ಕಿತ್ತೂರು ಉತ್ಸವ ಜ್ಯೋತಿಗೆ ಸಿಎಂ ಚಾಲನೆ

KannadaprabhaNewsNetwork |  
Published : Oct 03, 2024, 01:28 AM IST
Kittur rani chennamma 10 | Kannada Prabha

ಸಾರಾಂಶ

ಬ್ರಿಟೀಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಅವರ ವಿಜಯ 200 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಅದ್ಧೂರಿ ‘ಕಿತ್ತೂರು ವಿಜಯೋತ್ಸವ ಜ್ಯೋತಿಗೆ’ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ವಿಧಾನಸೌಧ ಆವರಣದಲ್ಲಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬ್ರಿಟೀಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಅವರ ವಿಜಯ 200 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಅದ್ಧೂರಿ ‘ಕಿತ್ತೂರು ವಿಜಯೋತ್ಸವ ಜ್ಯೋತಿಗೆ’ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ವಿಧಾನಸೌಧ ಆವರಣದಲ್ಲಿ ಚಾಲನೆ ನೀಡಿದರು.

200ನೇ ಕಿತ್ತೂರು ವಿಜಯೋತ್ಸವ (ಕಿತ್ತೂರು ಉತ್ಸವ-2024) ಅ.23 ರಿಂದ ಮೂರು ದಿನಗಳ ಕಾಲ ಕಿತ್ತೂರಿನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳನ್ನೂ ಹಾದು ಹೋಗಿ ಕಿತ್ತೂರು ತಲುಪುವ ಕಿತ್ತೂರಿ ವಿಜಯೋತ್ಸವ ಜ್ಯೋತಿಗೆ ಸಿದ್ದರಾಮಯ್ಯ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಸ್ವಾಭಿಮಾನ-ನಾಡಭಕ್ತಿ, ದೇಶಭಕ್ತಿಗೆ ಮತ್ತೊಂದು ಹೆಸರು ರಾಣಿ ಚನ್ನಮ್ಮ.ಬ್ರಿಟಿಷರ ವಿರುದ್ಧ ನೇರ ಸವಾಲೊಡ್ಡಿದ ದಿಟ್ಟ ಮಹಿಳೆ. ಸಂಗೊಳ್ಳಿ ರಾಯಣ್ಣ ಕೂಡ ರಾಣಿ ಚನ್ನಮ್ಮ ಅವರ ಸೈನ್ಯದಲ್ಲಿದ್ದರು. ಬ್ರಿಟೀಷರಿಗೆ ತೆರಿಗೆ ಕೊಡಲು ವಿರೋಧಿಸಿ ವಿರೋಚಿತವಾಗಿ ಹೋರಾಡಿದ ದೇಶಪ್ರೇಮಿಗಳು ಇವರು. ಇವರನ್ನು ನಾಡು ಎಂದೆಂದಿಗೂ ಸ್ಮರಿಸಬೇಕು ಎಂದು ಹೇಳಿದರು.

ನಾಡಪ್ರೇಮ, ದೇಶಪ್ರೇಮ, ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ರಾಣಿ ಚನ್ನಮ್ಮ. ಕಿತ್ತೂರಿನಲ್ಲಿ ಆಚರಿಸಲ್ಪಡುತ್ತಿರುವ ಕಿತ್ತೂರು ಉತ್ಸವಕ್ಕೆ ಮತ್ತು ಕಿತ್ತೂರಿನ‌ ಅಭಿವೃದ್ಧಿಗೆ ಸರ್ಕಾರ ಸಕಲ ನೆರವನ್ನು ನೀಡುತ್ತಿದೆ. ಅಗತ್ಯ ಅನುದಾನವನ್ನೂ ನೀಡುತ್ತಿದೆ ಎಂದು ಹೇಳಿದರು.ಈ ವೇಳೆ ಸಚಿವರಾದ ಎಚ್.ಕೆ. ಪಾಟೀಲ್‌, ಲಕ್ಷ್ಮೀ ಹೆಬ್ಬಾಳ್ಕರ್‌, ಪ್ರಿಯಾಂಕ್‌ ಖರ್ಗೆ, ವಿಧಾನಪರಿಷತ್‌ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್‌, ಶಾಸಕರಾದ ರಿಜ್ವಾನ್‌ ಅರ್ಷದ್‌, ಎನ್‌.ಎ. ಹ್ಯಾರಿಸ್‌ ಹಾಜರಿದ್ದರು.

ಸಿದ್ದು ಬಟ್ಟೆಗೆ ತಗುಲಿದ ಬೆಂಕಿ!

ಕಿತ್ತೂರು ಉತ್ಸವದ ಜ್ಯೋತಿಗೆ ಚಾಲನೆ ನೀಡುವಾಗ ಜ್ಯೋತಿಯ ಬೆಂಕಿ ಸಿದ್ದರಾಮಯ್ಯ ಬಟ್ಟೆಗೆ ತಗುಲಿತು. ಈ ವೇಳೆ ಕ್ಷಣಾರ್ಧದಲ್ಲಿ ಎಚ್ಚೆತ್ತ ಸಿದ್ದರಾಮಯ್ಯ ಅವರ ಭದ್ರತಾ ಸಿಬ್ಬಂದಿಯಿಂದ ಸಿದ್ದರಾಮಯ್ಯ ಅವರನ್ನು ಪಕ್ಕಕ್ಕೆ ಸರಿಸಿದರು. ಬಳಿಕ ಸಿಬ್ಬಂದಿ ಹಾಗೂ ಸಿದ್ದರಾಮಯ್ಯ ಅವರು ಬೆಂಕಿ ಕೊಡವಿಕೊಂಡಿದ್ದರಿಂದ ಯಾವುದೇ ಸಮಸ್ಯೆಯಾಗಲಿಲ್ಲ.

PREV