.ಕ್ಷೇತ್ರಾದ್ಯಂತ ನಡೆಯುತ್ತಿರುವ ಅರಣ್ಯ-ಕಂದಾಯ ಇಲಾಖೆ ಜಂಟಿ ಸರ್ವೆ ಬಳಿಕ ಅರ್ಹ ಫಲಾನುಭವಿಗಳಿಗೆ ಸಮ ರೋಪಾದಿಯಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಕ್ಷೇತ್ರಾದ್ಯಂತ ನಡೆಯುತ್ತಿರುವ ಅರಣ್ಯ-ಕಂದಾಯ ಇಲಾಖೆ ಜಂಟಿ ಸರ್ವೆ ಬಳಿಕ ಅರ್ಹ ಫಲಾನುಭವಿಗಳಿಗೆ ಸಮ ರೋಪಾದಿಯಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಪಟ್ಟಣದಲ್ಲಿ ಶಾಸಕರ ನಿಧಿ ಹಾಗೂ ಕಂದಾಯ ಇಲಾಖೆಯಿಂದ ನೂತನವಾಗಿ ನಿರ್ಮಾಣವಾಗಿರುವ ನಾಡಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡರ ಆಶಯದಂತೆ ರಾಜ್ಯಾದ್ಯಂತ ಕಂದಾಯ ಗ್ರಾಮ, ಕಂದಾಯ ಉಪಗ್ರಾಮಗಳ ಯೋಜನೆ ಘೋಷಣೆಯಾಗಿ ಜಾರಿಗೆ ಬಂದಿದೆ. ರಾಜ್ಯಾದ್ಯಂತ ಈವರೆಗೆ ಸುಮಾರು ₹3.5 ಲಕ್ಷಕ್ಕೂ ಅಧಿಕ ಜನರಿಗೆ ಹಕ್ಕುಪತ್ರಗಳನ್ನು ಈ ಯೋಜನೆಯಡಿ ವಿತರಿಸಲಾಗಿದೆ ಎಂದರು.

ಎನ್.ಆರ್.ಪುರ ತಾಲೂಕಿನಲ್ಲಿ 57 ಗ್ರಾಮಗಳಲ್ಲಿ 35 ಗ್ರಾಮಗಳ ಜಂಟಿ ಸರ್ವೆ ಈಗಾಗಲೇ ಮುಕ್ತಾಯಗೊಂಡಿದ್ದು, ಉಳಿದ ಗ್ರಾಮಗಳನ್ನು ಶೀಘ್ರವಾಗಿ ಜಂಟಿ ಸರ್ವೆ ನಡೆಸಲಾಗುವುದು. ಈಗಾಗಲೇ ಒತ್ತುವರಿ ಮಾಡಿದ ಜಮೀನು, ಅಕ್ರಮ ವಾಗಿ ಮನೆ ಕಟ್ಟಿಕೊಂಡವರಿಗೆ ಕಾಫಿ ಬೆಳೆ ಹೊರತುಪಡಿಸಿ ಫಾರಂ ನಂ.50, 53, 57ರ ಅಡಿಯಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಈ ಹಿಂದೆ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಅಕ್ರಮ, ಭ್ರಷ್ಟಾಚಾರ ಪ್ರಕರಣಗಳು ನಡೆಯುತ್ತಿದ್ದವು. ಆದರೆ ಇದೀಗ ಸರ್ಕಾರ ಕೈಗೊಂಡ ಕ್ರಮಗಳಿಂದ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಫಲಾನುಭವಿಗಳ ಮನೆಗೆ ಹೋಗಿ ಹಕ್ಕು ಪತ್ರನೀಡುವ ಕೆಲಸ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿರುವ ೩೪ ನಾಡಕಚೇರಿಗಳ ಪೈಕಿ ಬಾಳೆಹೊನ್ನೂರು ನಾಡಕಚೇರಿ ಪ್ರಗತಿಯಲ್ಲಿ ೧೦ನೇ ಸ್ಥಾನ ಪಡೆದಿದೆ. ಕ್ಷೇತ್ರದಲ್ಲಿ ಈ ಬಾರಿ 5 ಹೊಸ ನಾಡಕಚೇರಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು.

ಎನ್.ಆರ್.ಪುರ ತಹಸೀಲ್ದಾರ್ ಡಾ.ನೂರುಲ್ ಹುದಾ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಸದಸ್ಯರಾದ ಹೇಮಲತಾ, ಶೇಖ್ ಅಬ್ದುಲ್ಲಾ, ಉಪ ತಹಸೀಲ್ದಾರ್ ಹೇಮಾ, ಪ್ರಮುಖರಾದ ಗೇರುಬೈಲು ನಟರಾಜ್, ಜುಬೇದಾ, ರವಿಚಂದ್ರ, ಮಹಮ್ಮದ್ ಹನೀಫ್, ಎಂ.ಎಸ್.ಅರುಣೇಶ್, ಎಂ.ಎಸ್.ಜಯಪ್ರಕಾಶ್, ಇಫ್ತೆಖಾರ್ ಆದಿಲ್, ಇಬ್ರಾಹಿಂ ಶಾಫಿ, ಬಿ.ಕೆ.ಮಧುಸೂದನ್, ಮಹೇಶ್ ಆಚಾರ್ಯ, ಶಶಿಕಲಾ, ಗ್ರೀಷ್ಮಾ ಜೈನ್, ಸಮೀಕ್ಷಾ, ನವೀನ್, ಮಂಜು, ಅರುಣ್‌ಕುಮಾರ್, ಹೂವಮ್ಮ ಮತ್ತಿತರರು ಹಾಜರಿದ್ದರು.

ಬಂಡಿಮಠದ 9 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಬಾಳೆಹೊನ್ನೂರಿನ ಭದ್ರಾನದಿ ನೂತನ ಸೇತುವೆ ನಿರ್ಮಾಣದ ಹಿನ್ನೆಲೆಯಲ್ಲಿ ರಸ್ತೆ ಬದಿಯಿಂದ ತೆರವು ಮಾಡಲಾಗುವ 16 ಕುಟುಂಬಗಳ ಪೈಕಿ 9 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

7 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಗೆ ತಾಂತ್ರಿಕ ತೊಂದರೆಯಿಂದ ಹಕ್ಕುಪತ್ರ ವಿತರಣೆಗೆ ವಿಳಂಭವಾಗಿದೆ. ಸಮಸ್ಯೆ ಸರಿಪಡಿಸಿ ಹಕ್ಕುಪತ್ರ ವಿತರಣೆಗೆ ಕ್ರಮವಹಿಸಲಾಗುವುದು. ಭದ್ರಾನದಿಗೆ ನೂತನವಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಬೇಕಿದೆ. ಸೇತುವೆ ಬಳಿಯಲ್ಲಿ ಇರುವ ಕುಟುಂಬಸ್ಥರು ಕೂಡಲೇ ಬಾಡಿಗೆ ಮನೆಗಳಿಗೆ ಸ್ಥಳಾಂತರಗೊಂಡು ಮನೆ ತೆರವುಗೊಳಿಸಿಕೊಟ್ಟರೆ ಸ್ಥಳಾಂತರಗೊಂಡ ಕುಟುಂಬಗಳಿಗೆ ಬಾಡಿಗೆ ನೀಡಲು ಕ್ರಮಕೈ ಗೊಳ್ಳಲಾಗುವುದು ಎಂದು ತಿಳಿಸಿದರು.