ಕನ್ನಡ ಪ್ರಭ ವಾರ್ತೆ ದಾವಣಗೆರೆರಾಜ್ಯದ ಮುಖ್ಯಮಂತ್ರಿಗಳು ವಿಧಾನಸೌಧ ಮುಂಭಾಗದಲ್ಲಿ ರಾಜ್ಯ ಮಟ್ಟದ ಜನಸ್ಪಂದನವನ್ನು ಫೆಬ್ರವರಿ 8ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ನಡೆಸಲಿದ್ದು ಎಲ್ಲಾ ಅಧಿಕಾರಿಗಳು ಅವರ ಕೇಂದ್ರಸ್ಥಾನದಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಕಳೆದ ತಿಂಗಳು ಮುಖ್ಯಮಂತ್ರಿಗಳ ಜನಸ್ಪಂದನಕ್ಕೆ ಸಲ್ಲಿಕೆಯಾಗಿದ್ದ ಜಿಲ್ಲೆಗೆ ಸಂಬಂಧಿಸಿದ ಅರ್ಜಿಗಳಲ್ಲಿ 43 ಅರ್ಜಿಗಳು ಬಾಕಿ ಇದ್ದು, ಇದನ್ನು ಒಂದೇ ದಿನದಲ್ಲಿ ಇತ್ಯರ್ಥ ಮಾಡಲು ಸೂಚನೆ ನೀಡಿದರು.
ಸಂವಿಧಾನ ಜಾಗೃತಿ ಜಾಥಾ: ಜಿಲ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯುತ್ತಿದ್ದು, ಎಲ್ಲಾ ಅಧಿಕಾರಿಗಳು ಜಾಥಾ ಕಾರ್ಯಕ್ರಮದ ಅಂಗವಾಗಿ ಅವರ ಇಲಾಖೆಯಿಂದ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂವಿಧಾನದ ಕುರಿತು ಜಾಗೃತಿ ಮೂಡಿಸಲು ಮುಂದಾಗಬೇಕೆಂದು ಸೂಚನೆ ನೀಡಿದರು. ಜಾಥಾ ಅಂಗವಾಗಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಭಾಷಣ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲು ಮುಂದಾಗಬೇಕು. ಶಿಕ್ಷಕರು ಮತ್ತು ಉಪನ್ಯಾಸಕರು, ರೈತರು, ಸ್ತ್ರೀಶಕ್ತಿ ಸಂಘದ ಸದಸ್ಯರು ಸಹ ಸಕ್ರಿಯವಾಗಿ ಜಾಥಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲು ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.