ರಾಣಿಬೆನ್ನೂರು: ಕೇಂದ್ರ ನಾಯಕರು ಹಾಗೂ ದೇಶದ ವಿವಿಧ ರಾಜ್ಯಗಳ ಚುನಾವಣೆಗೆ ಹಣ ಕಳುಹಿಸುವ ಎಟಿಎಂ ಯಂತ್ರದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ತೀವ್ರವಾಗಿ ಆರೋಪಿಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ರು. 272 ಕೋಟಿ ಅನುದಾನ ನೀಡಿದ್ದರೆ, ನಂತರ ಬಂದ ಬಿಜೆಪಿ ಸರ್ಕಾರ ರು.2081 ಕೋಟಿ ಅನುದಾನ ನೀಡಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. ಆದರೆ ಪ್ರಸ್ತುತ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ವೃದ್ಧಾಪ್ಯ ವೇತನ ಸೇರಿದಂತೆ ಹಲವು ಸೌಲಭ್ಯಗಳಲ್ಲಿ ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿ ಯಾವುದೇ ಪ್ರಮುಖ ಅಭಿವೃದ್ಧಿ ಯೋಜನೆಗಳು ನಡೆಯುತ್ತಿಲ್ಲ. ಕೇವಲ ಕಾರ್ಯಕ್ರಮಗಳನ್ನು ನಡೆಸಿ ಹಣ ವ್ಯಯ ಮಾಡಲಾಗುತ್ತಿದೆ. ನೀರಾವರಿ ಯೋಜನೆಗಳಲ್ಲಿಯೂ ನಿರ್ಲಕ್ಷ್ಯ ತೋರಲಾಗುತ್ತಿದೆ. ಕೆಟ್ಟ ಮೋಟಾರ್‌ಗಳನ್ನು ಸರಿಪಡಿಸುವುದಲ್ಲದೆ, ತಾತ್ಕಾಲಿಕವಾಗಿ ನೀರು ಎತ್ತುವ ಕೆಲಸ ಮಾತ್ರ ನಡೆಯುತ್ತಿದೆ. ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಸುಮಾರು ರು.3 ಲಕ್ಷ ಕೋಟಿ ಸಾಲದ ಹೊರೆ ಹೆಚ್ಚಾಗಿದೆ. ಅಭಿವೃದ್ಧಿ ಯೋಜನೆಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದರು.
ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಬರಗಾಲ, ಮಳೆಗಾಲ ಇರಲಿ. ಯಾವುದೇ ಕೆರೆ ನೀರಿಲ್ಲದೆ ಇರಬಾರದೆಂದು ನಮ್ಮ ಅಧಿಕಾರ ಅವಧಿಯಲ್ಲಿ ಈ ಯೋಜನೆ ಮಾಡಲಾಗಿತ್ತು. ಈ ವರ್ಷ ಮಳೆ ಕಡಿಮೆಯಾಗಿದೆ ಆದರೂ ಕೂಡ ಸಮರ್ಪಕವಾಗಿ ಕೆರೆಗೆ ನೀರು ತುಂಬಿಲ್ಲ, ಕಳೆದ ತಿಂಗಳಿಂದ ಮಳೆಯಿಂದ ನದಿಗೆ ನೀರು ಬಂದಿದೆ. ಹೀಗಿದ್ದರೂ ಜಿಲ್ಲೆಯ ಕೆರೆಗಳಿಗೆ ಮಾತ್ರ ನೀರು ಹೋಗುತ್ತಿಲ್ಲ. ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ರೈತರು ಬದುಕು ಚಿಂತಾಜನಕವಾಗಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಬೇಗ ಕೆರೆಗೆ ನೀರು ಹರಿಸಬೇಕು ಎಂದು ಪಾಟೀಲ ಆಗ್ರಹಿಸಿದರು.ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ರೈತರಿಗೆ ನೀರು ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರಿಗೆ ನೀರು ಕೊಡಲು ಹೋರಾಟ ನಡೆಸುವ ಪರಿಸ್ಥಿತಿ ಉಂಟಾಗಿದೆ. ಪ್ರಸ್ತುತ ಸರ್ಕಾರ ಅತ್ಯಂತ ಲಜ್ಜೆಗೆಟ್ಟದ್ದಾಗಿದ್ದು ರೈತರ ಸಮಸ್ಯೆಗಳತ್ತ ಯಾವುದೇ ಗಂಭೀರತೆ ತೋರಿಸುತ್ತಿಲ್ಲ. ನೀರಾವರಿ ಕೆರೆ ತುಂಬಿಸುವ ಯೋಜನೆಗಳನ್ನು ನಮ್ಮ ರೈತ ನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಗಳು ಅನುದಾನ ನೀಡಿ ಜಾರಿಗೊಳಿಸಿದ್ದವು. ಆದರೆ ಆ ಯೋಜನೆಗಳ ಕಾಮಗಾರಿಗಳನ್ನು ಪ್ರಸ್ತುತ ಸರ್ಕಾರ ಹಾಗೂ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸದೇ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ರೈತರ ಪರ ಕಾಳಜಿ ಇಲ್ಲ. ಅಧಿಕಾರ ವಹಿಸಿಕೊಂಡ ನಂತರ ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಜಿಲ್ಲೆಗೆ ಭೇಟಿ ನೀಡಿದ ನಂತರ ಮಾತ್ರ ಮಳೆಯಾಗಿರುವುದು ಇಂದಿನ ಸ್ಥಿತಿಯನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಡಿ.ಎಂ. ಸಾಲಿ, ಕೆ. ಶಿವಲಿಂಗಪ್ಪ, ಮಾಲತೇಶ ಗಂಗನಗೌಡ್ರ, ಸುಶೀಲ ನಾಡಿಗೇರ, ಹಾಲಮಠಸ್ವಾಮಿ, ಸಂಜೀವಯ್ಯ ಕಬ್ಬಿಣಕಂತಿಮಠ, ಸಿದ್ದಣ್ಣ ಚಿಕ್ಕಬಿದರಿ, ರೈತ ಮೋರ್ಚಾ ಅಧ್ಯಕ್ಷ ಗಂಗಾಧರ ಬಾಣದ, ರವಿಶಂಕರ ಬಾಳದ, ಡಿ.ಸಿ. ಪಾಟೀಲ, ಪರಮೇಶ ಗೂಳಣ್ಣನವರ, ಮಂಜುನಾಥ ಕಾಟಿ, ಸುಭಾಶ ಶಿರಗೇರಿ, ದೇವರಾಜ ನಾಗಣ್ಣನವರ, ಮಲ್ಲಿಕಾರ್ಜುನ ಅಂಗಡಿ, ಮೌನೇಶ ತಳವಾರ, ಲಿಂಗರಾಜ ಬೂದನೂರ, ನವೀನ ಅಡ್ಡಿ, ಬಸವರಾಜ ಕೆರೂಡಿ ಮತ್ತಿತರರಿದ್ದರು.