ಕನ್ನಡಪ್ರಭ ವಾರ್ತೆ ವಿಜಯಪುರ
ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಜುಲೈ 14ರಂದು ಇಂಡಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಹೊರ್ತಿ ರೇವಣಸಿದ್ದೇಶ್ವರ ಏತ ನಿರಾವರಿ ಯೋಜನೆ ಕಾಮಗಾರಿಗಳು, ತಿಡಗುಂದಿ ಶಾಖಾ ಕಾಲುವೆಯ ವಿಸ್ತರಣೆ ಕಿ.ಮೀ. 56.00 ರಿಂದ 65.58 ವರೆಗಿನ ವಿತರಣಾ ಜಾಲ ನಿರ್ಮಾಣದ ಕಾಮಗಾರಿ, ಚಡಚಣ-ಗಾಣಗಾಪೂರ (115 ಕಿ.ಮೀ.) ರಸ್ತೆ ಅಭಿವೃದ್ಧಿ (ಇಂಡಿ ಮತಕ್ಷೇತ್ರದ 48 ಕಿ.ಮೀ.), ಭೀಮಾ ನದಿಗೆ ಸೇತುವೆ ಕಾಮಗಾರಿ, ಇಂಡಿ ರೈಲು ನಿಲ್ಯಾಣದಿಂದ ಹಲಸಂಗಿ ರಾಷ್ಟ್ರೀಯ ಹೆದ್ದಾರಿವರೆಗೆ ರಸ್ತೆ ಸುಧಾರಣೆ ಕಾಮಗಾರಿ, ಔರಾದ ಸದಾಶಿವಗಡ ರಾಜ್ಯ ಹೆದ್ದಾರಿ-34ರ ರಸ್ತೆ ಸುಧಾರಣೆ ಕಾಮಗಾರಿ, ಜಿ.ಟಿ.ಟಿ.ಸಿ ಕಾಲೇಜು ನಿರ್ಮಾಣ ಕಾಮಗಾರಿ, ಪ್ರಗತಿ ಪಥ ಯೋಜನೆಯಡಿ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಇಲಾಖೆಯ ಕಾಮಗಾರಿಗಳ ಶಂಕುಸ್ಥಾಪನೆ ನೆರವೆರಿಸಲಿದ್ದಾರೆ ಎಂದು ತಿಳಿಸಿದರು.ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯಕ್ರಮ ನಿರ್ವಹಿಸಬೇಕು. ಯಾವುದೇ ಲೋಪವಾಗದಂತೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿಗೊಳಿಸಬೇಕೆಂದು ಹೇಳಿದರು.ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, ಕಾರ್ಯಕ್ರಮದ ಯಶಸ್ವಿಗೆ ಪೂರ್ವ ಸಿದ್ಧತೆ ಕೈಗೊಳ್ಳಬೇಕು. ವೇದಿಕೆ ಸಿದ್ಧತೆ, ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸೂಕ್ತ ಪೊಲೀಸ್ ಬಂದೋಬಸ್ತ್, ಪಟ್ಟಣ ಸ್ವಚ್ಛತೆ, ವೇದಿಕೆ ನಿರ್ವಹಣೆ, ವೇದಿಕೆ ಅಲಂಕಾರ ಸೇರಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ತಿಳಿಸಿದರು.ಜಿಪಂ ಸಿಇಒ ರಿಷಿ ಆನಂದ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಮಾರಿಹಾಳ, ಇಂಡಿ ಎಸಿ ಅನುರಾಧಾ ವಸ್ತ್ರದ, ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಬಸವರಾಜ, ರಾಂಪೂರ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ರವಿಶಂಕರ್, ಇಂಡಿ ಡಿವೈಎಸ್ಪಿ ಜಗದೀಶ್, ಇಂಡಿ ತಹಸೀಲ್ದಾರ್ ಬಿ.ಎಸ್.ಕಡಕಭಾವಿ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.-------ಬಾಕ್ಸ್‌ಯಾವ ಕಾಮಗಾರಿ ಲೋಕಾರ್ಪನೆ
ಇಂಡಿ ಮತ್ತು ಚಡಚಣ ತಾಲೂಕಿನ 19 ಕೆರೆ ತುಂಬಿಸುವ ಯೋಜನೆ, ಜಲಜೀವನ ಮಿಷನ್ ಕಾಮಗಾರಿಗಳು, ಇಂಡಿ ನಗರದಲ್ಲಿ ನೂತನ ಸಿದ್ದೇಶ್ವರ ಬೃಹತ್ ವಾಣಿಜ್ಯ ಸಂಕೀರ್ಣ ಮಾರುಕಟ್ಟೆ, ಇಂಡಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಪ್ರಗತಿ ಕಾಲೋನಿ ಸಿ.ಸಿ.ರಸ್ತೆ, ಹೊರ್ತಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿಗಳಿಗೆ ಹೆಚ್ಚುವರಿ ಕೊಠಡಿಗಳು ಹಾಗೂ ಮೂಲಭೂತ ಸೌಕರ್ಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಇಂಡಿ, ಮಿರಗಿ ಗ್ರಾಮದ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್, ಹೀರೇಇಂಡಿ ಹನುಮಾನ ಗುಡಿಯಿಂದ ಜಲದಪ್ಪನ ಕೆರೆವರೆಗೆ ಹಳ್ಳದ ಅಭಿವೃದ್ಧಿ, ಆಳೂರ ಗ್ರಾಮದಲ್ಲಿ ಬಾಂದಾರ, ಹಿರೇಬೇವನೂರ ಗ್ರಾಮದ ಇಂಗು ಕೆರೆ ಅಭಿವೃದ್ಧಿ, ಹಡಲಸಂಗ ಗ್ರಾಮದ ಸಣ್ಣ ನೀರಾವರಿ ಕೆರೆ ಅಭಿವೃದ್ಧಿ, ಝಳಕಿ ಹಾಗೂ ಇಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರೌಢ ಶಾಲೆ ಕಟ್ಟಡ ಸಾತಲಗಾಂವ ಪಿ.ಆಯ್, ಇಂಡಿ ತಾಲೂಕಿನ 4 ಅಂಗನವಾಡಿ ಕಟ್ಟಡಗಳು, ಅಗರಖೇಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವೈದ್ಯಾಧಿಕಾರಿಗಳ ಮತ್ತು ಸಿಬ್ಬಂದಿಗಳ ವಸತಿ ಗೃಹ ಹಾಗೂ ಝಳಕಿ ಡಿಪ್ಲೋಮಾ ಕಾಲೇಜಿನ ಹೆಚ್ಚುವರಿ ಕೊಠಡಿಗಳ ಕಾಮಗಾರಿಗಳ ಲೋಕಾರ್ಪಣೆಗೊಳಿಸಲಿದ್ದಾರೆ.