ಸೆ.6ರಂದು ಎತ್ತಿನಹೊಳೆ ಯೋಜನೆ ಸಿಎಂ ಚಾಲನೆ : ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಅನುಕೂಲ

KannadaprabhaNewsNetwork | Updated : Jan 27 2025, 07:28 AM IST

ಸಾರಾಂಶ

 ಎತ್ತಿನಹೊಳೆ ಯೋಜನೆ ಒಂದು ಹಂತಕ್ಕೆ ಬಂದಿದ್ದು ಸೆ.6ರಂದು ಮುಖ್ಯಮಂತ್ರಿಗಳು ಚಾಲನೆ ನೀಡುವರು. ಯೋಜನೆಯಿಂದ ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಹೆಚ್‌. ಮುನಿಯಪ್ಪ ತಿಳಿಸಿದರು.

ದೇವನಹಳ್ಳಿ: ಎತ್ತಿನಹೊಳೆ ಯೋಜನೆ ಒಂದು ಹಂತಕ್ಕೆ ಬಂದಿದ್ದು ಸೆ.6ರಂದು ಮುಖ್ಯಮಂತ್ರಿಗಳು ಚಾಲನೆ ನೀಡುವರು. ಯೋಜನೆಯಿಂದ ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಹೆಚ್‌. ಮುನಿಯಪ್ಪ ತಿಳಿಸಿದರು. 

ಪಟ್ಟಣದ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ , ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಆಡಳಿತದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಡಾ. ಅಂಬೇಡ್ಕರ್‌ ಮತ್ತು ಮಹಾತ್ಮ ಗಾಂಧೀಜಿ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ, ರಾಷ್ಟ್ರ ಧ್ವಜಾರೋಹಣ ಮಾಡಿ, ತ್ರಿವರ್ಣ ಧ್ವಜಕ್ಕೆ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ಎತ್ತಿನ ಹೊಳೆ ಯೋಜನೆಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ 1924 ಟಿಎಂಸಿ ನೀರು ಬರಲಿದೆ. ಅಂತರ್ಜಲ ಮರುಪೂರ್ಣಗೊಳಿಸುವ ಸಲುವಾಗಿ 46 ಸಣ್ಣ ನೀರಾವರಿ ಕೆರೆಗಳಿಗೆ 2901 ಟಿಎಂಸಿ ನೀರು ತುಂಬಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 611 ಕೆರೆಗಳಿದ್ದು ದೇವನಹಳ್ಳಿ ತಾಲೂಕಿನ 101 ಕೆರೆಗಳ ಪೈಕಿ ಪ್ರಥಮ ಹಂತದಲ್ಲಿ ಬಯಪದಿಂದ 12 ಕೆರೆಗಳ ಸಮಗ್ರ ಅಭಿವೃದ್ಧಿಗೆ 50 ಕೋಟಿ ರು. ಅಂದಾಜು ಪಟ್ಟಿ ತಯಾರಿಸಲಾಗಿದೆ. ತಾಲೂಕಿನ ಆಲೂರು ದುದ್ದನಹಳ್ಳಿ ಕೆರೆಯ ಅಭಿವೃದ್ಧಿಗಾಗಿ ಈಗಾಗಲೇ 4 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಕೆರೆಗಳ ಕಾಮಗಾರಿ ಕೈಗೊಳ್ಳಲಾಗುವುದು. ಉಳಿದ ಕೆರೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಹುದಿನದ ಬೇಡಿಕೆಯಂತೆ ಕಾವೇರಿ 6ನೇ ಹಂತದ ಕುಡಿಯುವ ನೀರಿನ ಯೋಜನೆಯಡಿ ಜಿಲ್ಲೆಯ ನೆಲಮಂಗಲ, ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಹಳ್ಳಿ, ದೇವನಹಳ್ಳಿ ತಾಲೂಕಿನ ವಿಜಯಪುರ ಹಾಗೂ ಹೊಸಕೋಟೆಗೆ ಬಿ ಡಬ್ಲ್ಯುಎಸ್‌ಎಸ್‌ಬಿ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಸರ್ಕಾರ ಅನುಮೋದನೆ ನೀಡಿದೆ ಎಂದು ಸಚಿವರು ತಿಳಿಸಿದರು.

ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ, ಶಿವಶಂಕರ್‌, ಎಸ್ಪಿ ಸಿ.ಕೆ. ಬಾಬಾ, ಅಪರ ಜಿಲ್ಲಾಧಿಕಾರಿ ಎಚ್‌, ಅಮರೇಶ್‌, ಜಿಪಂ ಸಿಇಒ ಡಾ. ಅನುರಾಧ, ಜಿಪಂ ಉಪ ಕಾರ್ಯದರ್ಶಿ ಟಿ.ಕೆ. ರಮೇಶ್‌, ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ, ಬಯಪ ಅಧ್ಯಕ್ಷ ವಿ.ಶಾಂತಕುಮಾರ್‌, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಬಿ. ರಾಜಣ್ಣ, ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್‌ ಅಲ್ಲದೆ ದೇವನಹಳ್ಳಿ ತಹಸೀಲ್ದಾರ್‌ ಬಾಲಕೃಷ್ಣ, ಸಿಇಒ ಶ್ರೀನಾಥಗೌಡ ಉಪಸ್ಥಿತರಿದ್ದರು.

ಇದೇ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ದೊಡ್ಡಬಳ್ಳಾಪುರ ತಾಲೂಕಿನ ಲಕ್ಮೇಗೌಡ, ಓಬಮ್ಮ, ಷಫೀರ್‌ ಅಹಮದ್‌, ದೇವನಹಳ್ಳಿ ತಾಲೂಕು ವಿಜಯಪುರದ ಜೆ.ಆರ್‌.ಮುನಿವೀರಣ್ಣ, ಕೆ.ಮನೋಜ್‌, ಹೊಸಕೋಟೆ ತಾಲೂಕಿನ ಎ.ಜಾಹ್ನವಿ, ಎನ್‌.ಜಿ.ಗೋಪಾಲ್‌ ಅವರನ್ನು ಗೌರವಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕ ಬಿ.ಪುಟ್ಟಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. 

Share this article