ಕನ್ನಡಪ್ರಭ ವಾರ್ತೆ ಮದ್ದೂರು
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ದೆಹಲಿ ಭೇಟಿಯಿಂದ ಯಾವುದೇ ರಾಜಕೀಯ ಬೆಳವಣಿಗೆಯಾಗಲ್ಲ ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ಹೇಳಿದರು.ತಾಲೂಕಿನ ಆತಗೂರು ಹೋಬಳಿಯ ಹೊಸಹಳ್ಳಿ, ವಳಗೆರೆದೊಡ್ಡಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪಕ್ಷ ಸಂಘಟನೆ, ನಿಗಮ, ಮಂಡಳಿ ಮತ್ತು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸಚಿವರನ್ನು ಭೇಟಿ ಮಾಡಲು ದೆಹಲಿಗೆ ಹೋಗಿರುತ್ತಾರೆ. ಇವು ಪೂರ್ವಯೋಜಿತ ನಿಗದಿಯ ಕಾರ್ಯಕ್ರಮಗಳಾಗಿವೆ. ಇದು ರಾಜ್ಯದ ರಾಜಕೀಯ ಬೆಳವಣಿಗೆ ಎಂದು ಅರ್ಥ ಕಲ್ಪಿಸುವುದು ಅಗತ್ಯವಿಲ್ಲ ಎಂದರು.
ನಿಗಮ, ಮಂಡಳಿಯ ಯಾವುದೇ ಹುದ್ದೆ ಆಕಾಂಕ್ಷಿ ನಾನಲ್ಲ. ಕ್ಷೇತ್ರದ ಜನರಿಗೆ ಈ ಹಿಂದೆ ನೀಡಿದ ವಾಗ್ದಾನದಂತೆ ಶಾಸಕನಾಗಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದೇನೆ. ಇದನ್ನು ನನ್ನನ್ನು ಹೊರತುಪಡಿಸಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನಿಗಮ, ಮಂಡಳಿಯಲ್ಲಿ ಸ್ಥಾನ ಕೊಡಿಸುವ ಉದ್ದೇಶ ಹೊಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.ನಿಖಿಲ್ ಗೆ ರಾಜಕೀಯ ಅನುಭವದ ಕೊರತೆ:
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೂರು ಚುನಾವಣೆಗಳಲ್ಲಿ ಸೋತು ಸುಣ್ಣವಾಗಿದ್ದಾನೆ. ಜೊತೆಗೆ ರಾಜಕೀಯ ಅನುಭವದ ಕೊರತೆಯಿದೆ. ತಮ್ಮ ತಾತ ಮತ್ತು ಅಪ್ಪನ ಹೆಸರಿನ ಮೇಲೆ ರಾಜಕಾರಣ ಮಾಡುತ್ತಿದ್ದಾನೆ ಎಂದು ಲೇವಡಿ ಮಾಡಿದರು.ನಿಖಿಲ್ ರಾಜಕಾರಣಕ್ಕೆ ಬರುವ ಮೊದಲು ತಾತ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ತಂದೆ ಕುಮಾರಸ್ವಾಮಿ ಅವರಿಂದ ರಾಜಕೀಯದ ಅಂತರಂಗ ಮತ್ತು ಬಹಿರಂಗವನ್ನು ಚೆನ್ನಾಗಿ ಅರಿತುಕೊಳ್ಳಬೇಕಿತ್ತು. ರಾಜಕೀಯದ ಅನುಭವ ಇಲ್ಲದಿರುವುದೇ ಈತನ ಸತತ ಸೋಲಿಗೆ ಕಾರಣವಾಗಿದೆ ಎಂದರು.
ಇನ್ನು ಯುವಕನಾಗಿರುವ ನಿಖಿಲ್ ಹಿರಿಯರಿಗೆ ಗೌರವ ಕೊಟ್ಟು ಮಾತನಾಡುವುದನ್ನು ಕಲಿಯಬೇಕಿತ್ತು. ರಾಜಕಾರಣದ ಅನುಭವ ಇಲ್ಲದಂತೆ ಮಾತನಾಡುತ್ತಿದ್ದಾನೆ. ಇದರಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಯಾರೋ ಒಬ್ಬರನ್ನು ಟೀಕೆ ಮಾಡುವುದರಿಂದ ದೊಡ್ಡ ನಾಯಕನಾಗಿ ಬೆಳೆಯುತ್ತೇನೆ ಎಂಬ ಅಹಂಕಾರ ಆತನನ್ನು ಕಾಡುತ್ತಿದೆ ಎಂದು ಕಿಡಿಕಾರಿದರು.ಮುಂದಿನ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ ಈ ಎಲ್ಲಾ ತಪ್ಪುಗಳನ್ನು ತಿದ್ದಿಕೊಂಡರೆ ರಾಜಕೀಯದಲ್ಲಿ ಬೆಳೆಯಲು ಸಾಧ್ಯ. ರಾಜಕಾರಣದಲ್ಲಿ ಅನನುಭವಿಯಾದ ನಿಖಿಲ್ ನನ್ನು ಜೆಡಿಎಸ್ ನಾಯಕರು ಜೋಕರ್ ರೀತಿ ಬಿಂಬಿಸುತ್ತಿದಾರೆ ಎಂದು ಕುಹಕವಾಡಿದರು.