ಆಲಿಸಿ, ಮೇಲ್ಸೇತುವೆ ನಿರ್ಮಾಣದ ಅಗತ್ಯ ಮನಗಂಡು ಯೋಜನೆ ಘೋಷಿಸಿದರು. ಸುಮಾರು 30 ಕೋಟಿ ರು. ಅನುದಾನವನ್ನು ವಿವಿಧ ಹಂತಗಳಲ್ಲಿ ಒದಗಿಸಲಾಗಿತ್ತು. ನಂತರದ ಬಿಜೆಪಿಯ 5 ವರ್ಷಗಳ ಅವಧಿಯಲ್ಲಿ ಕಾಮಗಾರಿ ಮಂದಗತಿಯಲ್ಲಿ ಸಾಗಿತು ಎಂದು ಕಾಂಗ್ರೆಸ್‌ ಮುಖಂಡ ಟಿ.ಪಿ.ರಮೇಶ್ ಹೇಳಿದರು.ಹಿಂದೆ ರಾಜ್ಯದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾವೇರಿ ಕ್ಷೇತ್ರದ ಅಭಿವೃದ್ಧಿಗೆ ಕಾಳಜಿ ವಹಿಸಿ ಕಾವೇರಿ ನೀರಾವರಿ ನಿಗಮದ ಮೂಲಕ 12 ಕೋಟಿ ರು.ಗಳನ್ನು ಒದಗಿಸಿದ್ದರು. ಇದರ ಬಳಕೆಯ ಮೂಲಕ ಕ್ಷೇತ್ರ ಅಭಿವೃದ್ಧಿಯನ್ನು ಕಂಡಿದೆ ಎಂದ ಅವರು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಆಸಕ್ತಿಯಿಂದ 1 ಕೋಟಿ ರು. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣಗೊಂಡಿದೆ ಎಂದರು. ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ರಸ್ತೆಯ ಅಭಿವೃದ್ಧಿಗೆ ವಿಶೇಷ ಕಾರ್ಯಯೋಜನೆಯನ್ನು ಸರ್ಕಾರದ ಮುಂದಿರಿಸಿದ್ದಾರೆ. ಅಗತ್ಯವಾದ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳುವ ಮೂಲಕ ಜಿಲ್ಲೆಯ ಸರ್ವತೋಮುಖ ಪ್ರಗತಿಯತ್ತ ಮುನ್ನಡೆಯುತ್ತಿರುವುದಾಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ