ಕನ್ನಡಪ್ರಭ ವಾರ್ತೆ ಗಂಗಾವತಿ
ಸುಂದರ ಕಾಂಡದ ತಾಯಿನೆಲವೇ ಕಿಷ್ಕಿಂಧೆ ಎಂದು ಕಜ್ಜಿಡೋಣಿಯ ಶಂಕರಾಚಾರ್ಯ ಅವಧೂತ ಆಶ್ರಮದ ವಿದ್ವಾನ್ ಕೃಷ್ಣಾನಂದ ಶರಣರು ಬಣ್ಣಿಸಿದರು.ನಗರದ ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಕಿಷ್ಕಿಂಧ ಪ್ರತಿಷ್ಠಾನ ಹಮ್ಮಿಕೊಂಡಿರುವ ಕಿಷ್ಕಿಂಧಾ ಕಾಂಡ ಪ್ರವಚನ ಸಪ್ತಾಹದಲ್ಲಿ ಉಪನ್ಯಾಸ ನೀಡಿದರು.
ಹನುಮಂತ ನೋಡಲು ಸುಂದರನಾಗಿದ್ದ. ರಾಮಾಯಣದಲ್ಲಿ ಬರುವ 7 ಕಾಂಡಗಳಲ್ಲಿ ಸುಂದರಕಾಂಡವೂ ಅದ್ಭುತವಾಗಿದೆ. ಇಡೀ ಕಾಂಡದ ತುಂಬಾ ಹನುಮಂತನ ಸಾಹಸ, ಬುದ್ಧಿಮತ್ತೆಯ ವರ್ಣನೆ ಇದೆ. ಈ ಕಾಂಡದಲ್ಲಿ ಹನುಮಂತನೇ ಕಥಾನಾಯಕ ಎಂಬಂತೆ ಮಹರ್ಷಿ ವಾಲ್ಮೀಕಿ ಚಿತ್ರಿಸಿದ್ದಾರೆ ಎಂದು ವಿವರಿಸಿದರು.ಒಮ್ಮೆ ಹಿಡಿದರೆ ಯಾವ ಕಾರಣಕ್ಕೂ ಅದನ್ನು ಕಪಿಗಳು ಬಿಡುವುದಿಲ್ಲ. ಇದು ಕಪಿಗಳ ಗುಣ. ಅದಕ್ಕೆ ಕಪಿಮುಷ್ಟಿ ಎಂಬ ಪದ ಬಳಕೆಗೆ ಬಂದಿದೆ. ಈ ವಿಷಯ ಶ್ರೀರಾಮನಿಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ಸುಗ್ರೀವ ಮತ್ತು ಹನುಮಂತನ ಜತೆ ಒಪ್ಪಂದ ಮಾಡಿಕೊಂಡು ಲಂಕೆಗೆ ಹೋಗುವ ಜವಾಬ್ದಾರಿಯನ್ನೂ, ತನ್ನ ಉಂಗುರವನ್ನು ಹನುಮಂತನಿಗೆ ಕೊಟ್ಟು ಕಳಿಸಿದ್ದು ಎಂದು ಪ್ರತಿಪಾದಿಸಿದರು.
ತೊರವೆ ರಾಮಾಯಣವನ್ನು ಉದಾಹರಿಸಿದ ಅವರು, ನಿನ್ನನ್ನು ಎಲ್ಲಿ ಹುಡುಕಬೇಕು, ನೀನು ಎಲ್ಲಿ ಸಿಗುತ್ತೀಯ ಎಂದು ಕೇಳಿದರೆ ಯತ್ರ ರಾಮ ಚರಿತ ಪಠಣಂ, ಪಾಠಣಂ, ಶೃತ್ವಂ ತತ್ರ ಅಹಂ ಎಂದು ಹನುಮಂತ ಉತ್ತರಿಸುತ್ತಾನೆ. ಎಲ್ಲಿ ರಾಮ ಚರಿತೆಯ ಪಠಣ, ಪಾಠ ಮತ್ತು ಶ್ರವಣ ನಡೆಯುತ್ತದೆಯೋ ಅಲ್ಲಿ ನಾನಿರುತ್ತೇನೆ ಎಂಬುದು ಇದರ ಅರ್ಥ ಎಂದರು.ವಿದ್ವಾಂಸ ವಿದ್ವಾನ್ ಜಗದೀಶ ಸಂಪ ಮಾತನಾಡಿ, ಹನುಮಂತನ ತಾಯಿ ಅಂಜನಾದೇವಿ. ತಾಯಿಯ ಹೆಸರಿನಲ್ಲಿ ಬೆಟ್ಟ ಇರುವುದು ಈ ಕಿಷ್ಕಿಂಧೆಯಲ್ಲಿ ಮಾತ್ರ. ಅಂಜನಾದೇವಿಯ ಮಗನಾಗಿ ಜನಿಸಿದ್ದರಿಂದ ಹನುಮಂತನಿಗೆ ಆಂಜನೇಯ ಎಂಬ ಹೆಸರು ಬಂತು. ರಾಮನ ಭಕ್ತ, ಸೇವಕ, ದಾಸನಾಗಿದ್ದರಿಂದ ರಾಮದಾಸ ಎಂಬ ಹೆಸರೂ ಬಂತು. ದಾಸ ಎಂಬ ಪದ ಈಗ ಅಪ ವ್ಯಾಖ್ಯಾನಕ್ಕೆ ಗುರಿಯಾಗಿದೆ. ಆದರೆ ದಾಸ ಎಂಬ ಪದಕ್ಕೆ ಪವಿತ್ರ ಅರ್ಥ ಇದ್ದು, ಭಗವತ್ ಕೆಲಸಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡವನು ಎಂದರ್ಥ ಎಂದರು.