ಕನ್ನಡಪ್ರಭ ವಾರ್ತೆ ಧರ್ಮಸ್ಥಳ
ರಾಜ್ಯ ಸರ್ಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಹಾಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಎಂ ಅವರ ಮೊದಲ ಧರ್ಮಸ್ಥಳ ಭೇಟಿ ಇದಾಗಿದೆ.ಮಧ್ಯಾಹ್ನ 12.50ಕ್ಕೆ ಮೈಸೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಒಂದೇ ಕಾರಿನಲ್ಲಿ ಸಿಎಂ, ಡಿಸಿಎಂ ಧರ್ಮಸ್ಥಳಕ್ಕೆ ಆಗಮಿಸಿದರು. ಅವರನ್ನು ಧರ್ಮಸ್ಥಳ ಕ್ಷೇತ್ರದ ಮಹಾದ್ವಾರದಿಂದ ಪೂರ್ಣಕುಂಭ ಕಲಶ, ಬ್ಯಾಂಡ್ ವಾದ್ಯ, ಪತಾಕೆಗಳೊಂದಿಗೆ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಬಳಿಕ, ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ನಾಡಿನ ಒಳಿತಿಗಾಗಿ ಸಿಎಂ ಹಾಗೂ ಡಿಸಿಎಂ ವಿಶೇಷ ಪ್ರಾರ್ಥನೆ, ಪೂಜೆ ನೆರವೇರಿಸಿದರು. ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಬೈರತಿ ಸುರೇಶ್, ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಸಂಜಯ್ ಸುರೇಶ್, ಎಂಎಲ್‌ಸಿ ಗೋವಿಂದರಾಜು ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.
ಬಳಿಕ ಬೀಡಿಗೆ ತೆರಳಿ, ರಾಜ್ಯಸಭಾ ಸದಸ್ಯ, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು. ಡಾ.ಹೆಗ್ಗಡೆ ಅವರೊಂದಿಗೆ ಸಿಎಂ ಮತ್ತು ಡಿಸಿಎಂ ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಡಾ.ಹೆಗ್ಗಡೆ ಅವರು ರಾಜ್ಯ ಸರ್ಕಾರದ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ, ಸಿಎಂ ಮತ್ತು ಡಿಸಿಎಂಗೆ ಬೆಳ್ಳಿಯ ದೀಪ, ವಸ್ತ್ರದ ವಿಶೇಷ ಉಡುಗೊರೆ ನೀಡಿ ಸತ್ಕರಿಸಿದರು. ಬಳಿಕ, ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಭೋಜನ ಸ್ವೀಕರಿಸಿ ಕೆಲವು ಕಾಲ ವಿಶ್ರಾಂತಿ ಪಡೆದು, ನಾಯಕರು ಸಂಜೆ ಮಂಗಳೂರಿಗೆ ಪ್ರಯಾಣ ಬೆಳೆಸಿದರು.ಈ ವೇಳೆ, ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ, ಸರ್ಕಾರದ ಶಕ್ತಿ ಯೋಜನೆಯಿಂದಾಗಿ ರಾಜ್ಯದ ಮೂಲೆ ಮೂಲೆಯಿಂದ ಹೆಚ್ಚಿನ ಭಕ್ತರು ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ ಎಂದು ಧರ್ಮಾಧಿಕಾರಿ ಸಂತೋಷ ಹಂಚಿಕೊಂಡರು. ಅಲ್ಲದೆ, ದೇವರ ದರ್ಶನದ ವೇಳೆ ಅನೇಕ ಮಹಿಳಾ ಭಕ್ತಾದಿಗಳು ತಮಗೆ ಪ್ರತಿ ತಿಂಗಳು 2 ಸಾವಿರ ರು. ಹಣ ಬರುತ್ತಿದೆ ಎಂದು ಸಂತೋಷ ಹಂಚಿಕೊಂಡರು. ನಾನು ಹಾಗೂ ಮುಖ್ಯಮಂತ್ರಿಯವರು ಮಂಜುನಾಥ, ಅಣ್ಣಪ್ಪ ಸ್ವಾಮಿ ಹಾಗೂ ಅಮ್ಮನವರ ದರ್ಶನ ಮಾಡಿದ್ದೇವೆ. ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಉತ್ತಮ ಮಳೆ, ಬೆಳೆಯಾಗಿ ರಾಜ್ಯದ ಜನರು ಶಾಂತಿ, ನೆಮ್ಮದಿಯಿಂದ ಇರಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.
ಜೈ ಶ್ರೀರಾಮ್ ಘೋಷಣೆ:ರಜಾ ದಿನವಾದ್ದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಸಿಎಂ, ಡಿಸಿಎಂ ಬರುತ್ತಲೇ ಸರತಿ ಸಾಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಇದು ಬೆಳಗ್ಗಿನಿಂದಲೇ ಅನ್ನಾಹಾರ ಬಿಟ್ಟು ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಕಾದಿದ್ದ ಭಕ್ತರ ಅಸಮಾಧಾನಕ್ಕೆ ಕಾರಣವಾಯಿತು. ಈ ವೇಳೆ, ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಜೈ ಶ್ರೀರಾಮ್, ಅಬ್ ಕಿ ಬಾರ್ ಮೋದಿ ಸರ್ಕಾರ್ ಎಂದು ಘೋಷಣೆ ಕೂಗಿದ ವಿದ್ಯಮಾನ ನಡೆಯಿತು.ಹರೀಶ್ ಪೂಂಜ ಶಾಸಕ ಅಂತ
ಬಿಡೋಕೆ ಆಗುತ್ತಾ: ಸಿಎಂಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಶಾಸಕ ಅಂತ ಬಿಟ್ಟು ಬಿಡಲು ಆಗುತ್ತಾ? ಶಾಸಕ ಆದ ಮಾತ್ರಕ್ಕೆ ಪೊಲೀಸರ ವಿರುದ್ಧ ಗಲಾಟೆ ಮಾಡಬಹುದಾ? ಕಾನೂನು ಎಲ್ಲರಿಗೂ ಒಂದೇ ಅಲ್ವಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಶಾಸಕ ಪೂಂಜ ಬಂಧನಕ್ಕೆ ಕಾಂಗ್ರೆಸ್ ಒತ್ತಡ ಹೇರುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಮಂಗಳೂರು ಏರ್ಪೋರ್ಟಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನ ಒತ್ತಡ ಅಂದರೆ ಏನು? ಕಾನೂನು ಎಲ್ಲರಿಗೂ ಒಂದೇ ಅಲ್ವಾ ಎಂದು ಪ್ರಶ್ನಿಸಿದರು.ಜಾಮೀನು ರಹಿತ ಅಪರಾಧ: ಹರೀಶ್ ಪೂಂಜ ವಿರುದ್ಧ ಐಪಿಸಿ ಸೆಕ್ಷನ್ 353 ಅಡಿ ಪ್ರಕರಣ ದಾಖಲಾಗಿದೆ. ಇದು ಜಾಮೀನು ರಹಿತ ಅಪರಾಧ. ಈ ಕಾನೂನಿನಂತೆ 7 ವರ್ಷ ಜೈಲು ಶಿಕ್ಷೆ ನೀಡುವ ಅವಕಾಶವಿದೆ. ಹರೀಶ್ ಪೂಂಜ ಶಾಸಕರೆಂದ ಮಾತ್ರಕ್ಕೆ ಅವರ ಮೇಲಿನ ಆರೋಪ ಅಲ್ಲಗಳೆಯಬಹುದಾ? ಶಾಸಕ ಅಂತ ಬಿಟ್ಟು ಬಿಡೋಕೆ ಆಗುತ್ತಾ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಹರೀಶ್ ಪೂಂಜ ಮೇಲೆ ಎರಡು ಎಫ್ಐಆರ್ ದಾಖಲಾಗಿವೆ. ಅವರು ಗಲಾಟೆ ಮಾಡಿದ್ದು ಯಾರ ಪರವಾಗಿ ಗೊತ್ತಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.ಖಾದರ್ ಸಹೋದರಿ ಪುತ್ರಿ ವಿವಾಹಕ್ಕೆ ರಾಜಕಾರಣಿಗಳ ದಂಡುವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರ ಸಹೋದರಿಯ ಪುತ್ರಿಯ ವಿವಾಹ ಸಮಾರಂಭ ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿ ಶನಿವಾರ ರಾತ್ರಿ ನಡೆದಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯಪಾಲರಾದಿಯಾಗಿ ವಿವಿಧ ಪಕ್ಷಗಳ ನಾಯಕರ ದಂಡೇ ಆಗಮಿಸಿತ್ತು. ಈ ಕಾರಣದಿಂದ ಮಂಗಳೂರು ನಗರದ ಮಹಾತ್ಮಾ ಗಾಂಧಿ ರಸ್ತೆಯನ್ನೇ ವಾಹನ ಸಂಚಾರಕ್ಕೆ ಬಂದ್ ಮಾಡಲಾಗಿತ್ತು. ರಾಜ್ಯ ಸರ್ಕಾರದ ಬಹುತೇಕ ಸಚಿವರು, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ವಿವಿಧ ಪಕ್ಷಗಳ ಶಾಸಕರು, ರಾಜ್ಯ, ರಾಷ್ಟ್ರ ಮಟ್ಟದ ಅನೇಕ ಮುಖಂಡರು ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು.