ವಿಪತ್ತು ನಿರ್ವಹಣೆಗೆ ಸಜ್ಜಾಗಲು ಡೀಸಿ, ಸಿಇಒಗಳಿಗೆ ಸಿಎಂ ಡಿಕೆಶಿ ಸೂಚನೆ

KannadaprabhaNewsNetwork |  
Published : Jul 20, 2026, 12:15 AM IST
೯ಕೆಎಲ್‌ಆರ್-೨-1ರಾಜ್ಯಾದ್ಯಂತ ಮುಂಗಾರು ಮಳೆ ಕೊರತೆಯಿಂದ ತೀವ್ರ ಬರಗಾಲದ ಪರಿಸ್ಥಿತಿ ಕುರಿತು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಓಗಳು ಸಂಭವನೀಯ ಬರಗಾಲದ ವಿಪತ್ತು ಕುರಿತು ಬೆಂಗಳೂರಿನ ವಿಧಾನ ಸೌಧ ೩ನೇ ಮಹಡಿಯಲ್ಲಿ ಸಮಿತಿ ಕೊಠಡಿ ಸಂಖ್ಯೆ ೩೧೩ ವಿಡಿಯೋ ಸಂವಾದ ನಡೆಸುತ್ತಿರುವ ಸಿಎಂ ಡಿ.ಕೆ.ಶಿವಕುಮಾರ್. | Kannada Prabha

ಸಾರಾಂಶ

ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಅಂಕಿ ಸಂಖ್ಯೆಗಳ ಮಾಹಿತಿ ಆಯಾ ತಾಲೂಕುವಾರು ಅಧಿಕಾರಿಗಳಲ್ಲಿ ಇರಬೇಕು. ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ, ಯುವನಿಧಿ, ಗೃಹಜ್ಯೋತಿ ಯೋಜನೆಗಳ ಎಲ್ಲ ಅನುಷ್ಠಾನಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒ ಅವರಿಂದ ನಿರಂತರ ಸೂಚನೆ ಹೋಗಬೇಕು. ಆಯಾ ಇಲಾಖೆಗಳ ವಿವಿಧ ಯೋಜನೆಗಳ ಅನುಷ್ಠಾನದ ಯಶೋಗಾಥೆಯ ಸಂಕ್ಷಿಪ್ತ ಮಾಹಿತಿಯು ನಿರಂತರವಾಗಿ ವಾರ್ತಾ ಇಲಾಖೆಯ ಮೂಲಕ ಪತ್ರಿಕೆಗಳಿಗೆ ಹೋಗಬೇಕು. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕರು ಸರ್ಕಾರಿ ಶಾಲೆಗಳ ಶಿಕ್ಷಕರ ಕೊರತೆ ಹಾಗೂ ಪಾಠ ಪ್ರವಚನಗಳ ಬಗ್ಗೆ ಗಮನ ಹರಿಸಬೇಕು.

ಕನ್ನಡಪ್ರಭ ವಾರ್ತೆ ಕೋಲಾರ

ರಾಜ್ಯಾದ್ಯಂತ ಮುಂಗಾರು ಮಳೆ ಕೊರತೆಯಿಂದ ತೀವ್ರ ಬರಗಾಲದ ಪರಿಸ್ಥಿತಿ ಎದುರಾಗಿದೆ. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒಗಳು ಸಂಭವನೀಯ ಬರಗಾಲದ ವಿಪತ್ತನ್ನು ಎದುರಿಸಲು ಸನ್ನದ್ಧರಾಗಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರು.

ಭಾನುವಾರ ಬೆಂಗಳೂರಿನ ವಿಧಾನ ಸೌಧ ೩ನೇ ಮಹಡಿಯಲ್ಲಿ ಸಮಿತಿ ಕೊಠಡಿ ಸಂಖ್ಯೆ ೩೧೩ರಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒರೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.

ಬರದ ವಿಪತ್ತು ಎದುರಿಸಲು ಜಿಲ್ಲಾಡಳಿತ ಮತ್ತು ಜಿಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಂದು ತಂಡವಾಗಿ ಕೆಲಸ ಮಾಡಬೇಕು. ಯುದ್ಧೋಪಾದಿಯಲ್ಲಿ ಬರದ ನಿರ್ವಹಣೆ ಒತ್ತು ನೀಡಬೇಕು. ಬರ ಸಂದರ್ಭದಲ್ಲಿ ಸರ್ಕಾರ ಕೈಗೊಂಡಿರುವ ಕಾರ್ಯಗಳು ಹಾಗೂ ಕಾಳಜಿ ಜನರಿಗೆ ಮನದಟ್ಟಾಗುವಂತೆ ಅಧಿಕಾರಿಗಳು ಸರ್ಕಾರದ ಧ್ವನಿಯಾಗಿ ಕೆಲಸ ಮಾಡಬೇಕು. ವಿಪತ್ತು ಪರಿಹಾರ ಕಾರ್ಯಕ್ಕೆ ಸರ್ಕಾರ ಸನ್ನದ್ಧವಾಗಿದೆ. ಯಾವುದೇ ಹಣಕಾಸಿನ ಕೊರತೆಯಿಲ್ಲ. ಜನರಿಗೆ ಕುಡಿಯುವ ನೀರು ಕೈಗೊಂಡ ಕ್ರಮಗಳ ಬಗ್ಗೆ ಜನತೆಗೆ ತಿಳಿಸಿ. ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗಳು ಕೃಷಿ, ತೋಟಗಾರಿಕೆ, ಪಶುಪಾಲನೆ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ಬರ ನಿರ್ವಹಣೆಗೆ ಕಾರ್ಯಯೋಜನೆ ರೂಪಿಸಬೇಕು. ಈ ಬಗ್ಗೆ ಪ್ರಜಾ ಸೇವಾ, ಕಂದಾಯ ಇಲಾಖೆ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿಯಮಿತವಾಗಿ ವರದಿ ಸಲ್ಲಿಸಬೇಕು ಎಂದು ಸಿಎಂ ನಿರ್ದೇಶನ ನೀಡಿದರು.

ಬರ ಅಧ್ಯಯನಕ್ಕೆ ಕೇಂದ್ರ ತಂಡ:

ಸದ್ಯದಲ್ಲೇ ರಾಜ್ಯಕ್ಕೆ ಬರ ಪರಿಸ್ಥಿತಿ ಅವಲೋಕನಕ್ಕಾಗಿ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಲಿದೆ. ತಂಡಕ್ಕೆ ಅತ್ಯಗತ್ಯ ಮಾಹಿತಿ ಕೊಡಲು ತಯಾರಿ ಮಾಡಿಕೊಳ್ಳಬೇಕು. ಈಗಾಗಲೇ ರಾಜ್ಯದಿಂದ ಕಲಬುರಗಿ, ಬೆಳಗಾವಿನಲ್ಲಿ ಸಂಚರಿಸಿ ಬರದ ಅವಲೋಕನ ನಡೆಸಲಾಗಿದೆ. ಇದೆ ರೀತಿ ರಾಜ್ಯದ ಬೇರೆ ಬೇರೆ ಕಡೆಗೆ ಸಂಚರಿಸಿ ಬರ ಅವಲೋಕನ ಸಭೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ವಿಪತ್ತು ನಿರ್ವಹಣೆ ಅನುವಾಗುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಹಣಕಾಸಿನ ನೆರವು ಒದಗಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಪಿಡಿ ಅಕೌಂಟನಲ್ಲಿ ಅಂದಾಜು ₹೩೯೭ ಕೋಟಿ ಹಣವಿದೆ. ರಾಜ್ಯದ ಯಾದಗಿರಿ, ವಿಜಯಪುರ ಸೇರಿ ಇನ್ನಿತರೆ ಕಡೆ ಜನತೆ ಗುಳೆ ಹೊರಟಿದ್ದಾರೆ ಎನ್ನುವ ಮಾಹಿತಿಯಿದೆ. ಜನತೆ ಗುಳೆ ಹೋಗುವುದನ್ನು ತಪ್ಪಿಸಲು ಎಲ್ಲ ಜಿಲ್ಲೆಗಳಲ್ಲಿ ಕೂಡಲೇ ವಿಬಿ- ಜಿ ರಾಮ ಜಿ ಯೋಜನೆಯಡಿ ಉದ್ಯೋಗ ಒದಗಿಸಬೇಕು ಎಂದು ಸಿಇಒಗಳಿಗೆ ಸೂಚನೆ ನೀಡಿದರು.

ಎಸ್‌ಐಆರ್ ಕಾರ್ಯವು ಎಲ್ಲ ಜಿಲ್ಲೆಗಳಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು. ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕಾರ್ಯಪ್ರವೃತ್ತರಾಗಬೇಕು ಎಂದು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಸೂಚನೆ ನೀಡಿದರು.

ರಾಜ್ಯದ ಜನತೆಗೆ ಶುದ್ಧ ಕುಡಿವ ನೀರು ಪೂರೈಸಬೇಕು. ಈ ದಿಸೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೂಚನೆ ನೀಡಿದರು.

ರಾಜ್ಯದ ಅಂದಾಜು ೮೮ ತಾಲೂಕುಗಳಲ್ಲಿ ಅಂತರ್ಜಲ ನೀರಿನ ಮಟ್ಟ ಕುಸಿದಿದೆ ಎಂದು ವರದಿಯಾಗಿದೆ. ಜನರಿಗೆ ಕುಡಿವ ನೀರು ಕೊಡಲೇಬೇಕು. ಜಲಾಶಯಗಳ ನೀರನ್ನು ಕುಡಿಯಲು ಮಾತ್ರ ಬಳಸಬೇಕು. ಜಾನುವಾರುಗಳಿಗೆ ಸಹ ಕುಡಿವ ನೀರು ಮತ್ತು ಮೇವು ಪೂರೈಕೆಗೆ ಸಹ ಒತ್ತು ಕೊಡಬೇಕು. ಈ ಎಲ್ಲದರ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿ ಕ್ರಮ ವಹಿಸಬೇಕು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಅಂಕಿ ಸಂಖ್ಯೆಗಳ ಮಾಹಿತಿ ಆಯಾ ತಾಲೂಕುವಾರು ಅಧಿಕಾರಿಗಳಲ್ಲಿ ಇರಬೇಕು. ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ, ಯುವನಿಧಿ, ಗೃಹಜ್ಯೋತಿ ಯೋಜನೆಗಳ ಎಲ್ಲ ಅನುಷ್ಠಾನಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಒ ಅವರಿಂದ ನಿರಂತರ ಸೂಚನೆ ಹೋಗಬೇಕು. ಆಯಾ ಇಲಾಖೆಗಳ ವಿವಿಧ ಯೋಜನೆಗಳ ಅನುಷ್ಠಾನದ ಯಶೋಗಾಥೆಯ ಸಂಕ್ಷಿಪ್ತ ಮಾಹಿತಿಯು ನಿರಂತರವಾಗಿ ವಾರ್ತಾ ಇಲಾಖೆಯ ಮೂಲಕ ಪತ್ರಿಕೆಗಳಿಗೆ ಹೋಗಬೇಕು. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕರು ಸರ್ಕಾರಿ ಶಾಲೆಗಳ ಶಿಕ್ಷಕರ ಕೊರತೆ ಹಾಗೂ ಪಾಠ ಪ್ರವಚನಗಳ ಬಗ್ಗೆ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.

ವಿಡಿಯೋ ಸಂವಾದ ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು. ಇಂಧನ ಸಚಿವ ಕೆ.ಜೆ. ಜಾರ್ಜ್, ನೀರಾವರಿ ಸಚಿವರಾದ ರಾಮಲಿಂಗಾರೆಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಈಶ್ವರ ಖಂಡ್ರೆ, ಆರೋಗ್ಯ ಸಚಿವ.ಟಿ. ಖಾದರ್, ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಇದ್ದರು.

ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್ ಕೊಠಡಿಯಿಂದ ವಿಡಿಯೋ ಸಂವಾದದಲ್ಲಿ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ , ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಎಡಿಸಿ ಎಸ್.ಎಂ.ಮಂಗಳಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಜಿಟಲ್ ಯುಗದಲ್ಲಿ ರೋಚಕತೆ ಬೇಕಿದೆಯೇ ಹೊರತು ಸತ್ಯವಲ್ಲ: ವೈ.ಎಸ್.ವಿ.ದತ್ತ
ಶೀಘ್ರ ರೇಲ್ವೆ ಸಚಿವರ ಭೇಟಿ ಮಾಡುವೆ: ಕೋಟಾ ಶ್ರೀನಿವಾಸ ಪೂಜಾರಿ